ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯೋಜಿಸಿದ ವಿವಿಧ ನಿಗಮಗಳ ಎಸ್‌ಡಿಎ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ಕುಳಿತಿದ್ದ ಅಭ್ಯರ್ಥಿಗಳು ಬ್ಲೂಟೂತ್ ಬಳಸಿದ ಆರೋಪದ ಮೇರೆಗೆ ಇಬ್ಬರು ಪರೀಕ್ಷಾರ್ಥಿ ಸೇರಿ ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪಿಎಸ್‌ಐ ಪರೀಕ್ಷೆ ಅಕ್ರಮ ತನಿಖೆ ಮಾಸುವ ಮುನ್ನವೇ ಈಗ ಮತ್ತೊಂದು ಪರೀಕ್ಷೆ ಹಗರಣ ಬಯಲಿಗೆ ಬಂದಂತಾಗಿದೆ.
ಅಫಜಲಪುರ ತಾಲೂಕಿನ ಸೊನ್ನ ಗ್ರಾಮದವರೇ ಬಹುತೇಕ ಸಿಕ್ಕಿಬಿದ್ದಿವರು. ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್.ಡಿ. ಪಾಟೀಲ್ ಅವರ ಸಹಚರರು ಎಂದು ಹೇಳಲಾಗುತ್ತಿದೆ. ಇನ್ನು ಕಲಬುರಗಿಯ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪರೀಕ್ಷಾ ಕೇಂದ್ರವೊಂದರ ತ್ರಿಮೂರ್ತಿ ಮತ್ತು ಅಭಿಷೇಕ ಅಭ್ಯರ್ಥಿಗಳು ಪೊಲೀಸರು ವಿಚಾರಣೆಗೊಳಪಡಿಸಲಾಗಿದೆ. ಶೀಘ್ರದಲ್ಲಿ ಎಫ್‌ಐಆರ್ ದಾಖಲಿಸಿ ಸಂಪೂರ್ಣ ವಿವರ ನೀಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಡೂರು ಶ್ರೀನಿವಾಸಲು `ಸಂಯುಕ್ತ ಕರ್ನಾಟಕ’ಕ್ಕೆ ತಿಳಿಸಿದರು. ಖಚಿತ ಮಾಹಿತಿ ಮೇರೆಗೆ ನಗರ ಪೊಲೀಸರು ಪರೀಕ್ಷಾ ಕೇಂದ್ರವೊಂದರ ಮೇಲೆ ದಾಳಿ ನಡೆಸಿದ್ದು, ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಸಿಕ್ಕಿಬಿದ್ದಿದ್ದಾನೆ. ತ್ರಿಮೂರ್ತಿಯನ್ನು ಅಶೋಕ ನಗರ ಠಾಣೆಯ ಪೊಲೀಸರು ಇಎನ್‌ಟಿ ವೈದ್ಯ ಡಾ. ಟಿ.ಎ. ಪಾಟೀಲ್ ಬಳಿ ಕರೆತಂದು ಆರೋಗ್ಯ ತಪಾಸಣೆ ನಡೆಸಲಾಗಿದೆ. ಬ್ಲೂಟೂತ್ ಅನ್ನು ಪೊಲೀಸರು ವಶದಲ್ಲಿದ್ದು, ಈಗ ಜಿಮ್ಸ್ ಆಸ್ಪತ್ರೆಗೆ ಆರೋಪಿಯನ್ನು ಕರೆದೊಯ್ದು ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೆಪಿಎಸ್‌ಸಿ ನಡೆಸುತ್ತಿದ್ದ ಪರೀಕ್ಷೆಗಳಲ್ಲಿ ಸದ್ದು ಮಾಡಿದ್ದ ಬ್ಲೂಟೂತ್ ಬಳಕೆ ಈಗ ಕೆಇಎ ಪರೀಕ್ಷೆಯಲ್ಲೂ ಸದ್ದು ಮಾಡುತ್ತಿದೆ. ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಎಸ್‌ಡಿಎ ಪರೀಕ್ಷೆ ನಡೆಸಲಾಗುತ್ತಿದೆ. ಹೀಗಾಗಿ, ಪಿಎಸ್‌ಐ ಪರೀಕ್ಷೆ ಕಿಂಗ್‌ಪಿನ್ ಆರ್.ಡಿ. ಪಾಟೀಲ್, ಕೆಇಎ ಪರೀಕ್ಷೆಯಲ್ಲೂ ತನ್ನ ಕಮಾಲ್ ತೋರಿಸಿದ್ದಾನೆ ಎನ್ನಲಾಗುತ್ತಿದೆ.