ಯಾರೂ ಶತ್ರುಗಳಾಗಿ ಹುಟ್ಟಿರುವುದಿಲ್ಲ…

ಮನುಷ್ಯನಿಗೆ (ಸ್ತ್ರೀ ಪುರುಷರಿಬ್ಬರಿಗೂ) ಅಂಟಿಕೊಂಡಿರುವ ಗುಣಾವಗುಣಗಳಲ್ಲಿ ಸ್ವಾರ್ಥಬುದ್ಧಿ, ಅಹಂಕಾರ, ಆತ್ಮಪ್ರಶಂಸೆಗಳ ಜೊತೆಗೆ ಪ್ರಜ್ಞೆ, ಜಾಗೃತಿ, ಜ್ಞಾನ, ಎಚ್ಚರಿಕೆ ಇತ್ಯಾದಿಗಳು ಹುಟ್ಟಿನಿಂದಲೇ ಬಂದಿರುವ ಪ್ರಮುಖ ವರ್ತನೆಗಳು. ಇವು ಪರಸ್ಪರ ವಿರೋಧಿಗಳಾಗಿರುವುದೂ ಸಹಜ.
ಕುರಾನಿನ ಸುಮಾರು ೬೪ ವಚನಗಳಲ್ಲಿ ಈ ಪರಸ್ಪರ ವಿರೋಧಗುಣಗಳ ಉಲ್ಲೇಖವಿದೆ. ಇಲ್ಲಿ ಕುರಾನಿನ ಎರಡು ವಚನಗಳನ್ನು ಉದಾಹರಣಿಸಬಹುದು. ಒಂದು ಯೂಸುಫ್ ಅಧ್ಯಾಯದ ೫೩ನೆಯ ವಚನ, ಅಹಂಕಾರ, ಸ್ವಾರ್ಥ, ಬುದ್ಧಿ, ಕೆಡುಕುತನದ ಕಡೆಗೆ ಒಯ್ಯುತ್ತದೆ.' ಅದು ಯಾವಾಗಲೂ ಮನುಷ್ಯನಿಗೆ ಕೆಟ್ಟದನ್ನೇ ಕಲಿಸುತ್ತದೆ. ಅದಕ್ಕೆ ಕುರಾನಿನಲ್ಲಿಅಲ್ ಅಮ್ಮಾರಾ’ ಎಂದು ಕರೆಯಲಾಗಿದೆ. ಎರಡನೆಯ ವಚನ ಅಲ್ ಖಯ್ಯಾಮ ಅಧ್ಯಾಯದಲ್ಲಿ (೨) ಪ್ರಜ್ಞೆ, ಜಾಗೃತಿ, ಎಚ್ಚರಿಕೆ, ಜ್ಞಾನ ಮುಂತಾದವುಗಳು ಮನುಷ್ಯನನ್ನು ಕೆಡುಕಿನಿಂದ ದೂರವಿಡುತ್ತವೆ.' ಅದಕ್ಕೆ ಕುರಾನ್ಲವ್ವಾಮಾ’ ಎಂದು ಕರೆದಿದೆ.
ಈ ಅಮ್ಮಾರಾ-ಲವ್ವಾಮಾಗಳು ಅಹಂಕಾರ-ಜ್ಞಾನಗಳ ಮಾನಸಿಕ ಸ್ಥಿತಿಗಳು. ಮನುಷ್ಯರೆಲ್ಲರ ನಡವಳಿಕೆ, ವರ್ತನೆಗಳು ಇವೆರಡನ್ನೂ ಒಳಗೊಂಡಿರುತ್ತವೆ. ನಕಾರಾತ್ಮಕ ನಡವಳಿಕೆ, ವರ್ತನೆಗಳು ಅಮ್ಮಾರಾ' ಅಂದರೆ ಅಹಂಕಾರ, ಸ್ವಾರ್ಥ, ಬುದ್ಧಿಗಳ ಸಂಕೇತ. ಜ್ಞಾನ, ಜಾಗೃತ ಪ್ರಜ್ಞೆಗಳುಅವ್ವಾಮಾ’ದ ಅಂದರೆ ಸಕಾರಾತ್ಮಕ ನಡವಳಿಕೆ, ವರ್ತನೆಯ ಸಂಕೇತಗಳಾಗಿವೆ.
ನಿಮ್ಮಲ್ಲಿಯ ಅಹಂಕಾರವನ್ನು ನಿಯಂತ್ರಣದಲ್ಲಿ ಇಡದಿದ್ದರೆ ಅದು ಎಲ್ಲ ಕೆಡುಕುಗಳ ಮೂಲವಾಗಿ ನಮಗೆ ಮಾರಕವಾಗಬಲ್ಲದು. ಸಾಮಾನ್ಯ ಸ್ಥಿತಿಯಲ್ಲಿ ನಮ್ಮಲ್ಲಿ ಅಹಂಕಾರ ಸುಪ್ತವಾಗಿರುತ್ತದೆ. ಅದು ಜಾಗೃತವಾದರೆ ಅನೇಕ ದುರಂತಗಳನ್ನು ಪ್ರೇರೇಪಿಸುತ್ತದೆ. ಅಹಂಕಾರವನ್ನು ನಿಯಂತ್ರಣದಲ್ಲಿಡಬೇಕಾದರೆ ಅದನ್ನು ಪ್ರಚೋದಿಸಬಾರದು. ಇದರ ತದ್ವಿರುದ್ಧವಾಗಿ ನಮ್ಮ ಪ್ರಜ್ಞೆ, ಜಾಗೃತಿ, ಎಚ್ಚರಿಕೆ, ಜ್ಞಾನ ಮುಂತಾದವುಗಳು ಎಲ್ಲೆಡೆ ನೆಮ್ಮದಿ, ಶಾಂತಿಯನ್ನು ಉಂಟುಮಾಡಬಲ್ಲವು. ಇವು ನಮ್ಮ ಅಹಂಕಾರವನ್ನು, ಸ್ವಾರ್ಥಬುದ್ಧಿಯನ್ನು ತಡೆಯುತ್ತದೆ. ಇವು ನಕಾರಾತ್ಮಕ ಆಲೋಚನೆಗಳಿಗೆ ಒಂದು ರೀತಿಯ ತಡೆಗೋಡೆ ಇದ್ದಂತೆ.
ಇದರ ತಾತ್ಪರ್ಯವೆಂದರೆ, ವಿವಾದಾತ್ಮಕ ಪ್ರಸಂಗಗಳು ಬಂದಾಗ ಅವುಗಳನ್ನು ನಿಭಾಯಿಸುವುದು ನಮ್ಮ ಕೈಯಲ್ಲಿರುತ್ತದೆ. ಇಂತಹ ವಿಷಯಗಳನ್ನು ನೆಮ್ಮದಿಯಿಂದ ಶಾಂತಿಯುತವಾಗಿ ಪರಿಹರಿಸಬೇಕಾದರೆ ಇನ್ನೊಂದು ಗುಂಪಿನಲ್ಲಿ ಸಕಾರಾತ್ಮಕವಾಗಿರುವ ಪ್ರಜ್ಞೆ, ಜಾಗೃತಿಗಳನ್ನು ಪ್ರಚೋದಿಸಬೇಕು. ನಮ್ಮ ಅಹಂಕಾರವನ್ನು ತಡೆಹಿಡಿಯಬೇಕು.