ಪಂಚನದಿಗಳಿಗೆ ಪ್ರವಾಹ: 36 ಗ್ರಾಮಗಳಿಗೆ ನಡುಕ..!

0
23

ಬೆಳಗಾವಿ(ಯಕ್ಸಂಬಾ): ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿನ ಮಹಾಬಳೇಶ್ವರ, ವಾರಾಣಾ, ರಾಧಾನಗರ, ಅಂಬಾ, ಧೂಮ್, ನವಜಾ, ಪಾಚಗಾಂವ, ಕಾಳಮ್ಮಾವಾಡಿ, ಕೋಯ್ನಾ ಹಾಗೂ ಕೊಲ್ಲಾಪೂರ ಜಿಲ್ಲೆಯಲ್ಲಿ ಪ್ರತಿವರ್ಷ ಧಾರಾಕಾರ ಸುರಿದ ಮಳಿಯಿಂದಾಗಿ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ೧೦೩ ಗ್ರಾಮಗಳ ಪೈಕಿ 36 ಗ್ರಾಮಗಳು ಆತಂಕಕ್ಕೀಡಾಗಿ ನಡುಕ ಹುಟ್ಟಿಸುತ್ತವೆ.
ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ೫ ನದಿಗಳು ಹರಿಯುತ್ತಿದ್ದು, ಪ್ರವಾಹದಿಂದ ತಾಲೂಕಿನ ಪಶ್ಚಿಮ ಮತ್ತು ಉತ್ತರ ಭಾಗದ ೩೬ ಗ್ರಾಮಗಳು ಬಾಧಿತಗೊಳ್ಳುತ್ತವೆ. ನಿಪ್ಪಾಣಿ ತಾಲೂಕಿನಲ್ಲಿ ಚಿಕೋತ್ರ, ವೇದಗಂಗಾ, ಪಂಚಗಂಗಾ, ದೂಧಗಂಗಾ ಹಾಗೂ ಚಿಕ್ಕೋಡಿ ತಾಲೂಕಿನ ದೂಧಗಂಗಾ ಮತ್ತು ಕೃಷ್ಣಾ ನದಿಗಳಿಗೆ ನೆರೆಯ ಮಹಾರಾಷ್ಟ್ರದಿಂದ ನೀರು ಹರಿಯುತ್ತಿವೆ.
ಚಿಕೋತ್ರ ನದಿ: ಈ ನದಿಯು ತಾಲೂಕಿನ ಕೊಡ್ನಿ ಗ್ರಾಮದಿಂದ ಹರಿಯಲು ಆರಂಭಿಸಿ ವೇದಗಂಗಾ ನದಿಗೆ ಬೂಧಿಹಾಳ ಗ್ರಾಮದ ಸಮೀಪ ಸೇರುತ್ತದೆ. ಈ ನದಿಯಿಂದ ಕೊಡ್ನಿ ಹಾಗೂ ಬೂದಿಹಾಳ ಗ್ರಾಮಗಳು ಪ್ರವಾಹ ಬಂದಾಗ ತೊಂದರೆಗೊಳಗಾಗುತ್ತವೆ.
ವೇದಗಂಗಾ ನದಿ: ಈ ನದಿಯು ಬೂದಿಹಾಳ ಗ್ರಾಮದಿಂದ ಹರಿಯಲು ಪ್ರಾರಂಭಿಸುತ್ತದೆ. ಈ ನದಿಗೆ ಪ್ರವಾಹ ಬಂದಾಗ ಬೂದಿಹಾಳ, ಯಮಗರ್ಣಿ, ಜತ್ರಾಟ, ಸಿದ್ನಾಳ, ಮಮದಾಪುರ ಕೆ.ಎಲ್, ಹುನ್ನರಗಿ, ಭೋಜ, ಕುರ್ಲಿ, ಭಾಟನಾಗನೂರ, ಸೌಂದಲಗಾ, ಆಡಿ, ಕುನ್ನುರ, ಅಕ್ಕೋಳ ಮತ್ತು ನಾಗನೂರ ಗ್ರಾಮಗಳಿಗೆ ತೊಂದರೆಯಾಗುತ್ತದೆ. ಅದರಲ್ಲಿ ಭಿವಸಿ, ಸಿದ್ನಾಳ, ಹುನ್ನರಗಿ ಮತ್ತು ಜತ್ರ‍್ರಾಟ ಗ್ರಾಮಗಳಿಗೆ ನೀರು ಸುತ್ತುವರಿಯುತ್ತದೆ.
ಪಂಚಗಂಗಾ ನದಿ: ಈ ನದಿಯು ಮಾನಕಾಪುರ ಗ್ರಾಮದಲ್ಲಿ ಹರಿಯುಲು ಪ್ರಾರಂಭಿಸುತ್ತದೆ. ಈ ನದಿ ಕೇವಲ ಮಾನಕಾಪುರ ಗ್ರಾಮದ ಬೆಳೆಗಳಿಗೆ ಮಾತ್ರ ಹಾಗೂ ತೋಟದಲ್ಲಿಯ ಮನೆಗಳಿಗೆ ತೊಂದರೆ ಮಾಡುತ್ತದೆ.
ದೂಧಗಂಗಾ ನದಿ: ಈ ನದಿಯು ತಾಲೂಕಿನ ಕೊಗನೊಳಿ ಗ್ರಾಮದಲ್ಲಿ ಹರಿಯುಲು ಪ್ರಾರಂಭಿಸಿ ಪ್ರವಾಹ ಬಂದಾಗ ಕಾರದಗಾ ಮತ್ತು ಬಾರವಾಡ ಗ್ರಾಮಗಳಿಗೆ ನೀರು ಸುತ್ತುವರಿಯುತ್ತದೆ. ಕೊಗನೊಳಿ, ಮಾಂಗೂರ, ಮಲಿಕವಾಡ, ಶಿರದವಾಡ, ಜನವಾಡ, ಸದಲಗಾ, ಯಕ್ಸಂಬಾ ಬೇಡಿಕಿಹಾಳ, ಶಮನೆವಾಡಿ ಮತ್ತು ಬೋರಗಾಂವ ಗ್ರಾಮದ ಗಾವಠನಗಳಲ್ಲಿ ಪ್ರವಾಹದ ನೀರು ಬರುತ್ತದೆ.
ಕೃಷ್ಣಾ ನದಿ: ಈ ನದಿಯು ಕಲ್ಲೋಳ ಗ್ರಾಮದಿಂದ ಹರಿಯಲು ಆರಂಭಿಸಿ ಕಲ್ಲೋಳ, ಯಡೂರ, ಯಡೂರವಾಡಿ, ಚಂದೂರ, ಮಾಂಜರಿ, ಅಂಕಲಿ ಮತ್ತು ಇಂಗಳಿ ಈ ಗ್ರಾಮಗಳಿಗೆ ಪ್ರವಾಹ ಬಂದಾಗ ತೊಂದರೆಯಾಗುತ್ತದೆ.
೭ ಬ್ಯಾರೇಜ್ ಕಮ್ ಬ್ರಿಜ್‌ಗಳು ಜಲಾವೃತ: ಪ್ರತಿವರ್ಷ ಪ್ರವಾಹ ಬಂದಾಗ ಭೋಜ-ಹುನ್ನರಗಿ, ಕಾರದಗಾ-ಭೋಜ, ಸಿದ್ನಾಳ-ಅಕ್ಕೋಳ, ಜತ್ರಾಟ-ಭಿವಸಿ, ಭೋಜವಾಡಿ-ಕುನ್ನೂರ ಮಲಿಕವಾಡ-ದತ್ತವಾಡ, ಕಲ್ಲೋಳ-ಯಡೂರ ಬ್ಯಾರೇಜುಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಳ್ಳುತ್ತದೆ.
ಸಂಚಾರಕ್ಕೆ ಸುಲಭ: ಯಕ್ಸಂಬಾ-ದಾನವಾಡ, ಅಂಕಲಿ-ಮಾಂಜರಿ, ಬೇಡಕಿಹಾಳ-ಬೋರಗಾಂವ, ಸದಲಗಾ-ಬೋರಗಾಂವ ಮತ್ತು ಯಮಗರ್ಣಿ-ಸೌಂದಲಗಾ (ರಾಷ್ಟ್ರೀಯ ಹೆದ್ದಾರೆ-೦೪)ಸೇತುವೆ ಮುಖಾಂತರ ಸಂಚಾರ ಸುಗಮ.
ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ನೀರು: ಮಹರಾಷ್ಟ್ರ ರಾಜ್ಯದ ಕೊಯ್ನಾ, ವಾರಣಾ, ಧೋಮ್, ಕಾಳಮ್ಮವಾಡಿ, ರಾಧಾನಗರ, ನವಜಾ, ಪಾಚಗಾಂವ, ಕಾಸಾರ ರಾಜಾಪುರ, ಸುಳಕುಡ ಮತ್ತು ಚಿಕಲಿ ಹಿರಿಯ ಮತ್ತು ಕಿರಿಯ ಜಲಾಶಯಗಳಿಂದ ರಾಜ್ಯದ ನದಿಗಳಿಗೆ ನೀರು ಹರಿದು ಬರುತ್ತವೆ. ಒಟ್ಟಿನಲ್ಲಿ ನೆರೆ ಬಂದು ಹೋಗುವವರೆಗೆ ನದಿ ತೀರದ ಜನತೆಯಲ್ಲಿ ನಡುಕ ಹುಟ್ಟಿಸುವುದು ಮಾತ್ರ ಸತ್ಯ!.

Previous articleಹಠಾತ್ ಪ್ರವಾಹ ಮುನ್ಸೂಚನೆ: ಮುನ್ನೆಚ್ಚರಿಕೆ ವಹಿಸಲು ಡಿಸಿ ಸಲಹೆ
Next articleಕರ್ನಾಟಕಕ್ಕೆ ಸೇರಲು ಮಹಾ ಗ್ರಾ.ಪಂ ಠರಾವ್