ದಾಂಡೇಲಿ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೋರ್ವರಿಗೆ ಹೃದಯಾಘಾತವಾಗಿ ಅಸುನೀಗಿರುವ ಘಟನೆ ನಡೆದಿದೆ.
ಧಾರವಾಡದಿಂದ ದಾಂಡೇಲಿಗೆ ಬರುತ್ತಿದ್ದ ಸಾರಿಗೆ ಬಸ್ಸಿನಲ್ಲಿ ಬರುತ್ತಿದ್ದಾಗ ಹೃದಯಾಘಾತವಾಗಿದೆ. ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮದ್ದೂರು ಗ್ರಾಮದ ಕಲ್ಲೋಳಿಯವರ ಓಣಿ ನಿವಾಸಿಯಾಗಿರುವ 57 ವರ್ಷ ವಯಸ್ಸಿನ ಪುಂಡಲಿಕ್ ಚಂದರಗಿ ಎಂಬುವರೇ ಮೃತಪಟ್ಟ ಪಯಾಣಿಕ, ದಾಂಡೇಲಿಗೆ ಬಸ್ ಬರುತ್ತಿದ್ದಂತೆಯೇ ಬಸ್ ನಿಲ್ದಾಣದಲ್ಲಿ ಇತರ ಪಯಾಣಿಕರು ನಿರ್ವಾಹಕರಿಗೆ ಮಾಹಿತಿ ನೀಡಿದ್ದಾರೆ. ಕುಳಿತಲ್ಲೇ ಮಲಗಿದ್ದ ಸ್ಥಿತಿಯಲ್ಲಿದ್ದ ಇವರು ಏನು ಮಾಡಿದರೂ ಎಚ್ಚರಗೊಳ್ಳದಿದ್ದಾಗ ಬಸ್ಸಿನ ನಿರ್ವಾಹಕ ತಕ್ಷಣವೇ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸಾರ್ವಜನಿಕ ಆಸ್ಪತ್ರೆಗೆ ಮಾಹಿತಿಯನ್ನು ನೀಡಿ ಆಂಬುಲೆನ್ಸ್ ತರಿಸಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರೂ ಪುಯೋಜನವಾಗಲಿಲ್ಲ. ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.

























