ಆರಂಭಿಕ ಹಂತದಲ್ಲಿಯೇ ಡಯಾಬಿಟಿಕ್ ರೆಟಿನೊಪತಿ ಪತ್ತೆ ಅವಶ್ಯ, ಜಾಗೃತಿ ಅಗತ್ಯ
ಬೆಂಗಳೂರು: ಮಧುಮೇಹ ಎಂದರೆ ಕೇವಲ ಸಕ್ಕರೆ ಮಟ್ಟ ಜಾಸ್ತಿಯಾಗುವ ಸಮಸ್ಯೆ ಮಾತ್ರವೇ ಅಲ್ಲ. ಅದು ದೇಹದ ಎಲ್ಲಾ ಅಂಗಗಳ ಮೇಲೆ ಪರಿಣಾಮ ಬೀರಬಹುದಾದ ಸಮಸ್ಯೆ. ಕಣ್ಣುಗಳ ಮೇಲೆಯೂ ಅದರ ಪರಿಣಾಮ ಉಂಟಾಗಬಹುದು ಎಂದು ಡಾ. ಪಿ. ಮಹೇಶ್ ಶಣ್ಮುಗಂ ಹೇಳಿದ್ದಾರೆ,
ಡಯಾಬಿಟಿಕ್ ರೆಟಿನೊಪತಿ ಪತ್ತೆ ಅವಶ್ಯ ಕುರಿತಂತೆ ಮಾತನಾಡಿ ಡಯಾಬಿಟಿಕ್ ರೆಟಿನೊಪತಿ ಎಂಬ ಗಂಭೀರ ಸಮಸ್ಯೆ ರೆಟಿನಾದ ಸೂಕ್ಷ್ಮ ರಕ್ತನಾಳಗಳಿಗೆ ಹಾನಿ ಮಾಡುತ್ತದೆ. ಈ ಸಮಸ್ಯೆಯ ದೊಡ್ಡ ಸವಾಲು ಏನೆಂದರೆ, ಇದು ಸೈಲೆಂಟಾಗಿ ಕಾಡುತ್ತದೆ. ನೋವು ಅಥವಾ ಲಕ್ಷಣಗಳಿರುವುದಿಲ್ಲ. ದೃಷ್ಟಿ ಕಡಿಮೆಯಾಗುವಾಗ ಆಗಲೇ ತಡವಾಗಿರುತ್ತದೆ. ಬಹಳಷ್ಟು ಜನರು ತಮಗೆ ಕಣ್ಣಿನ ಸಮಸ್ಯೆ ಕಾಣಿಸಿದಾಗ ಮಾತ್ರ ಕಣ್ಣಿ ಪರೀಕ್ಷೆ ಮಾಡಿಸುತ್ತಾರೆ. ಮುಂಜಾಗ್ರತಾಪೂರ್ವಕವಾಗಿ ಕಣ್ಣಿನ ಪರೀಕ್ಷೆ ಮಾಡುವುದು ಬಹಳ ಕಡಿಮೆ. ಆದರೆ ಈ ಸಮಸ್ಯೆಯನ್ನು ಮುಂಚಿತವಾಗಿ ಪತ್ತೆ ಮಾಡಿದರೆ ಅಂಧತ್ವ ಉಂಟಾಗುವುದನ್ನು ತಡೆಯಬಹುದು. ಹಾಗಾಗಿ ಪ್ರತಿಯೊಬ್ಬ ಮಧುಮೇಹ ಇರುವ ರೋಗಿಯೂ ಈ ಕುರಿತು ಜವಾಬ್ದಾರಿ ತೆಗೆದುಕೊಳ್ಳಬೇಕು. ನಿಯಮಿತವಾಗಿ ಪರೀಕ್ಷೆ ಮಾಡುವ ಮೂಲಕ ಮತ್ತು ಸಕಾಲದಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಡಯಾಬಿಟಿಕ್ ರೆಟಿನೊಪತಿಯನ್ನು ತಡೆಗಟ್ಟಬಹುದು ಎಂದರು.
ಇನ್ನು ಭಾರತದಲ್ಲಿ ಪ್ರಸ್ತುತ 101 ಮಿಲಿಯನ್‌ಗಿಂತ ಹೆಚ್ಚು ಜನರು ಮಧುಮೇಹ ಹೊಂದಿದ್ದಾರೆ ಎಂಬುದಾಗಿ ಲೆಕ್ಕಾಚಾರ ಹೇಳುತ್ತದೆ. 2045ರ ವೇಳೆಗೆ ಈ ಸಂಖ್ಯೆ 125 ಮಿಲಿಯನ್‌ಗೆ ಏರಬಹುದು ಎಂದೂ ಅಂದಾಜಿಸಲಾಗಿದೆ. ಮಧುಮೇಹದಿಂದ ಅನೇಕ ಇತರ ಸಮಸ್ಯೆಗಳೂ ಉಂಟಾಗುತ್ತವೆ. ಹೃದಯ ರೋಗ, ಮೂತ್ರಪಿಂಡ ಕಾಯಿಲೆ ಮತ್ತು ಡಯಾಬಿಟಿಕ್ ರೆಟಿನೊಪತಿ (ಡಿಆರ್) ನಂತಹ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಕೆಲವು ಸಮಸ್ಯೆಗಳು ತಮ್ಮ ಲಕ್ಷಣಗಳನ್ನು ತೋರಿಸುತ್ತವೆ. ಆದರೆ ಡಯಾಬಿಟಿಕ್ ರೆಟಿನೊಪತಿ ಅಥವಾ ಡಿಆರ್ ಲಕ್ಷಣ ತೋರಿಸುವುದಿಲ್ಲ ಎಂಬುದು ಆತಂಕಕಾರಿ ಸಂಗತಿಯಾಗಿದೆ. ಡಿಆರ್ ಎಂಬುದು ಕಣ್ಣಿಗೆ ಹಾನಿ ಉಂಟು ಮಾಡುವ ಸಮಸ್ಯೆಯಾಗಿದ್ದು, ಈ ಸಮಸ್ಯೆ ಸೈಲೆಂಟಾಗಿ ಕಾಡಲು ಆರಂಭಿಸುತ್ತದೆ. ಇದರಿಂದ ಕಣ್ಣಿನ ದೃಷ್ಟಿ ಕಡಿಮೆಯಾಗಿ, ಕೆಲವೊಮ್ಮೆ ಕುರುಡುತನವೂ ಉಂಟಾಗಬಹುದಾಗಿದೆ. ಮಧ್ಯವಯಸ್ಸಿನ ಹಲವರು ದೃಷ್ಟಿ ಕಳೆದುಕೊಳ್ಳಲು ಇದೇ ಪ್ರಮುಖ ಕಾರಣವಾಗಿದೆ.
ಭಾರತದ ಹಲವು ರಾಜ್ಯಗಳಲ್ಲಿ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಸಲಾದ ಸ್ಮಾರ್ಟ್ ಇಂಡಿಯಾ ಅಧ್ಯಯನದ ಭಾಗವಾಗಿ 6,000ಕ್ಕೂ ಹೆಚ್ಚು ಸಕ್ಕರೆ ಕಾಯಿಲೆ ಇರುವವರನ್ನು ಪರೀಕ್ಷಿಸಲಾಗಿತ್ತು. ಅದರಲ್ಲಿ ಶೇ.12.5 ಜನರಿಗೆ ರೆಟಿನೊಪತಿ ಇರುವುದು ಪತ್ತೆಯಾಗಿದೆ. ಅದರಲ್ಲಿ ಶೇ.4ರಷ್ಟು ಜನರಿಗೆ ದೃಷ್ಟಿ ದೋಷ ಉಂಟಾಗುವ ಗಂಭೀರ ಡಯಾಬಿಟಿಕ್ ರೆಟಿನೊಪತಿ (ವಿಟಿಡಿಆರ್) ಇರುವುದು ಆತಂಕಕಾರಿಯಾಗಿದೆ. ಅದರಿಂದ ಸಂಪೂರ್ಣ ಅಂಧತ್ವವೂ ಉಂಟಾಗಬಹುದಾಗಿದೆ . ಅಧಿಕ ರಕ್ತದಲ್ಲಿರುವ ಸಕ್ಕರೆಯಿಂದ ರೆಟಿನಾದ ಸಣ್ಣ ರಕ್ತನಾಳಗಳು ಊದಿಕೊಳ್ಳಬಹುದು, ಸೋರಿಕೆಯಾಗಬಹುದು ಅಥವಾ ಮುಚ್ಚಿಕೊಂಡು ರಕ್ತದ ಹರಿವನ್ನು ನಿಲ್ಲಿಸಿ ದೃಷ್ಟಿಯೇ ಕಳೆದುಕೊಳ್ಳುವಂತೆ ಮಾಡಬಹುದು. ಡಯಾಬಿಟಿಕ್ ರೆಟಿನೊಪತಿ ಸಾಮಾನ್ಯವಾಗಿ ಆರಂಭದಲ್ಲಿ ಯಾವುದೇ ಲಕ್ಷಣಗಳನ್ನೂ ತೋರಿಸುವುದಿಲ್ಲ. ಹೀಗಾಗಿ, ಹೆಚ್ಚಿನ ರೋಗಿಗಳಿಗೆ ಈ ಸಮಸ್ಯೆ ಇರುವುದೇ ಗೊತ್ತಾಗುವುದಿಲ್ಲ. ಹಾಗಾಗಿಯೇ ಡಿಆರ್ ಗಂಭೀರ ಹಂತಕ್ಕೆ ತಲುಪುತ್ತದೆ.
ಈ ಸಮಸ್ಯೆಯನ್ನು ಪರಿಹರಿಸಲು ಭಾರತದ ಡಯಾಬಿಟಿಸ್ ಸಂಶೋಧನಾ ಸೊಸೈಟಿ (ಆರ್ ಎಸ್ ಎಸ್ ಡಿ ಐ) ಮತ್ತು ವಿಟ್ರಿಯೋ ರೆಟಿನಲ್ ಸೊಸೈಟಿ ಆಫ್ ಇಂಡಿಯಾ (ವಿ ಆರ್ ಎಸ್ ಐ) ಒಟ್ಟಾಗಿ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಿವೆ. ಸಕ್ಕರೆ ಕಾಯಿಲೆ ಇರುವ ಎಲ್ಲರೂ ನಿಯಮಿತವಾಗಿ ಕಣ್ಣಿನ ಪರೀಕ್ಷೆ ಮಾಡಿಸಬೇಕು ಎಂದು ಈ ಮಾರ್ಗಸೂಚಿ ತಿಳಿಸುತ್ತವೆ. ಅಂಧತ್ವ ತರಬಹುದಾದ ಡಯಾಬಿಟಿಕ್ ರೆಟಿನೊಪತಿಯಿಂದ ಪಾರಾಗಲು ಪ್ರತೀ ವರ್ಷ ಕಣ್ಣಿನ ಪರೀಕ್ಷೆ ಮಾಡಿಸುವುದು ಮುಖ್ಯ ಎಂದು ಹೇಳಲಾಗಿದೆ3. ಟೈಪ್ 1 ಡಯಾಬಿಟಿಸ್ ಇರುವವರು ರೋಗ ಪತ್ತೆಯಾದ 5 ವರ್ಷಗಳ ನಂತರ ಮತ್ತು ಟೈಪ್ 2 ಇರುವವರು ರೋಗ ಗೊತ್ತಾದ ತಕ್ಷಣವೇ ಪರೀಕ್ಷೆ ಶುರು ಮಾಡಬೇಕು. ಜೊತೆಗೆ ಮಧುಮೇಹ ಇರುವ ಗರ್ಭಿಣಿಯರಿಗೆ ಗರ್ಭಾವಸ್ಥೆಯಲ್ಲಿ ಡಿಆರ್ ಉಂಟಾಗುವ ಸಾಧ್ಯತೆ ಹೆಚ್ಚಿರುವುದರಿಂದ ಅವರಿಗೆ ವಿಶೇಷ ಪರೀಕ್ಷೆಯ ಅಗತ್ಯವಿದೆ. ದೃಷ್ಟಿ ಕಳೆದುಕೊಂಡರೆ ಮತ್ತೆ ಬರುವುದಿಲ್ಲವಾದ್ದರಿಂದ ಡಯಾಬಿಟಿಸ್ ತಿಳಿಯಲು ನಿಯಮಿತವಾಗಿ ರಕ್ತ ಪರೀಕ್ಷೆ ಮಾಡುವಂತೆ ಡಿಆರ್ ಪರೀಕ್ಷೆ ಮಾಡುವುದೂ ಬಹಳ ಮುಖ್ಯ.
ಎಐ ಆಧರಿತ ನಾನ್-ಮೈಡ್ರಿಯಾಟಿಕ್ ಫಂಡಸ್ ಕ್ಯಾಮೆರಾಗಳಂತಹ ಉಪಕರಣಗಳ ಮೂಲಕ ತ್ವರಿತವಾಗಿ ಕಣ್ಣಿನ ಪರೀಕ್ಷೆ ಮಾಡಬಹುದಾಗಿದ್ದು, ಈ ಮೂಲಕ ವೈದ್ಯರು ಯಾರನ್ನು ಕಣ್ಣಿನ ತಜ್ಞರ ಬಳಿ ಕಳುಹಿಸಬೇಕು ಎಂದು ಸುಲಭವಾಗಿ ತಿಳಿಯಬಹುದು . ಮುಂಚಿತವಾಗಿ ಡಿಆರ್ ಪತ್ತೆ ಮಾಡುವ ಮೂಲಕ, ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಮೂಲಕ ಮತ್ತು ಸರಿಯಾದ ಪರೀಕ್ಷಾ ವ್ಯವಸ್ಥೆಯ ಮೂಲಕ ಡಿಆರ್ ಅನ್ನು ನಿಯಂತ್ರಿಸಬಹುದಾಗಿದೆ. ವೈದ್ಯರು ಮತ್ತು ರೋಗಿಗಳು ಒಟ್ಟಾಗಿ ಕೆಲಸ ಮಾಡಿದರೆ ಈ ಸಮಸ್ಯೆಯಿಂದ ದೃಷ್ಟಿ ಕಳೆದುಕೊಳ್ಳುವ ಲಕ್ಷಾಂತರ ಜನರನ್ನು ರಕ್ಷಿಸಬಹುದಾಗಿದೆ.