ನಿಸರ್ಗದ ಕೊಡುಗೆ ಅಪಾರ. ಮನುಷ್ಯನ ಆಸೆಗೆ ಮಿತಿ ಇಲ್ಲ. ಅದರಿಂದ ಪರಿಸರದಲ್ಲಿ ಅಸಮತೋಲನ ಕಂಡು ಬರುತ್ತಿರುವುದು ಸೂರ್ಯ-ಚಂದ್ರರಷ್ಟೇ ಸ್ಪಷ್ಟ. ಮುಂಬರುವ ದಿನಗಳು ಬದುಕು ದುಸ್ತರ. ೨೦೩೦ ವರೆಗೆ ಕಾಯಬೇಕಿಲ್ಲ.
ನಿಸರ್ಗ ನಮ್ಮ ಅಗತ್ಯವನ್ನು ಪೂರೈಸಬಲ್ಲುದೆ ಹೊರತು ನಮ್ಮ ದುರಾಸೆಗಳನ್ನಲ್ಲ ಎಂದು ಮಹಾತ್ಮಗಾಂಧಿ ಹೇಳಿದ್ದರು. ಈಗ ನಿಜ ಎನಿಸುತ್ತಿದೆ. ಮುಂಗಾರು ವಿಳಂಬವಾಗಿ ಆರಂಭವಾದರೂ ಈಗ ಎಲ್ಲ ಕಡೆ ಪ್ರವಾಹದ ಭೀತಿ ತಲೆದೋರಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮಳೆ ಕಡಿಮೆ ಬರುತ್ತಿದೆ. ಆದರೆ ಮಳೆಯಿಂದ ಅಗುತ್ತಿರುವ ನಷ್ಟ ಅಧಿಕಗೊಂಡಿದೆ. ಇದಕ್ಕೆ ಪ್ರಮುಖ ಕಾರಣ ಹಿಂದೆ ವ್ಯಾಪಕ ಮಳೆ ಬರುತ್ತಿತ್ತು. ಇಡೀ ಕರ್ನಾಟಕವನ್ನೇ ಆವರಿಸಿಕೊಳ್ಳುತ್ತಿತ್ತು. ಈಗ ಕೆಲವೇ ಜಿಲ್ಲೆಗಳಲ್ಲಿ ಪ್ರವಾಹ ಅಧಿಕಗೊಂಡಿದೆ. ಮಳೆ ಕೂಡ ಕೆಲವು ಜಿಲ್ಲೆಗಳಲ್ಲಿ ತೀವ್ರವಾಗಿದೆ. ಇದಕ್ಕೆ ನಾವೇ ಕಾರಣ. ನಿಸರ್ಗದ ಕೊಡುಗೆಯನ್ನು ಬಳಸಿಕೊಳ್ಳುವಾಗ ನಾವು ಮಿತಿ ಮೀರಿದ್ದು ಇಂದು ಅದರ ಫಲವನ್ನು ಈಗ ಅನುಭವಿಸುತ್ತಿದ್ದೇವೆ. ಪಶ್ಚಿಮ ಘಟ್ಟಗಳ ಒತ್ತುವರಿ ಅವ್ಯಾಹತವಾಗಿ ನಡೆಯಿತು. ಮರಗಳನ್ನು ಕಡಿಯುವುದಕ್ಕೆ ಮಿತಿಯನ್ನೇ ವಿಧಿಸಲಿಲ್ಲ. ಪಶ್ಚಿಮ ಘಟ್ಟಗಳ ಜೀವವೈವಿಧ್ಯವನ್ನು ಕಳೆದುಕೊಳ್ಳಬಾರದು ಎಂದು ಪರಿಸರ ವಿಜ್ಞಾನಿಗಳು ಎಚ್ಚರಿಕೆ ನೀಡುತ್ತ ಬಂದಿದ್ದರು. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಸುದೀರ್ಘ ಅಧ್ಯಯನ ನಡೆಸಿ ೨೦೩೦ಕ್ಕೆ ಏನಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ.
ಅದೇರೀತಿ ವಿ.ಎನ್. ಗಾಡ್ಲೀಳ್ ಮತ್ತು ಡಾ. ಕಸ್ತೂರಿರಂಗನ್ ವರದಿಯನ್ನು ಶಾಸನ ಸಭೆಗಳು ತಿರಸ್ಕರಿಸಿದ್ದೇವೆ. ದುರ್ದೈವದ ಸಂಗತಿ ಎಂದರೆ ನಮ್ಮ ಪರಿಸರ ರಕ್ಷಣೆಯ ವಿಷಯವನ್ನೂ ರಾಜಕಾರಣಿಗಳಿಗೆ ಬಿಟ್ಟಿದ್ದೇವೆ. ಅವರು ಶಾಸನಸಭೆಗಳಲ್ಲಿ ಕೈಗೊಂಡ ತೀರ್ಮಾನ ನಮಗೆ ಶಾಸನಬದ್ಧವಾಗಿರುವುದರಿಂದ ಅನಿವಾರ್ಯವಾಗಿ ಒಪ್ಪಬೇಕಾಗಿ ಬಂದಿದೆ. ಆದರೆ ಈ ಶಾಸನಗಳು ನಿಸರ್ಗಕ್ಕೆ ಅನ್ವಯವಾಗುವುದಿಲ್ಲ. ಮಳೆ, ಪ್ರವಾಹ, ಬರ ಸೇರಿದಂತೆ ಎಲ್ಲವೂ ಇನ್ನೂ ಶಾಸನಗಳಾಗಿಲ್ಲ. ಪಶ್ಚಿಮಘಟ್ಟಗಳ ಒತ್ತುವರಿಯನ್ನು ಯಾವ ಸರ್ಕಾರವೂ ನಿರ್ದಾಕ್ಷಿಣ್ಯವಾಗಿ ತೆಗೆಯಲು ಒಪ್ಪುವುದಿಲ್ಲ. ಆದರೆ ಈ ಒತ್ತುವರಿಯಿಂದ ಆಗುವ ಅನಾಹುತವನ್ನು ಯಾರೂ ತಡೆಗಟ್ಟಲು ಬರುವುದಿಲ್ಲ. ನೆರೆ ರಾಜ್ಯವಾದ ಕೇರಳ ನಮಗೆ ಈಗ ಎಚ್ಚರಿಕೆ ಗಂಟೆಯಾಗಿದೆ. ಅಲ್ಲಿ ಈಗ ಆಗುತ್ತಿರುವ ಪರಿಸರ ಅಸಮತೋಲನ ನಮಗೆ ಕಟ್ಟಿಟ್ಟಬುತ್ತಿ. ಎಲ್ಲರೂ ದೇಹಕ್ಕೆ ಕಲ್ಲು ಕಟ್ಟಿಕೊಂಡು ನೀರಿಗೆ ಬೀಳುವ ಪರಿಸ್ಥಿತಿ ಬರಲಿದೆ. ಅದಕ್ಕೆ ಮಾನಸಿಕವಾಗಿ ಸಿದ್ಧಗೊಳ್ಳುವುದು ಅನಿವಾರ್ಯ.
ವಿಜ್ಞಾನಿಗಳ ಪ್ರಕಾರ ಹವಾಮಾನದ ಉಷ್ಣಾಂಶ ೧.೫ ಡಿಗ್ರಿಯಿಂದ ೨ ಡಿಗ್ರಿಯಷ್ಟು ಅಧಿಕಗೊಳ್ಳುತ್ತಿದೆ. ಕಾವೇರಿ ಕಣಿವೆಯಲ್ಲಿ ನೀರಿನ ಪ್ರಮಾಣ ಶೇ.೩೫ ರಷ್ಟು ಅಧಿಕಗೊಳ್ಳಲಿದೆ. ಆದರೆ ಜಲಾಶಯಗಳಲ್ಲಿ ನೀರಿನ ಲಭ್ಯತೆ ಅಧಿಕಗೊಳ್ಳಬಹುದು. ಆದರೆ ಬೆಳೆಗಳ ಇಳುವರಿ ಮಾತ್ರ ಕಡಿಮೆಯಾಗಲಿದೆ. ೨೦೩೦ಕ್ಕೆ ಆಹಾರದ ಕೊರತೆ ಬರಲಿದೆ. ಉತ್ತರ ಕರ್ನಾಟಕದಲ್ಲಿ ಮಳೆ ಪ್ರಮಾಣ ಇಳಿಮುಖಗೊಳ್ಳಲಿದೆ.
೧೭೬ ತಾಲೂಕುಗಳಲ್ಲಿ ೮೮ ತಾಲೂಕು ಅಭಾವ ಪರಿಸ್ಥಿತಿ ಎದುರಿಸಲಿದೆ. ರಾಜಾಸ್ತಾನ ಹೊರತುಪಡಿಸಿದರೆ ನಮ್ಮಲ್ಲೇ ಅತಿ ಹೆಚ್ಚು ಅಭಾವಪೀಡಿತ ಪ್ರದೇಶವಿದೆ. ಬೆಳೆ ಇಳುವರಿ ಕುಸಿತ, ಅರಣ್ಯದ ಜೈವಿಕ ವೈವಿಧ್ಯ ಇಳಿಮುಖ, ಜಲ ಸಂಪನ್ಮೂಲದ ಕೊರತೆ, ಮನುಷ್ಯರ ಆರೋಗ್ಯ ಮೇಲೆ ದುಷ್ಪರಿಣಾಮ ನಿಸರ್ಗದಲ್ಲಾಗಿರುವ ಅಸಮತೋಲನ ಕಾರಣ ಎಂಬುದನ್ನು ಒಪ್ಪಿಕೊಳ್ಳಲೇಬೇಕು.
ಹವಾಮಾನಕ್ಕೆ ಇಂಗಾಲಾಮ್ಲ ಹೊರಸೂಸುವುದನ್ನು ಕಡಿಮೆ ಮಾಡಲು ಹಲವು ಕ್ರಮಕೈಗೊಳ್ಳಲೇಬೇಕು. ಇದಕ್ಕೆ ರಾಜಕಾರಣಿಗಳನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಹಿಂದೆ ಮುಂಗಾರು ಜೂನ್ ಮೊದಲವಾರದಲ್ಲಿ ಆರಂಭವಾಗುತ್ತಿತ್ತು. ಈಗ ಜುಲೈ- ಆಗಸ್ಟ್ಗೆ ಬರುತ್ತಿದೆ. ಕಳೆದ ವರ್ಷ ಮಳೆ ಬಂದರೂ ಜಲಾಶಯಗಳನ್ನು ಈ ಬಾರಿ ಖಾಲಿಯಾಗಿದ್ದವು. ಅಂದರೆ ಹವಾಮಾನದಲ್ಲಿ ಉಷ್ಣಾಂಶ ಅಧಿಕಗೊಂಡಿರುವುದು ಸ್ಪಷ್ಟ. ಕಲ್ಲಿದ್ದಲು ಆಧರಿತ ವಿದ್ಯುತ್ ಉತ್ಪಾದನೆ ಕಡಿಮೆ ಮಾಡಿ ಸೋಲಾರ್‌ಗೆ ಹೆಚ್ಚು ಒತ್ತು ನೀಡಲಾಗಿದೆ. ಆದರೂ ಇಂಗಾಲಾಮ್ಲ ಹೊರಸೂಸುವುದನ್ನು ಕಡಿಮೆ ಮಾಡಲು ಇನ್ನೂ ಸಾಧ್ಯವಾಗುತ್ತಿಲ್ಲ.