ಆರೆಸ್ಸೆಸ್, ಭಾಗವತ್ ಹೆಸರು ಪ್ರಸ್ತಾಪಕ್ಕೆ ಆಕ್ಷೇಪ: ಬಾಬು ಜಗಜೀವನರಾಂ ಜಯಂತ್ಯುತ್ಸವದಲ್ಲಿ ಗದ್ದಲ

ಚಿತ್ರದುರ್ಗ: ನಗರದ ತರಾಸು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಂ ಜಯಂತ್ಯುತ್ಸವದಲ್ಲಿ ಗದ್ದಲ ನಡೆಯಿತು.
ಸಂಸದ ಗೋವಿಂದ ಕಾರಜೋಳ ತಮ್ಮ ಭಾಷಣದಲ್ಲಿ ಒಳ ಮೀಸಲಾತಿ ಜಾರಿ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎನ್ನುತ್ತ ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡಿದರು. ಜೊತೆಗೆ ಮಾದಾರ ಚನ್ನಯ್ಯ ಮಠಕ್ಕೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ ಬಳಿಕ ಒಳ ಮೀಸಲಾತಿ ಜಾರಿಗೆ ವೇಗ ದೊರೆಯಿತು ಎಂದು ಪ್ರಸ್ತಾಪಿಸಿದರು.
ತಕ್ಷಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾದಿಗ ಸಮುದಾಯದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕಾರಜೋಳ ವಿರುದ್ಧ ಘೋಷಣೆ ಕೂಗಿದರು. ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಬೇಕಿಲ್ಲ. ಒಳಮೀಸಲಾತಿ ಜಾರಿ ಆಗುತ್ತಿರುವ ಲಾಭ ಪಡೆಯುವ ಪ್ರಯತ್ನ ಸಲ್ಲದು, ಇಲ್ಲಿ ಎಲ್ಲ ಪಕ್ಷದ ಮುಖಂಡರಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ನಿಮ್ಮ ಪಕ್ಷದ ವೇದಿಕೆಯಲ್ಲಿ ರಾಜಕೀಯ ಭಾಷಣ ಮಾಡಿ, ಒಳಮೀಸಲಾತಿ ಜಾರಿಗೆ ಹೋರಾಟ ಮಾಡಿರುವುದು ಮಾದಿಗ, ದಲಿತ ಸಂಘಟನೆಗಳು. ಆದರೆ, ನೀವು ರಾಜಕೀಯ ಲಾಭಕ್ಕಾಗಿ ಆರೆಸ್ಸೆಸ್ ಹೆಸರು ಪ್ರಸ್ತಾಪಿಸುವುದು ಸರಿಯಲ್ಲ. ತಕ್ಷಣ ಮಾತು ನಿಲ್ಲಿಸಬೇಕು. ಬಾಬು ಜಗಜೀವನರಾಂ ಜಯಂತ್ಯುತ್ಸವದಲ್ಲಿ ಆದರ್ಶ ಮಾತುಗಳು ಇರಬೇಕು. ಮಹನೀಯರ ಜಯಂತ್ಯುತ್ಸವದಲ್ಲೂ ರಾಜಕೀಯ ಲಾಭ ಪಡೆಯುವ ಪ್ರಯತ್ನ ಕೆಟ್ಟ ನಡೆ ಎಂದು ದಸಂಸ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ನಾನು ಒಳಮೀಸಲಾತಿ ಹೋರಾಟವನ್ನು 30 ವರ್ಷಗಳಿಂದ ಗಮನಿಸಿದ್ದೇನೆ. ನನಗೆ ಈಗ ವಯಸ್ಸಾಗಿದೆ. ಇನ್ಮುಂದೆ ಹೆಚ್ಚು ಜವಾಬ್ದಾರಿ ನಿಮ್ಮದೇ ಆಗಿರುತ್ತದೆ ಎಂದು ಕಾರಜೋಳ ಹೇಳಿ ಸಮಾಧಾನಗೊಳಿಸಿದರು.