ಮಂಗಳೂರು: ರಾತ್ರಿ ಗಸ್ತಿನಲ್ಲಿದ್ದ ಉಳ್ಳಾಲ ಪೊಲೀಸ್ ಠಾಣೆಯ ಪಿಎಸ್‌ಐ ನೇತೃತ್ವದ ಬೀಟ್ ಪೊಲೀಸ್ ಜೀಪಿನಿಂದಲೇ ವಾಕಿಟಾಕಿಯೊಂದನ್ನ ಕಳ್ಳರು ಕದ್ದೊಯ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಜ. ೨೨ರಂದು ಉಳ್ಳಾಲ ಪೊಲೀಸ್ ಠಾಣೆ ಪಿಎಸ್‌ಐ ಧನರಾಜ್ ಅವರು ರಾತ್ರಿ ಪಾಳಿ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ತಮ್ಮ ಜೊತೆ ಇಲಾಖೆಗೆ ಸೇರಿರುವ ಬೀಟ್-೩ ಎಂದು ಬರೆದಿದ್ದ ಮೋಟೊರೋಲ ಕಂಪನಿಯ ವಾಕಿಟಾಕಿಯನ್ನ ಕೊಂಡೊಯ್ದಿದ್ದರು. ಪಂಪ್‌ವೆಲ್‌ಗೆ ತೆರಳಿದ್ದ ಪಿಎಸ್‌ಐ ಧನರಾಜ್ ಅವರು ಜೀಪನ್ನ ತಾನೇ ಚಲಾಯಿಸಿ ಮತ್ತೆ ಉಳ್ಳಾಲದ ಕಡೆಗೆ ಬಂದಿದ್ದಾರೆ. ರಾತ್ರಿ ೧೧.೪೫ರ ವೇಳೆ ದಾರಿ ಮಧ್ಯದ ಕಲ್ಲಾಪು ಗ್ಲೋಬಲ್ ಮಾರ್ಕೆಟ್ ಬಳಿಯ ಹೆದ್ದಾರಿ ಬದಿಯಲ್ಲಿ ಜನರು ಗುಂಪು ಸೇರಿದ್ದರಿಂದ ಧನರಾಜ್ ಅವರು ಪೊಲೀಸ್ ವಾಹನವನ್ನ ನಿಲ್ಲಿಸಿದ್ದಾರೆ. ಪೊಲೀಸ್ ಜೀಪಿನ ಸೀಟಿನಲ್ಲಿ ವಾಕಿಟಾಕಿಯನ್ನು ಇಟ್ಟು ಕೆಳಗಿಳಿದಿದ್ದ ಪಿಎಸ್‌ಐ ಧನರಾಜ್ ಅವರು ಹೆದ್ದಾರಿಯಲ್ಲಿ ಜಮಾಯಿಸಿದ್ದ ಜನರನ್ನ ಚದುರಿಸಿ ಮತ್ತೆ ಜೀಪ್ ಏರಿದಾಗ ವಾಕಿಟಾಕಿ ಕಳವಾಗಿತ್ತು.
ಬೀಟ್-೩ ಎಂದು ಬರೆದಿದ್ದ ಮೋಟೋರೋಲ ಕಂಪನಿಯ ವಾಕಿಟಾಕಿ ಕಳವಾಗಿರುವ ಬಗ್ಗೆ ಪಿಎಸ್‌ಐ ಧನರಾಜ್ ತಾನು ಕರ್ತವ್ಯ ನಿರ್ವಹಿಸುತ್ತಿರುವ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ. ಕೋಟೆಕಾರು ವ್ಯ.ಸೇ.ಸ. ಸಂಘದ ಕೆ.ಸಿ ರೋಡ್ ಶಾಖೆಯಲ್ಲಿ ದರೋಡೆ ನಡೆಸಿದ ಪ್ರಮುಖ ಕಿಂಗ್ ಪಿನ್ ಆರೋಪಿಗಳನ್ನ ಬಂಧಿಸಲು ಪೊಲೀಸರು ಹೆಣಗಾಟ ನಡೆಸುತ್ತಿರುವ ಸಂದರ್ಭದಲ್ಲಿ ಪೊಲೀಸರ ವಾಕಿಟಾಕಿಯೇ ಕಳವಾಗಿರುವುದು ಭಾರೀ ಸುದ್ದಿಯಾಗಿದೆ.