ದಾಂಡೇಲಿ: ಮನೆಯೊಂದರಲ್ಲಿ ಕೋಟಿಗಟ್ಟಲೇ ಖೋಟಾ ನೋಟು ಸಿಕ್ಕಿರುವುದು ನಗರದ ಜನತೆಯನ್ನು ಬೆಚ್ಚಿ ಬೀಳಿಸಿದೆ.
ಗಾಂಧಿನಗರದ ಮನೆಯೊಂದರಲ್ಲಿ ಈ ನೋಟಿನ ಕಂತೆಗಳು ರಾಶಿ ರಾಶಿಯಾಗಿ ಇಡಲಾಗಿತ್ತು. ಇದನ್ನು ಬಾಡಿಗೆದಾರರಾದ ಗೋವಾ ಮೂಲದ, ಸದ್ಯ ಹೈದ್ರಾಬಾದಿನಲ್ಲಿರುವ ಅರ್ಷದ್ ಖಾನ್ ಎಂಬಾತ ಇರಿಸಿದ್ದ ಎನ್ನುವದು ಮನೆಯ ಮಾಲೀಕನ ಹೇಳಿಕೆಯಾಗಿದೆ.
ಕಳೆದೊಂದು ತಿಂಗಳಿಂದ ಬಾಡಿಗೆದಾರ ಅರ್ಷದ್‌ಖಾನ್ ಬರದೇ ಇರುವುದರಿಂದ ಮನೆಯ ಮಾಲೀಕ ಬೀಗ ಮುರಿದು ನೋಡಲಾಗಿ 500 ರೂ. ಮುಖಬೆಲೆಯ ನೋಟಿನ ಕಟ್ಟುಗಳು ರಾಶಿರಾಶಿಯಾಗಿ ಕೋಣೆಯಲ್ಲಿರಿಸಿದ್ದು ಕಂಡು ಬಂದಿದೆ. ಮಾಲೀಕ ಕೂಡಲೇ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾನೆ.
ಪೊಲೀಸರು ಬಂದು ಪರಿಶೀಲನೆ ನಡೆಸಿದ್ದು, ಗೌಪ್ಯತೆ ಕಾಯ್ದುಕೊಂಡು ಕಾರ್ಯಾಚರಣೆ ಮುಂದುವರೆಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ ಪೊಲೀಸರು ಕರೆ ಮಾಡಿ ಪೋಸ್ಟ್ ಮಾಡಿದವರನ್ನು ಪ್ರಶ್ನಿಸುತ್ತಿದ್ದದ್ದು ಮತ್ತಷ್ಟು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಈ ನಕಲಿ ನೋಟುಗಳನ್ನು ಚಲಾವಣೆಗಾಗಿ ತಂದಿರಿಸಲಾಗಿತ್ತೆ? ಅಥವಾ ಇನ್ನಿತರ ಉದ್ದೇಶಗಳೇನಾದರೂ ಇತ್ತೇ? ಎನ್ನುವದು ಹೈದರಾಬಾದನಲ್ಲಿರುವ ಅರ್ಷದಖಾನ್ ವಿಚಾರಣೆಯಿಂದ ತಿಳಿದು ಬರಬೇಕಿದೆ. ಪೊಲೀಸರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆಂದು ಹೇಳಲಾಗಿದ್ದರೂ ಎಫ್‌ಐಆರ್ ದಾಖಲಿಸಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಶೀಘ್ರದಲ್ಲೇ ಎಫ್‌ಐಆರ್ ದಾಖಲಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.