ಬಸ್ ದರ ಏರಿಕೆ: ಜನ ವಿರೋಧಿ ತೀರ್ಮಾನ

0
23

ರಾಜ್ಯದಲ್ಲಿ ರಸ್ತೆ ಗುಂಡಿಗಳು ಬಿದ್ದಿವೆ. ಚಂದ್ರನ ಮೇಲೂ ಗುಂಡಿಗಳಿವೆ ಎಂದರೆ ಹೇಗೆ?

ಹುಬ್ಬಳ್ಳಿ : ಬಸ್ ದರ ಏರಿಕೆ ಜನ ವಿರೋಧಿ ತೀರ್ಮಾನ, ಜನರೇ ಈ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ ಎಂದು ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು , ಶಕ್ತಿ ಯೋಜನೆ ಮಾಡಿ ಅದಕ್ಕೆ ನೀಡಬೇಕಾದ ಹಣ ಸರಿಯಾಗಿ ನೀಡುತ್ತಿಲ್ಲ. ಆ ಯೋಜನೆಯಿಂದ ಯುವಜನತೆಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಹೆಚ್ಚಿನ ಬಸ್‌ಗಳನ್ನೂ ನೀಡುತ್ತಿಲ್ಲ. ನಾನು ಸಿಎಂ ಆಗಿದ್ದಾಗ ಘೋಷಣೆ ಮಾಡಿರುವ ಬಸ್‌ಗಳೆ ಈಗ ಬರುತ್ತಿವೆ ಎಂದು ಹೇಳಿದರು.

ಸಾಲ ಅವರ ಕಾಲದಿಂದಲೂ ಇದೆ. ಕೊವಿಡ್ ಸಂದರ್ಭದಲ್ಲಿ ತೊಂದರೆ ಆದಾಗ ಯಡಿಯೂರಪ್ಪ ಅವರು ಸಹಾಯ ಮಾಡಿದ್ದರು, ನಮ್ಮ ಕಾಲದಲ್ಲಿ ಯಾವುದೇ ಹೊರೆಯಾಗದಂತೆ ನೋಡಿಕೊಂಡಿದ್ದೇವು. ಇವರು ಡಿಸೆಲ್ ದುಡ್ಡು ಕಟ್ಟಲು ಆಗದ ಪರಿಸ್ಥಿತಿಗೆ ತಂದಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಅವರು ಗ್ಯಾರೆಂಟಿ ಯೋಜನೆಗಳಿಗೆ ಸರಿಯಾಗಿ ಸಂಪನ್ಮೂಲ ಕ್ರೋಢಿಕರಣ ಮಾಡಲಾಗದೇ ಜನರ ಮೇಲೆ ತೆರಿಗೆ ಭಾರ ಹಾಕುತ್ತಿದ್ದಾರೆ. ಕೇವಲ ಸಾರಿಗೆ ದರ ಹೆಚ್ಚಳವಲ್ಲ, ನೀರಿನ ದರ ಹೆಚ್ಚಳ, ವಿದ್ಯುತ್ ದರ ಹೆಚ್ಚಳ, ಹಾಲಿನ ದರ ಈಗಾಗಲೇ ಹೆಚ್ಚಳ ಮಾಡಿದ್ದಾರೆ, ಮತ್ತೆ ಮಾಡಲು ತೀರ್ಮಾನ ಮಾಡಿದ್ದಾರೆ. ಸ್ಟ್ಯಾಂಪ್ ಡ್ಯೂಟಿ, ಮೋಟರ್ ವೆಹಿಕಲ್ ತೆರಿಗೆ, ಪೆಟ್ರೋಲ್ ಡಿಸೇಲ್ ತೆರಿಗೆ ಹೆಚ್ಚಳ ಮಾಡಿದ್ದಾರೆ. ಜನಸಾಮಾನ್ಯರು ಬಳಸುವ ಜಲ್ಲಿಕಲ್ಲಿನ ಮೇಲೆ ತೆರಿಗೆ, ಪಶ್ಚಿಮ ಘಟ್ಟದಿಂದ ಬರುವ ನೀರಿನ ಮೇಲೆ ತೆರಿಗೆ ಹಾಕಲು ಯೋಚನೆ ಮಾಡಿದ್ದಾರೆ. ಗಾಳಿಗೆ ತೆರಿಗೆ ಹಾಕುವ ದಿನಗಳು ದೂರ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಇದೊಂದು ದುರಾಡಳಿತ, ಆರ್ಥಿಕ ನಿರ್ವಹಣೆಯಲ್ಲಿ ವಿಫಲವಾಗಿರುವ ಅಭಿವೃದ್ದಿ ಶೂನ್ಯವಾಗಿರುವ ಪ್ರತಿಫಲದಿಂದ ತೆರಿಗೆಗಳ ಭಾರ ಕರ್ನಾಟಕದ ಜನರ ಮೇಲೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯನವರದ್ದು ವಿತಂಡವಾದ : ಬಸ್ ದರ ಏರಿಕೆಗೂ ರೈಲ್ವೆ ದರ ಏರಿಕೆಗೂ ಹೋಲಿಕೆ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ರೈಲ್ವೆಗೂ ಬಸ್ ದರ ಹೆಚ್ಚಳಕ್ಕೂ ಹೋಲಿಕೆ ಮಾಡಿ ವಿತಂಡವಾದ ಮಾಡುವುದು ಸರಿಯಲ್ಲ. ಮುಖ್ಯಮಂತ್ರಿಗಳು ನಮ್ಮ ರಾಜ್ಯದ ಸಮಸ್ಯೆ ಬಗ್ಗೆ ಮಾತನಾಡಲಿ. ರಾಜ್ಯದಲ್ಲಿ ರಸ್ತೆ ಗುಂಡಿಗಳು ಬಿದ್ದಿವೆ. ಚಂದ್ರನ ಮೇಲೂ ಗುಂಡಿಗಳಿವೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ಕೇಳಿ ಬಂದಿರುವ ಆರೋಪದ ಕುರಿತು ಸೂಕ್ತ ತನಿಖೆಯಾಗಲಿ ಎಂದು ಇದೇ ವೇಳೆ ಆಗ್ರಹಿಸಿದರು.

Previous article40% ಆರೋಪಕ್ಕೆ ಕಾಂಗ್ರೆಸ್ ಏನು ದಾಖಲೆ ಕೊಟ್ಟಿದೆ
Next articleಮಹಿಳೆಯರಿಗೆ ತಿಂಗಳಿಗೆ ₹2,500 ಗ್ಯಾರಂಟಿ ಘೋಷಿಸಿದ ಡಿಕೆಶಿ