ಗಣೇಶ ಹಬ್ಬಕ್ಕೂ‌ ಮುನ್ನ ರಸ್ತೆ ರಿಪೇರಿಗೆ ಕ್ರಮ

0
10

ಬೆಳಗಾವಿ: ಗಣೇಶೋತ್ಸವಕ್ಕೂ ಮುನ್ನ ನಗರದ ಎಲ್ಲ ರಸ್ತೆಗಳನ್ನು ದುರಸ್ತಿಗೊಳಿಸಲು ಮಹಾನಗರ ಪಾಲಿಕೆಯ ನಗರ ಯೋಜನಾ ಸ್ಥಾಯಿ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ಜೋಶಿ ಅಧ್ಯಕ್ಷತೆಯಲ್ಲಿಂದು ನಡೆದ ಪ್ರಥಮ ಸಭೆಯಲ್ಲಿ ಇಂತಹ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.
ಬೆಳಗಾವಿ ಗಣೇಶೋತ್ಸವಕ್ಕೆ ತನ್ನದೇ ಆದ ಇತಿಹಾಸವಿದೆ. ಈ ಸಂದರ್ಭದಲ್ಲಿ ಹೊರಗಿನಿಂದಲೂ ಸಾಕಷ್ಟು ಜನ ಭಕ್ತರು ಬರುತ್ತಾರೆ. ಆದರೆ ಈಗ ಅತೀಯಾದ ಮಳೆಯಿಂದ ಕೆಲವೆಡೆ ರಸ್ತೆಯಲ್ಲಿ ತೆಗ್ಗುಗಳು ಬಿದ್ದಿವೆ. ಆದ್ದರಿಂದ ಅವುಗಳನ್ನು ಮುಚ್ಚುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲು ಸಭೆಯಲ್ಲಿ ಅಧ್ಯಕ್ಷರು ಸೂಚನೆ ನೀಡಿದರು.
ಈ ಕುರಿತಂತೆ ಟೆಂಡರ್ ಕರೆದು ಮುಂದಿನ ಕ್ರಮ ತೆಗೆದುಕೊಳ್ಳಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಯಿತು. ನಗರದಲ್ಲಿ ಮುಚ್ಚಿರುವ 12 ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಯಿತು. ಈ ಘಟಕಗಳು ಈಗಾಗಲೇ ಪಾಲಿಕೆಗೆ ಹಸ್ತಾಂತರವಾಗಿವೆ.‌ಹೀಗಾಗಿ ಅವುಗಳ ನಿರ್ವಹಣೆ ಯನ್ನು ಪಾಲಿಕೆಯಿಂದಲೇ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಯಿತು.
ರಾಜ್ಯೋತ್ಸವ ಹಾಗೂ ಇತರೆ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲು 1 ಕೋಟಿ 75 ಲಕ್ಷ ರೂಪಾಯಿ ನಿಧಿಯನ್ನು ವ್ಯಯಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
49 ಕಾರ್ಮಿಕರ ನೇಮಕಕ್ಕೆ ನಿರ್ಧಾರ
ನಗರದಲ್ಲಿನ ಒಳ ಚರಂಡಿಗಳ ದುರಸ್ತಿಗೆ ಗುತ್ತಿಗೆ ಆಧಾರದ ಮೇಲೆ 49 ನೌಕರರನ್ನು ನೇಮಕ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು,
ಒಳಚರಂಡಿಗಳ ನಿರ್ವಹಣೆಯ ಗುತ್ತಿಗೆಯನ್ನು ಮಹಾನಗರ ಪಾಲಿಕೆಯೇ ನೀಡಿದೆ. ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು., ಈ ವೇಳೆ ಸದಸ್ಯರು ಈ ಕಾಮಗಾರಿಗೆ ಯಾವ ಅನುದಾನ ಬಳಸಲಾಗುತ್ತಿದೆ ಎಂದು ಪ್ರಶ್ನೆ ಮಾಡಿದರು.
ಕೊನೆಗೆ ಇವುಗಳ ನಿರ್ವಹಣೆಗೆ ಪಾಲಿಕೆಯಿಂದ ಒಂದುವರೆ ಕೋಟಿ ರೂ ಅನುದಾನ ತೆಗೆದಿರಿಸಲು ನಿರ್ಧರಿಸಲಾಯಿತು. ನಗರದಲ್ಲಿನ ಒಳಚರಂಡಿಗಳ ದುರಸ್ತಿಗೆ ಪಾಲಿಕೆಯ ಆರೋಗ್ಯ ವಿಭಾಗದ ನೌಕರರನ್ನು ನಿಯೋಜಿಸಲಾಗಿದೆ. ಬದಲಿಗೆ ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳಲು ಮುಂದಾಗಲಾಗಿದೆ ಎಂದು ಉಪ ಆಯುಕ್ತೆ (ಆಡಳಿತ) ಭಾಗ್ಯಶ್ರೀ ಹುಗ್ಗಿ ಹೇಳಿದರು.
ನಗರದಲ್ಲಿ ಕಟ್ಟಡ ಕಾಮಗಾರಿಯ ವಸ್ತುಗಳನ್ನು ರಸ್ತೆ ಮಧ್ಯದಲ್ಲಿಯೇ ಎಸೆಯುತ್ತಿರುವುದು ಕಂಡು ಬಂದಿದೆ ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗಿದೆ ಎಂದು ಇಂಜಿನಿಯರ್ಗಳು ಸಭೆಗೆ ತಿಳಿಸಿದರು.
ಮೇಯರ್ ಶೋಭಾ ಸೋಮನಾಚೆ, ಉಪಮೇಯರ್ ರೇಷ್ಮಾ ಪಾಟೀಲ, ಆಡಳಿತ ಗುಂಪಿನ ನಾಯಕ ರಾಜಶೇಖರ್ ಡೋಣಿ, ಸದಸ್ಯ ಆನಂದ ಚವ್ಹಾಣ, ಮಂಗೇಶ ಪವಾರ, ಸಂತೋಷ ಪೆಡ್ನೇಕರ, ರೂಪಾ ಚಿಕ್ಕಲದಿನ್ನಿ, ಜರೀನಾ ಫತ್ತೇಖಾನ್, ಶಕೀಲಾ ಮುಲ್ಲಾ, ಲಕ್ಷ್ಮೀ ನಿಪ್ಪಾಣಿಕರ ಉಪಸ್ಥಿತರಿದ್ದರು.

Previous articleಮೋದಿ ಸ್ಕೀಮ್ ಹೆಸರಿನಲ್ಲಿ ಸರ ಎಗರಿಸಿದ ಖದೀಮ
Next articleಅಪಘಾತ: ಬ್ಯಾಂಕ್ ಮಹಿಳಾ ಉದ್ಯೋಗಿ ಸ್ಥಳದಲ್ಲೇ ಸಾವು