ಮತ್ತೊಂದು ಮಗುವಿನ ಶವ ಪತ್ತೆ

0
25

ಆಲಮಟ್ಟಿ: ಇಲ್ಲಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ ಬಿದ್ದು ನಾಪತ್ತೆಯಾಗಿದ್ದ ಅವಳಿ ಮಕ್ಕಳ ಪೈಕಿ ಒಬ್ಬ ಮಗುವಿನ ಶವ ಮಂಗಳವಾರ ಪತ್ತೆಯಾಗಿದೆ.
ಪತ್ತೆಯಾದ ಮಗು ಹುಸೇನ್ ಭಜಂತ್ರಿ(೧೩ ತಿಂಗಳು). ಸೋಮವಾರ, ತಾಯಿ ಭಾಗ್ಯಶ್ರೀ ನಿಂಗರಾಜ ಭಜಂತ್ರಿ ತನ್ನ ನಾಲ್ವರು ಮಕ್ಕಳ ಸಮೇತ ನೀರು ಪಾಲಾಗಿದ್ದಾಗ ಭಾಗ್ಯಶ್ರೀಯನ್ನು ಸ್ಥಳೀಯರು ಕಾಪಾಡಿದ್ದರು. ನಾಲ್ವರ ಪೈಕಿ ಇಬ್ಬರು ಮಕ್ಕಳ ಮೃತದೇಹ ಸೋಮವಾರವೇ ಪತ್ತೆಯಾಗಿತ್ತು.
ರಕ್ಷಿಸಿದ ಅರಣ್ಯ ಕಾರ್ಮಿಕ:
ಸೋಮವಾರ, ಕಾಲುವೆಯ ಸಮೀಪ ಕರ್ತವ್ಯ ನಿರ್ವಹಿಸುತ್ತಿದ್ದ ಕೆಬಿಜೆಎನ್‌ಎಲ್ ಅರಣ್ಯ ವಿಭಾಗದ ದಿನಗೂಲಿ ನೌಕರ ನಾಗೇಶ ಕೊಳ್ಳಾರ ಎಂಬಾತನೂ ಕೊಚ್ಚಿಕೊಂಡು ಹೋಗುತ್ತಿದ್ದ ಮಹಿಳೆಯ ಚೀರಾಟ ಗಮನಿಸಿ ಕೆಲವರ ಸಹಾಯದಿಂದ ತನ್ನ ಎಲೆಕ್ಟ್ರಿಕ್ ಬೈಕಿನ ಚಾರ್ಜರ್ ವೈರನ್ನು ಎಸೆದು ಮಹಿಳೆಯನ್ನು ರಕ್ಷಿಸಿದ್ದಾನೆ. ಈ ಕುರಿತಂತೆ ನಾಗೇಶ ಕೊಳ್ಳಾರ ಪೊಲೀಸರಿಗೆ ದೂರು ನೀಡಿದ್ದು ಆತನ ಹೇಳಿಕೆ ಆಧಾರದ ಮೇಲೆ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ, ಪ್ರತ್ಯಕ್ಷದರ್ಶಿ ಹೇಳಿಕೆಯ ಮೇರೆಗೆ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ತನಿಖೆಯ ನಂತರ ಘಟನೆಯ ನಿಜಾಂಶ ಹೊರಬೀಳಲಿದೆ. ಸದ್ಯಕ್ಕೆ ತಾಯಿ ಭಾಗ್ಯಶ್ರೀ ಮೇಲೆಯೇ ಪ್ರಕರಣ ದಾಖಲಾಗಿದೆ ಎಂದು ಸುದ್ದಿಗಾರರಿಗೆ ಹೇಳಿದರು.

ಶವ ಹಸ್ತಾಂತರ:
ನಿನ್ನೆ ಪತ್ತೆಯಾದ ಇಬ್ಬರ ಹಾಗೂ ಇಂದು ಪತ್ತೆಯಾದ ಒಬ್ಬ ಮಗು ಸೇರಿ ಮೂವರ ಮರಣೋತ್ತರ ಪರೀಕ್ಷೆ ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಜರುಗಿತು. ಸಂಜೆಯವರೆಗೂ ಮೂರು ಮೃತ ದೇಹಗಳನ್ನು ಕುಟುಂಬಕ್ಕೆ ಹಸ್ತಾಂತರ ಮಾಡಿರಲಿಲ್ಲ. ಪತ್ತೆಗಾಗಿ ಕಾರ್ಯಾಚರಣೆ: ಇನ್ನೊಬ್ಬ ಮಗುವಿನ ಮೃತ ದೇಹಕ್ಕಾಗಿ ಮಂಗಳವಾರ ಸಂಜೆಯವರೆಗೂ ಅಗ್ನಿಶಾಮಕ ಹಾಗೂ ಮೀನುಗಾರರು ಸೇರಿ ಪತ್ತೆ ಕಾರ‍್ಯ ಮುಂದುವರೆಸಿದ್ದರು. ಸಂಜೆಯವರೆಗೂ ಶವ ಪತ್ತೆಯಾಗಿರಲಿಲ್ಲ.

Previous articleಸಚಿವೆ ಹೆಬ್ಬಾಳಕರ ಕಾರು ಅಪಘಾತ: ತಿಂಗಳು ವಿಶ್ರಾಂತಿಗೆ ವೈದ್ಯರ ಸೂಚನೆ
Next article೨.೫೦ ಲಕ್ಷಕ್ಕೆ ಬೀಜದ ಹೋರಿ ಮಾರಾಟ!