ಜಯಂತ್ ಎಂಬ ಭಾವಗೀತೆಗೆ ಭಾವಚಿತ್ರದ ಚೌಕಟ್ಟು

0
36

ಯೋಗರಾಜ್ ಭಟ್
ನಾನಾಗ ಒಬ್ಬ ಓದುಗ. ಅವರೋ ಸ್ಟಾರ್ ರೈಟರ್. ಅದ್ಭುತ ಕಥೆಗಳನ್ನು ಬರೆಯುತ್ತಿದ್ದ ಅವರ ಬಗ್ಗೆ ಆಸಕ್ತಿ, ಭೇಟಿ ಮಾಡಬೇಕೆಂಬ ಬಯಕೆ ಆಗಲೇ ಉಂಟಾಗಿತ್ತು. ಅದೇನೋ ಅದೆಲ್ಲವೂ ಆಗಿಯೇ ಹೋಯ್ತು. ಜಯಂತರು ನನ್ನ ಸಿನಿಮಾಗೆ ಹಾಡು ಬರೆದರು. ನಮ್ಮ ಜೋಡಿ ಕ್ಲಿಕ್ ಆಯ್ತು. ಸಾಕಷ್ಟು ಸಮಾನ ಆಸಕ್ತಿಗಳು ಇದ್ದಿದ್ದರಿಂದ ಸ್ನೇಹ, ಹರಟೆ ಒಡನಾಟವೂ ಸಾಕಷ್ಟಾಯ್ತು.
ಕಾಯ್ಕಿಣಿಯವರದ್ದು ತುಂಬ ಸೂಕ್ಷ್ಮ ಹಾಗೂ ಸ್ನೇಹಪರ ವ್ಯಕ್ತಿತ್ವ. ಸೆನ್ಸ್ ಆಫ್ ಹ್ಯೂಮರ್ ಅನ್ನೋದು ಅವರ ತುದಿ ನಾಲಗೆಯ ಮೇಲೆ ಲಾಸ್ಯವಾಡುತ್ತಿರುತ್ತದೆ. ನನಗೂ ಅದು ತುಂಬ ಹಿಡಿಸುವಂಥದ್ದು. ಹೀಗಾಗಿ ನಾನು ಅವರು ಒಟ್ಟಿಗೆ ಸಾಕಷ್ಟು ಸಮಯ ಕಳೆದಿದ್ದೇವೆ. ತೇಜಸ್ವಿಯವರ ಮನೆಗೆ ಹೋಗಿದ್ದು, ಹಿಂದಿ ಸಿನಿಮಾ ಮಾಡಬೇಕೆಂದು ನಾನು ತಿಟ್ಟು ಹತ್ತಿಕೊಂಡು ಅಡ್ಡಾಡುತ್ತಿದ್ದಾಗ. ಅವರೂ ನನ್ನ ಕೂಡೆ ಮುಂಬೈಗೆ ಬಂದಿದ್ದರು. ಗಾಳಿಪಟ ಸಿನಿಮಾಗೆಂದು ಲೊಕೆಷನ್ ಹುಡುಕಾಟ ಮಾಡುತ್ತಿದ್ದಾಗ ಜೊತೆಗಿದ್ದರು. ರಾಜ್ಯ ಅಂತಲ್ಲ, ದೇಶ ಅಂತಲ್ಲ… ಹೀಗೇ ಎಷ್ಟೋ ತಿಕ್ಕಲು ತಿರುಗುವ ತಾಣಗಳಿಗೆ ಇಬ್ಬರೂ ಹೋಗಿ ಅಡ್ಡಾಡಿಕೊಂಡು ಬಂದಿದ್ದೇವೆ. ಅನಿಸುತಿದೆ… ಹಾಡನ್ನು ಬರೆದು ತಿದ್ದಿ-ತೀಡಿ ಮಾಡುವ ದಿನಗಳಲ್ಲಿ ನನ್ನ ಕಾರು ಕೆಟ್ಟು ನಾ ರಸ್ತೆಯಲ್ಲಿ ನಿಂತಿದ್ದೆ. ಅದನ್ನು ಅವರು ತಳ್ಳಿ ಸ್ಟಾರ್ಟ್ ಮಾಡಲು ಯತ್ನಿಸಿದ್ದರು. ಆಗ ಅವರಲ್ಲಿ ಒಬ್ಬ ಆಪದ್ಬಾಂಧವ ಕಂಡ. ಅವತ್ತಿಗೂ ಇವತ್ತಿಗೂ ಅದು ನಿನ್ನೆಯಷ್ಟೇ ನಡೆದಂತೆ ನೆನಪಾಗುತ್ತದೆ.
ನಮಗಿನ್ನೂ ವಯಸ್ಸೇ ಆಗಿಲ್ಲ ಅನ್ನೋದು ನನ್ನ ಶುದ್ಧಾತಿಶುದ್ಧ ನಂಬಿಕೆ. ನೋಡಿದರೆ ಜಯಂತರಿಗೆ ಎಪ್ಪತ್ತು ಎಂದು ಹೆದರಿಸುತ್ತಿದ್ದೀರಿ. ಕಾಯ್ಕಿಣಿಯವರನ್ನು ಭೇಟಿಯಾದಾಗಲೇ ಅದು ಇಪ್ಪತ್ತಾ ಎಪ್ಪತ್ತಾ ಅನ್ನೋದನ್ನು ಸ್ಪಷ್ಟಪಡಿಸಿಕೊಳ್ಳಬೇಕಿದೆ. ಯಾಕೆಂದರೆ ನನಗಂತೂ ಅವರು ಹಾಗೆ ಕಾಣಿಸುತ್ತಿಲ್ಲ.
ಈ ಹಿಂದಿನ ಅವರ ಹುಟ್ಟುಹಬ್ಬದ ದಿನಗಳಲ್ಲಿ ಅವರನ್ನು ನೋಡಿದ್ದೇನೆ. ಹುಟ್ಟಿದ್ದನ್ನೇ ಮರೆತವರಂತೆ ಕೆರೆದುಕೊಳ್ಳಲೂ ಆಗದಷ್ಟು ಕೆಲಸಗಳನ್ನು ಮೈಮೇಲೆ ಸುರುವಿಕೊಂಡಿರುತ್ತಾರೆ. ಈ ಸಲದ ಹುಟ್ಟಿದ ಹಬ್ಬದ ದಿನ ಕೂಡ ಅವರಿಗೆ ಕೆರೆದುಕೊಳ್ಳುವ ಸವಡು ಸಿಗಬಾರದು. ಅದೇ ನನ್ನ ಬಯಕೆ. ಸೃಜನಶೀಲ ಮನಸ್ಸೊಂದು ಸದಾ ಚಟುವಟಿಕೆಯಲ್ಲಿದ್ದರೆ ಅದರಿಂದ ಸಾಂಸ್ಕೃತಿಕ ಕ್ಷೇತ್ರ ದಿವಿನಾಗುತ್ತದೆ, ಸಹೃದಯ ಹಸನಾಗುತ್ತಾನೆ.
ಜಯಂತ್ ಕಾಯ್ಕಿಣಿ ಎಂದೊಡನೆ ನನಗೆ ಮನಸ್ಸು ಹಿಂದಕ್ಕೋಡುತ್ತದೆ. ನನಗೆ ಈಗಲೂ ಎಷ್ಟೋ ಬಾರಿ ನೆನಪಾಗುವುದು ಒಂದು ಪುಟಾಣಿ ಭಾವಚಿತ್ರ! ಅದನ್ನು ನಾಸ್ಟಾಲ್ಜಿಯಾ ಎಫೆಕ್ಟ್ ಅನ್ನಿ, ಮಧುರ ಸ್ಮೃತಿ ಅನ್ನಿ… ಎಂಥದ್ದೋ. ಒಟ್ಟಿನಲ್ಲಿ ಜಯಂತ್ ಕಾಯ್ಕಿಣಿ ಎಂದೊಡನೆ ನನಗೆ ಪತ್ರಿಕೆಗಳಲ್ಲಿ ಅವರ ಕಥೆಯ ಜೊತೆಗೆ ಪ್ರಕಟವಾಗುತ್ತಿದ್ದ ಅವರ ಪುಟ್ಟ ಭಾವಚಿತ್ರವೇ ಕಣ್ಣೆದುರು ಬರುತ್ತದೆ. ಅವರ ಮುಖದಲ್ಲಿ ಒಂದು ತುಂಟ ನಗು ಕಾಣಿಸುತ್ತಿತ್ತು. ಅದು ಮನಮೋಹಿಸುವಂತಿರುತ್ತಿತ್ತು; ಥೇಟ್ ಅವರ ಕಥೆಗಳ ಹಾಗೆಯೇ…
ಅವರು ಕನ್ನಡ ಮಾಸಿಕಗಳಲ್ಲಿ ಹಾಗೂ ವಾರಪತ್ರಿಕೆಗಳಲ್ಲಿ ಬರೆಯುತ್ತಿದ್ದ ಎಲ್ಲವನ್ನೂ ಓದುತ್ತಿದ್ದೆ. ಸರಿಸುಮಾರು ೧೯೯೩ ಅಥವಾ ಅದಕ್ಕೂ ಹಿಂದೆ ಬರೆದಿದ್ದೆಲ್ಲ ಓದಿದ್ದೇನೆ. ಇದೊಂಥರ ಬರಹಗಳ ಹಾಗೂ ಓದುಗನ ಬಾಂಧವ್ಯದ ಕತೆ ಎನ್ನಬಹುದು. ಅವರು ಕಥೆಗಾರ, ಭಾಷಣಕಾರ, ಲೇಖಕ, ಕವಿ ಇದಷ್ಟೇ ಅಲ್ಲ… ಜಯಂತರಲ್ಲಿ ಅದನ್ನು ಹೊರತುಪಡಿಸಿಯೂ ಸಾಕಷ್ಟು ಸಾಧ್ಯತೆಗಳಿವೆ. ಹಿಂದೊಮ್ಮೆ ವಿಷುಯಲ್ ಮೀಡಿಯಾ ಕಡೆಗೂ ಹೊರಳಿದ್ದರು. ಆದರೆ ಅದೇಕೋ ಗೊತ್ತಿಲ್ಲ, ದೋಸೆ ಹೆಂಚಿನ ಮೇಲೆ ಕೂತಂತೆ ತಕ್ಷಣಕ್ಕೇ ಎದ್ದುಬಿಟ್ಟರು. ಅವರು ಸಿನಿಮಾ ನಿರ್ದೇಶನ ಮಾಡಬಹುದಿತ್ತು. ಈಗಲೂ ಮಾಡಬಹುದು ಅನ್ನೋದು ನನ್ನ ನಂಬಿಕೆ.
ನಮ್ಮಿಬ್ಬರನ್ನೂ ಬೆಸೆದ ನಂಟೇನು ಎಂದು ಒಮ್ಮೊಮ್ಮೆ ಆಲೋಚಿಸುತ್ತೇನೆ. ಅವರನ್ನು ನಾನು ಮುಂಗಾರು ಮಳೆ ಸಿನಿಮಾಗೆ ಹಾಡು ಬರೆದುಕೊಡುವಂತೆ ಕೇಳಲು ಪ್ರೇರೇಪಣೆ ಏನು ಎಂಬುದನ್ನು ಹುಡುಕಿ ನೋಡಿದರೆ… ಅವರು ಉತ್ತರ ಭಾರತಕ್ಕೆ ಕೆಲಸ ಹುಡುಕಿ ಹೋದವರು. ಅಲ್ಲೇ ದುಡಿಮೆ ಮಾಡಿ ಅನುಭವ ಸಂಪಾದಿಸಿ ಮರಳಿ ಬಂದರು. ನಾನೂ ನನ್ನ ೨೦ ಚಿಲ್ರೆ ವಯಸ್ಸಲ್ಲಿ ಉತ್ತರ ತಲುಪುವ ಪ್ರಯತ್ನ ಮಾಡಿದ್ದೆ. ಆದರೆ ಉತ್ತರಕ್ಕಿಂತ ಪ್ರಶ್ನೆಗಳೇ ಜಾಸ್ತಿಯಾಗಿ ವಾಪಸ್ಸು ಬಂದುಬಿಟ್ಟೆ. ಈ ಉತ್ತರ ಭಾರತದ ಕನೆಕ್ಷನ್ ಎಲ್ಲೋ ಲಿಂಕ್ ಆದಂತಿದೆ. ನನಗೋ ಉತ್ತರ ಭಾರತದ ಸಂಗೀತ ವಿಪರೀತ ಇಷ್ಟ. ಅವರೂ ಹಾಗೆಯೇ ಅನ್ನಿಸ್ತು. ಏನೋ ಸಿಂಕ್ ಆಗಬಹುದು ನೋಡೋಣ ಎಂದು ಮನೆಗೆ ಹೋಗಿ ಹಾಡು ಬರೆಯಲು ಕೇಳಿದೆ. ಇತ್ತ ನಮ್ಮ ಸಂಗೀತ ನಿರ್ದೇಶಕ ಮನೋಮೂರ್ತಿ ಕೂಡ ಉತ್ತರ ಸಂಗೀತದ ಭಕ್ತರು. ಈ ಎಲ್ಲವೂ ಕೂಡಿಕೊಂಡು ನಮ್ಮ ಅಪರೂಪದ ಸಂಗೀತ ಪಯಣ ಶುರು ಆಯ್ತು.
ಜಯಂತ್ ಕಾಯ್ಕಿಣಿ ಸಾಕಷ್ಟು ಹಾಡುಗಳನ್ನು ಬರೆದಿದ್ದಾರೆ. ಅವು ಕಾಟಾಚಾರದ ಸಾಲುಗಳಲ್ಲ. ಅದರ ಗುಣಮಟ್ಟ ಉತ್ಕೃಷ್ಟ. ಈ ಹಿಂದಿನ ನೂರಾರು ವರ್ಷಗಳಿಗೆ ಹಾಗೂ ಮುಂದಿನ ನೂರಾರು ವರ್ಷಗಳಿಗೆ ಕನ್ನಡದ ಸೌರಭ, ಬನಿ, ಆಹ್ಲಾದ ಸೂಸುವ ಅಸಂಖ್ಯ ಗೀತೆಗಳನ್ನು ಅವರು ಉದಾಹರಣೆ ಥರ ನೀಡಿದ್ದಾರೆ. ಅವರ ಪ್ರಭಾವಳಿ ಹಲವಾರು ಕನ್ನಡ ಮನಸ್ಸುಗಳನ್ನು ಉದ್ದೀಪಿಸಿದೆ. ಅದಂತೂ ನಿಸ್ಸಂಶಯ. ನಾನು ಒಬ್ಬ ಕನ್ನಡ ಕೇಳುಗನಾಗಿ ತುಂಬ ಆನಂದಪಟ್ಟಿದ್ದೇನೆ. ಅವರ ಸಾಹಿತ್ಯ ಸಿನಿಮಾ ಹಾಗೂ ಬದುಕಿನ ಮೋಹ ಗಾಢವಾದದ್ದು. ಜೊತೆಗೆ ಪೊಯೆಟ್ರಿ ಹಾಗೂ ನಾಟಕ ಬರವಣಿಗೆಯಲ್ಲಿ ಅವರ ಗತ್ತು ಗೈರತ್ತಿಗೆ ಹೋಲಿಕೆಯೇ ಇಲ್ಲ.
ಎಲ್ಲ ಪ್ರಕಾರಗಳಲ್ಲೂ ಕೈ ಆಡಿಸಿರುವ ಜಯಂತ್ ಕಾಯ್ಕಿಣಿ, ಇಲ್ಲಿಯವರೆಗೂ ಕಾದಂಬರಿ ಮಾತ್ರ ಬರೆದಿಲ್ಲ. ಆ ಬಗ್ಗೆ ನನಗೂ ಬೇಸರವಿದೆ. ಚೆನ್ನಾಗಿ ಒಗ್ಗಬಹುದು ಅಂತ ನನ್ನ ಅನಿಸಿಕೆ. ಆದರೆ ಅವರು ಕಾದಂಬರಿ ರಚನೆಗೆ ಅಂತ ಹೊರಟಾಗ ಮೆಂಟಲಿ ಹೈಪರ್ ಆಗ್ತಾರೋ ಏನೋ… ಸಾವಿರ ಪುಟ ಗೀಚಾಟ ಹಾಗೂ ಸಹನೆ ಯಾವನಿಗೆ ಬೇಕು ಅಂತನ್ನಿಸಿ ಹತ್ತು ಪುಟಕ್ಕೇ ಕೈಮುಗಿದು ಬಿಡ್ತಾರೋ ಏನೋ…
ಕಡಲು, ತೀರ, ಅಲೆಗಳು ಅವರ ಬರವಣಿಗೆಯಲ್ಲಿ ಹಾಸುಹೊಕ್ಕು. ಅದು ಅವರ ಬದುಕು, ಬರವಣಿಗೆ ರೂಪಿಸಿರುವಂಥದ್ದು. ಬಿಡುಗಡೆಯಾಗಬೇಕಿರುವ ನನ್ನ ಮನದ ಕಡಲು ಚಿತ್ರದ ಶೀರ್ಷಿಕೆಯ ವಿನ್ಯಾಸ ಅವರದ್ದೇ ಕೈಬರಹ. ಜಯಂತರು ಇನ್ನೂ ನೂರ್ಕಾಲ ಇಷ್ಟು ಖುಷಿ, ಲವಲವಿಕೆಯಿಂದ ಬಾಳಲಿ.

(ನಿರೂಪಣೆ: ಗಣೇಶ್ ರಾಣೆಬೆನ್ನೂರು)

Previous articleಹೆಬ್ಬಾಳ್ಕರ್ ಆರೋಗ್ಯ ವಿಚಾರಿಸಿದ ಶಿವಾಚಾರ್ಯ ಮಹಾಸ್ವಾಮಿಗಳು
Next articleಗಣರಾಜ್ಯೋತ್ಸವಕ್ಕಾಗಿ ನಮ್ಮ ಮೆಟ್ರೋ ಸಮಯದಲ್ಲಿ ಬದಲಾವಣೆ