Home ತಾಜಾ ಸುದ್ದಿ ಡ್ರಗ್ಸ್ ವಿರುದ್ದ ಕಠಿಣ ಕ್ರಮ

ಡ್ರಗ್ಸ್ ವಿರುದ್ದ ಕಠಿಣ ಕ್ರಮ

0
88

ಮಂಗಳೂರು: ಸಮಾಜಕ್ಕೆ ಸವಾಲಾಗಿರುವ ಡ್ರಗ್ ಮಾಫಿಯಾ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ. ಜನರಿಗೆ ಭಯ ಮುಕ್ತ ವಾತಾವರಣ ನಿರ್ಮಿಸಬೇಕಾಗಿದೆ. ಡ್ರಗ್ಸ್ ನಿಯಂತ್ರಣಕ್ಕೆ ಅಭಿಯಾನ ನಡೆಸಲು ಸೂಚಿಸಿದ್ದು, ಆ.೧೫ ರೊಳಗೆ ಡ್ರಗ್ಸ್ ಚಟುವಟಿಕೆ ಹತ್ತಿಕ್ಕಲು ಗಡುವು ನೀಡಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮತನಾಡಿದ ಅವರು, ಮಾದಕ ವಸ್ತುಗಳ ಹಾವಳಿ ತಡೆಗೆ ಮತ್ತು ಕ್ರಮ ಕೈಗೊಳ್ಳಲು ಮತ್ತು ಯಾವುದೇ ಮಾದಕ ವಸ್ತು ಲಭ್ಯವಾಗದಂತೆ ನೋಡಿಕೊಳ್ಳಲು ಪೊಲೀಸರಿಗೆ ಆ. ೧೫ ಗಡುವು ನೀಡಲಾಗಿದ್ದು, ದಂಧೆಕೋರರು, ಗ್ರಾಹಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಡ್ರಗ್ಸ್ ಹಾವಳಿ ತಡೆಯಲು ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದರು.
ನಾನು ಮಂಗಳೂರಿನಲ್ಲಿ ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳನ್ನು ಪರಿಶೀಲಿಸಿದ್ದೇನೆ. ಈ ಹುದ್ದೆಯನ್ನು ಅಲಂಕರಿಸುವುದು ನನಗೆ ಹೊಸದಲ್ಲ. ಪ್ರಸ್ತುತ ಸಮಾಜದಲ್ಲಿ ಹೊಸ – ಹೊಸ ಸವಾಲುಗಳು ಹುಟ್ಟಿಕೊಂಡಿದ್ದು ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪೊಲೀಸ್ ಇಲಾಖೆಗೂ ಹೊಸ ಸವಾಲುಗಳು ಎದುರಾಗಿವೆ. ಮಂಗಳೂರಿನ ಜನರು ಒಳ್ಳೆಯವರು ಮತ್ತು ಕಷ್ಟಪಟ್ಟು ದುಡಿಯುವ ಜನರಾಗಿದ್ದಾರೆ ಎಂದು ತಿಳಿಸಿದರು.
ಕೇಸರೀಕರಣದ ಬಗ್ಗೆ ಮಾತನಾಡುವ ಅಗತ್ಯ ಇಲ್ಲ. ಆದರೆ ಇನ್ನು ಮುಂದೆ ಪೊಲೀಸರು ಸರಿಯಾಗಿ ಕೆಲಸ ಮಾಡಬೇಕು. ಮಾಡದಿದ್ದರೆ ನಮ್ಮ ಔಷಧಾಲಯದಲ್ಲಿ ಬೇರೆ ಔಷಧಿ ಇದೆ. ಮತ್ತೆ ಈ ಪೋಸ್ಟ್ ನನಗೇ ಸಿಕ್ಕಿದೆ, ನಾನು ಜಿಲ್ಲೆಯನ್ನು ಸರಿ ಮಾಡುತ್ತೇನೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಸೋತಿದೆ ಎಂಬ ಭಾವನೆ ಬೇಡ. ಇವತ್ತು ಅಧಿಕಾರ ಸಿಕ್ಕಿದೆ, ಸರ್ಕಾರ ನಿಮ್ಮ ಸರ್ಕಾರ, ನಿಮ್ಮ ಜೊತೆ ಸರಕಾರ ಇದೆ ಎಂದು ಹೇಳಿದರು.
ಪರಿಹಾರ: ಹತ್ಯೆಗೀಡಾದ ದೀಪಕ್ ರಾವ್, ಫಾಜೀಲ್, ಜಲೀಲ್,ಮಸೂದ್ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಲು ಬೇಕಾದ ವರದಿ ನೀಡಲು ಸೂಚಿಸಿದ್ದೇನೆ. ಆದಷ್ಟು ಶೀಘ್ರದಲ್ಲಿ ಸರ್ಕಾರ ಈ ಕುಟುಂಬಗಳಿಗೆ ಪರಿಹಾರ ನೀಡಲಿದೆ ಎಂದರು. ಎಡಿಜಿಪಿ ಅಲೋಕ್ ಕುಮಾರ್, ಐಜಿಪಿ ಚಂದ್ರಗುಪ್ತ, ಎಎಸ್ಪಿ ರಿಷ್ಯಂತ್, ಪೊಲೀಸ್ ಕಮಿಷನರ್ ಕುಲದೀಪ್ ಜೈನ್, ಡಿಸಿಪಿ ಅಂಶುಕುಮಾರ್, ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಉಪಸ್ಥಿತರಿದ್ದರು.
ಸಭೆ: ಮಂಗಳೂರಿನ ಪಶ್ಚಿಮ ವಲಯದ ಐಜಿಪಿ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಜತೆ ಗೃಹಸಚಿವ ಡಾ.ಪರಮೇಶ್ವರ್ ಸಭೆ ಮಾಡಿದರು. ಸುಮಾರು ಎರಡೂವರೆ ತಾಸು ಕಾನೂನು ಸುವ್ಯವಸ್ಥೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.