ಗೌಪ್ಯತೆ ಮರೆತ ಮೌಲ್ಯಮಾಪಕರು: ಬಯಲೆಲ್ಲೇ ಮೌಲ್ಯಮಾಪನ

ದಾವಣಗೆರೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೌಲ್ಯಮಾಪನ ಕಾರ್ಯವು ಮಂಗಳವಾರ ಆರಂಭವಾಗಿದ್ದು, ಗೌಪ್ಯತೆ ಮರೆತ ಮೌಲ್ಯಮಾಪಕರು ಕಾಲೇಜು ಆವರಣದಲ್ಲಿ ಬಯಲಿನಲ್ಲೇ ಮೌಲ್ಯಮಾಪನ ಮಾಡಿದ ಘಟನೆ ನಡೆದಿದೆ.
ನಗರದ ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಕೇಂದ್ರ ಸ್ಥಾಪಿಸಿದ್ದು, ಮಂಗಳವಾರ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ನಡೆಯುತ್ತಿತ್ತು. ನಾಳೆಯಿಂದ ಎರಡು ದಿನ ಸಿಇಟಿ ಪರೀಕ್ಷೆ ಹಿನ್ನೆಲೆಯಲ್ಲಿ ಕಾಲೇಜಿನ ಶಿಕ್ಷಕರು ಬೆಂಚ್‌ಗಳ ಮೇಲೆ ನೋಂದಣಿ ಸಂಖ್ಯೆ ಬರೆಯುವ ಸಂದರ್ಭದಲ್ಲಿ ಗೊಂದಲ ಉಂಟಾಗಿ ಮೌಲ್ಯಮಾಪಕರು ಕಾಲೇಜಿನ ಕಟ್ಟೆಯ ಮೇಲೆ ಕುಳಿತು ಮೌಲ್ಯಮಾಪನ ಮಾಡುವುದು ಕಂಡು ಬಂದಿದ್ದು, ಶಿಕ್ಷಣ ಇಲಾಖೆಯ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿತ್ತು.
ಮೌಲ್ಯಮಾಪನ ಉಸ್ತುವಾರಿ ಅಧಿಕಾರಿಗಳು, ಬಯಲಿನಲ್ಲಿ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವುದು ಸರಿಯಲ್ಲ ಕಾಲೇಜಿನ ಮೊದಲ ಮಹಡಿಯಲ್ಲಿ ಐದು ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಬನ್ನಿ ಎಂದು ಕರೆದರೂ ಮೌಲ್ಯಮಾಪಕರು ಕಿವಿಗೊಡದೆ ಉತ್ತರ
ಪತ್ರಿಕೆಗಳನ್ನು ಮೌಲ್ಯ ಮಾಡಲಾಗುತ್ತಿತ್ತು. ಅಲ್ಲದೇ, ಗೌಪ್ಯತೆ ಕಾಪಾಡಬೇಕಾಗಿದ್ದ ಮೌಲ್ಯಮಾಪಕರು ಅಶಿಸ್ತಿನಿಂದ ಉತ್ತರ ಪತ್ರಿಕೆಗಳನ್ನು ವರ್ತಿಸುತ್ತಿರುವುದು ಕಂಡು ಬಂತು.
ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹಗಲು ರಾತ್ರಿ ಎನ್ನದೆ ಶ್ರಮಪಟ್ಟು ಓದಿ ಬರೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪಕರು ಕಾಲೇಜಿನ ಆವರಣದ ಕಟ್ಟೆಯ ಮೇಲೆ ಕುಳಿತು ಯಾವುದೇ ಮೂಲಾಜಿಗೆ ಒಳಗಾಗದೇ ಮೌಲ್ಯಮಾಪನ ಮಾಡುತ್ತಿರುವುದು ಕಂಡು ಬಂತು.