ಪೊಲೀಸ್ ಅಧಿಕಾರಿಯಾದ ನಾಲ್ಕು ಮಕ್ಕಳು

ವಿಶ್ವಾಸ್, ಜೀವನ್ ಕುಮಾರ್, ದಾನಮ್ಮ ಮತ್ತು ದಿವ್ಯಾಶ್ರೀ ಇಂದು “ಒಂದು ದಿನದ ಪೊಲೀಸ್ ಅಧಿಕಾರಿ” ಆಗಿ ಸೇವೆ ಸಲ್ಲಿಸಿದರು

ಬೆಂಗಳೂರು: ನಾಲ್ಕು ಮಕ್ಕಳು ಇಂದು ಪೊಲೀಸ್ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ಹಾಗೂ ಪರಿಹಾರ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಇಂದಿನ ಕಾರ್ಯಕ್ರಮದಲ್ಲಿ ನಾಲ್ಕು ಮಂದಿ ಕ್ಯಾನ್ಸರ್ ಪೀಡಿತ ಮಕ್ಕಳು ಪೊಲೀಸ್ ಕಮಿಷನರ್ ಎದುರು ಪೊಲೀಸ್ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು. ವಿಜಯಪುರದ 10ನೇ ತರಗತಿ ವಿದ್ಯಾರ್ಥಿನಿ ಪಲ್ಲವಿ, ಕೊಪ್ಪಳದ ದಿವ್ಯಶ್ರೀ, 9ನೇ ತರಗತಿಯ ಮೈಸೂರಿನ ವಿಶ್ವಾಸ್ ಮತ್ತು 7ನೇ ತರಗತಿ ವಿದ್ಯಾರ್ಥಿ ತುಮಕೂರಿನ ಜೀವನ್ ಕುಮಾರ್ ಎಂಬವರನ್ನು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ ಹೂಗುಚ್ಛ ನೀಡಿ, ಸ್ವಾಗತಿಸಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಕನಸುಗಳನ್ನು ನಿಜವಾಗಿಸಲು ಒಂದು ಹೆಜ್ಜೆ! ವಿಶ್ವ ಕ್ಯಾನ್ಸರ್ ದಿನದಂದು, ಬೆಂಗಳೂರು ನಗರ ಪೊಲೀಸ್ ಇಲಾಖೆಯು ಪರಿಹಾರ್ ಮತ್ತು ಕಿಡ್ವಾಯಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಆಂಕೋಲೊಜಿ ಸಹಯೋಗದಲ್ಲಿ ಕಿಡ್ಸ್‌ ವಾರಿಯರ್ಸ್‌ (ಪೀಡಿಯಾಟ್ರಿಕ್ ಕ್ಯಾನ್ಸರ್‌ ಮಕ್ಕಳ) ಕನಸುಗಳ ಪೂರ್ಣಗೊಳಿಸಲು ಗೌರವಾನುಭವಿಗಳಾಗಿದ್ದೇವೆ. ಇಂದು ವಿಶ್ವಾಸ್, ಜೀವನ್ ಕುಮಾರ್, ದಾನಮ್ಮ ಮತ್ತು ದಿವ್ಯಾಶ್ರೀ (12 ರಿಂದ 14 ವರ್ಷದ ಮಕ್ಕಳು) ಅವರು ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ “ಒಂದು ದಿನದ ಪೊಲೀಸ್ ಅಧಿಕಾರಿ” ಆಗಿ ಸೇವೆ ಸಲ್ಲಿಸುವ ಅಪರೂಪದ ಅನುಭವ ಪಡೆಯಲಿದ್ದಾರೆ. ಈ ಹೃದಯಸ್ಪರ್ಶಿ ಕಾರ್ಯಕ್ರಮವು ಈ ಧೈರ್ಯಶಾಲಿ ಮಕ್ಕಳಿಗೆ ಸ್ಫೂರ್ತಿ ನೀಡಲು ಮತ್ತು ಸಂತೋಷ ತರಲು ಉದ್ದೇಶಿತವಾಗಿದೆ. ಇದರೊಂದಿಗೆ ಟ್ರಾಫಿಕ್ ಪೊಲೀಸ್ ಮ್ಯೂಸಿಯಂ ಭೇಟಿಯ ಮೂಲಕ ರಸ್ತೆ ಸುರಕ್ಷತೆ ಮತ್ತು ಜನರ ಪ್ರಾಣ ಉಳಿಸಲು ಬೆಂಗಳೂರು ಪೊಲೀಸರು ಹೇಗೆ ಕೆಲಸ ನಿರ್ವಹಿಸುತ್ತಾರೆ ಎಂಬುವುದನ್ನು ಅರ್ಥೈಸುವುದು ಈ ಕಾರ್ಯದ ಪ್ರಮುಖ ಭಾಗವಾಗಿದೆ ಎಂದಿದ್ದಾರೆ.