ಹುಬ್ಬಳ್ಳಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳ ಜೊತೆ ಮೈತ್ರಿ ವಿಚಾರವನ್ನು ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ವಿಚಾರ ರಾಜ್ಯ ಮತ್ತು ಕೇಂದ್ರದ ಮಟ್ಟದ ನಾಯಕರು ತೀರ್ಮಾನ ಮಾಡುತ್ತಾರೆ. ಯಾರು ಯಾರ ಜೊತೆ ಮೈತ್ರಿ ಮಾಡಬೇಕು ಎಂದು ಅವರಿಗೆ ಬಿಟ್ಟಿದ್ದು ಎಂದರು. ಮಾಜಿ ಶಾಸಕ ಜಗದೀಶ ಶೆಟ್ಟರ್ ಚಮಚಗಿರಿ ಮಾಡಿದ್ದಾರೆ ಎಂದು ಹೇಳಿದ್ದಾರೆ ಎಂಬ ಪ್ರಶ್ನೆಗೆ ಮಾತನಾಡಿದ ಅವರು, ನಾನು ಅವರೊಂದಿಗೆ ಇದ್ದವನು, ಅವರಿಗೆ ಗೊತ್ತಿದೆ. ಬಿಜೆಪಿಯಲ್ಲಿ ಮೂವತ್ತು ವರ್ಷಗಳ ಕಾಲ ಬೂತ್ ಮಟ್ಟದ ಅಧ್ಯಕ್ಷ ಸ್ಥಾನದಿಂದ ಹಂತ
ಹಂತವಾಗಿ ಮೇಲೆ ಬಂದಿದ್ದೇನೆ. ಹೀಗಾಗಿ ಅವರ ಕಡೆಯಿಂದ ಹೇಳಿಸಿಕೊಳ್ಳುವಂತದ್ದು ಏನಿಲ್ಲ. ಅನ್ನಬೇಕು ಎನ್ನುವ ಕಾರಣಕ್ಕೆ ಹೀಗೆ ಮಾತನಾಡುತ್ತಾರೆ ಎಂದರು. ಇನ್ನೂ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಅವರು ಬಿಜೆಪಿಯಲ್ಲಿ ಇರುವುದಾಗಿ
ಹೇಳಿಕೊಂಡಿದ್ದಾರೆ. ಮನೆಯೆಂದ ಮೇಲೆ ಸಣ್ಣ ಪುಟ್ಟ ಸಮಸ್ಯೆಗಳು ಇರುತ್ತವೆ ಅವುಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಬಿಜೆಪಿಯಲ್ಲಿ ಶಿಸ್ತು ಇದೆ. ಕೆಲವು ಸಮಸ್ಯೆಗಳು ಬಂದಾಗ ಪಕ್ಷ ಬಗೆಹರಿಸುತ್ತದೆ ಎಂದರು.