ಡೆತ್‌ನೋಟ್ ಬರೆದಿಟ್ಟು ಗ್ರಾ.ಪಂ. ಸದಸ್ಯ ಆತ್ಮಹತ್ಯೆ

ಕಲಬುರಗಿ: ಹಣಕಾಸು ವಿಷಯದಿಂದ ಮನನೊಂದು ಗ್ರಾಮ ಪಂಚಾಯತಿ ಸದಸ್ಯನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯ ತಿಲಕ್ ನಗರದಲ್ಲಿ ನಡೆದಿದೆ.
ಭೂಪಾಲತೆಗನೂರ ಗ್ರಾಮ ಪಂಚಾಯತಿ ಸದಸ್ಯ ಮಹೇಶ ಗುತ್ತೇದಾರ (೩೬) ಆತ್ಮಹತ್ಯೆ ಮಾಡಿಕೊಂಡವನು ಎಂದು ತಿಳಿದು ಬಂದಿದೆ.
ಮಹೇಶ ಅವರು ತಮಗೆ ಬೇಕಾದ ಗೆಳೆಯರಿಗೆ ಮತ್ತು ಸಂಬಂಧಿಕರಿಗೆ ಮಧ್ಯವರ್ತಿಯಾಗಿ ಬ್ಯಾಂಕ್‌ಗಳಿಂದ ಲೋನ್ ಮಾಡಿಸುತ್ತಿದ್ದರು. ಹಣಕಾಸಿನ ವ್ಯವಹಾರದಲ್ಲಿ ಏರುಪೇರಾದಾಗ ತಮ್ಮ ದೊಡ್ಡಮನ ಮಗ ಸೋಮಶೇಖರ ಹಾಗೂ ಅವರ ಗೆಳೆಯರಾದ ಸುರೇಶ ಸಂಗೊಳಗಿ, ಪ್ರಭು ದೊಡ್ಡಮನಿ ಸೇರಿದಂತೆ ಮತ್ತಿತರರಿಂದ ಹಣ ಪಡೆದು ಡೇನಿಯಲ್ ಸ್ಯಾಮವೇಲ್ ಎಂಬುವವರಿಗೆ ಲೋನ್ ಮಾಡಿಸುವಂತೆ ಹಣ ನೀಡಿದ್ದರು. ಆದರೆ ಡೇನಿಯಲ್ ಸ್ಯಾಮವೇಲ್ ಲೋನ್ ಮಾಡಿಸದೆ ಮತ್ತು ಹಣ ಮರಳಿ ನೀಡದೇ ಇರುವುದರಿಂದ ನೊಂದು ಡೆತ್ ನೋಟ್ ಬರೆದಿಟ್ಟು ಮನೆಯ ಬೆಡ್‌ರೂಮ್‌ನಲ್ಲಿ ಲುಂಗಿಯಿಂದ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಮೃತನ ಪತ್ನಿ ಶಶಿಕಲಾ ಗುತ್ತೇದಾರ ಅವರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.