ಸೇಡಂ: ಬಿಜೆಪಿ ಪಕ್ಷದಲ್ಲಿ ವಂಶಾಡಳಿತ ಭ್ರಷ್ಟಾಚಾರಿಗಳಿಗೆ ಅಧಿಕಾರದ ಚುಕ್ಕಾಣಿ ನೀಡದೇ ನಿಷ್ಠಾವಂತರಿಗೆ ಹಾಗೂ ಶುದ್ಧ ಹಸ್ತರಿಗೆ ಅಧಿಕಾರ ನಿಡಬೇಕು. ಬಿಜೆಪಿ ಗಂಗೆಯಂತೆ ಪವಿತ್ತವಾಗಬೇಕು ಎನ್ನುವ ಉದ್ದೇಶದಿಂದ ಹೋರಾಟ ಮಾಡುತ್ತಿದ್ದೇನೆ ಎಂದು ವಿಜಯಪುರದ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೇಳಿದರು.
ಸೇಡಂ ಸಮೀಪದ ಬೀರನಹಳ್ಳಿ ಕ್ರಾಸ್ ಪ್ರಕೃತಿ ನಗರದಲ್ಲಿ ಆಯೋಜಿಸಿದ 7ನೇ ಭಾರತೀಯ ಸಂಸ್ಕೃತಿ ಉತ್ಸವ ಹಾಗೂ ಸ್ವರ್ಣ ಜಯಂತಿಯ ಪ್ರಕೃತಿ ಮತ್ತು ನಾವು ಸಮಾವೇಶದಲ್ಲಿ ಭಾಗಿಯಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣರಾದವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಲಾಗುತ್ತಿದೆ. ಬಿಜೆಪಿಯಲ್ಲಿ ವಂಶಾಡಳಿತ ಕೊನೆಗೊಳಿಸಿ ಭ್ರಷ್ಟಾಚಾರ ರಹಿತ ಹಾಗೂ ಹಿಂದುತ್ವ ಹಿನ್ನೆಲೆ ಉಳ್ಳವರಿಗೆ ಅಧಿಕಾರ ಸಿಗಲಿ. ಇದರಿಂದ ನಮಗೆ ಯಾವುದೇ ತೊಂದರೆ ಇಲ್ಲ. ಪಕ್ಷದ ಸಂಘಟನೆ ಹಾಗೂ ದೇಶದ ಹಿತಕ್ಕಾಗಿ ನಮ್ಮ ಹೋರಾಟ ಆರಂಭಿಸಲಾಗಿದೆ ಎಂದರು.
ಹಲವು ವರ್ಷಗಳವರೆಗೆ ಅಧಿಕಾರ ಅನುಭವಿಸಿದ ಈ ಭಾಗದ ರಾಜಕಾರಣಿಗಳು ಸ್ಥಳಿಯರಿಗೆ ಗೊತ್ತಾಗದಂತೆ ಬೇರೆ ದೇಶಗಳಲ್ಲಿ ತಮ್ಮ ಆಸ್ತಿ ಮತ್ತು ಕಾರ್ಖಾನೆಗಳನ್ನು ಆರಂಭಿಸುತ್ತಿದ್ದಾರೆ. ಆದರೆ, ತಾವು ಈ ಭಾಗದ ಅಭಿವೃದ್ಧಿಗಾಗಿ ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಿದ್ದೇನೆ. ಇದನ್ನು ಸಹಿಸದ ಕೆಲವರು ಮಾಲಿನ್ಯ ನಿಯಂತ್ರಣ ಮಂಡಳಿಯ ಮೂಲಕ ತಡೆಯಲು ಮುಂದಾಗಿದ್ದಾರೆ. ನ್ಯಾಯಾಲಯ ಪುನಾರಾರಂಭಕ್ಕೆ ಆದೇಶ ನೀಡಿದ್ದು ಶೀಘ್ರವಾಗಿ ಆರಂಭಿಸಲಾಗುವುದು ಎಂದರು.
ಸಚಿವ ಈಶ್ವರ ಖಂಡ್ರೆಯವರು ಕಡಿಮೆ ಬೆಲೆಗೆ ಕಬ್ಬು ಖರೀದಿಸುತ್ತಿದ್ದಾರೆ. ಆದರೆ ತಾವು ಹೆಚ್ಚಿನ ಬೆಲೆಗೆ ಕಬ್ಬು ಖರೀದಿಸುತ್ತಿರುವದರಿಂದ ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದರು.
370 ಹಳ್ಳಿಗಳು ಕಾರ್ಖಾನೆ ವ್ಯಾಪ್ತಿಯಲ್ಲಿದ್ದು ಅವುಗಳ ಅಭಿವೃದ್ಧಿಗೆ ಶ್ರಮಿಸಲಾಗುತ್ಯದೆ. ಅಲ್ಲದೇ ಬಿಜಾಪುರದಲ್ಲಿ ಮಾಡಿರುವಂತೆ ಈ ಭಾಗದ ಶಾಲಾ ವಿದ್ಯಾರ್ಥಿಗಳ ಜೀವ ವಿಮೆ ಮಾಡಿಸಲಾಗುವುದು ಎಂದರು. ವರ್ಷದ ಹನ್ನೆರಡು ತಿಂಗಳು ಕಾರ್ಖಾನೆ ನಡೆಯಲಿದ್ದು ರೈತರಿಂದ ಕಬ್ಬು ಜೊತೆಗೆ ಅಕ್ಕಿ ಹಾಗೂ ಮೆಕ್ಕೆಜೋಳ ಖರೀದಿಸಲಾಗುವುದು ಎಂದರು.