ತಾರಾತಿಗಡಿ: ಮದ್ರಾಮಣ್ಣೋರು ಊಟಕ್ಕೆ ಹೊರಟಿದ್ದಾರಂತೆ ಎಂಬ ಸುದ್ದಿ ನೂರಾಐವತ್ತು ಕಿ.ಮೀ ಹರದಾಡುತ್ತಿತ್ತು. ಸ್ಪೀಡಿನಲ್ಲಿ ಅಯ್ಯೋ ರಾಮಣ್ಣನ ಮನೆಗೆ ಸಾಹೇಬ್ರು ಹೊಂಟಾರಂತೆ…ಅಡುಗೆ ಭರ್ಜರಿ ಮಾಡಿಸಿದ್ದಾರಂತೆ. ಬೆಂಗಳೂರಿಂದ ಬೆಳ್ಕೊಳ್ಳಿ ಕಬಾಬ್ ಮಾಡವರು ಬಂದಾರೆ..
ಮೈಸೂರಿಂದ ಮಿರ್ಚಿ ಮಾಡೋರು… ಹುಬ್ಬಳ್ಳಿಯಿಂದ ಹುಳಿ ಮಾಡೋರು… ಚಿಕ್ಕಮಗಳೂರಿಂದ ಚಿಕನ್ ಮಾಡೋರು..ಮಂಡ್ಯದಿಂದ ಮಜ್ಜಿಗೆ ಕಡಿಯೋರು..ಹೀಗೆ ಎಲ್ಲ ಊರಿನ ಸ್ಪೆಷಲ್ ಮಾಡೋರೆಲ್ಲ ಬಂದು ಈಗಾಗಲೇ ಪೆಂಡಾಲ್ ಹೊಡೆದಿದ್ದಾರೆ…ಇರಪಾಪುರ ಮಾದೇವ…ಲಾದುಂಚಿ ರಾಜ ಎಲ್ಲರೂ…ಮದ್ರಾಮಣ್ಣೂರನ್ನ ಎಲ್ಲಿ ಕೂಡಿಸೋದು ..ಅವರಿಗೆ ಬಾಳೆ ಎಲೆ ಊಟನೋ ಅಥವಾ ಬೆಳ್ಳಿ ತಟ್ಟೆಯಲ್ಲಿ ಊಟನೋ ಎಂಬುದಕ್ಕೆ ರಚಿಸಲಾಗಿರುವ ಸಮಿತಿಯವರು ಡಿಸ್ಕಸ್ ಮಾಡುತ್ತಿದ್ದಾರೆ.
ಊಟ ಆದ ಮೇಲೆ ಅವರಿಗೆ ಎಲೆ ಅಡಿಕೆ ಮಡಚಿಕೊಡುವ ಸಲುವಾಗಿ ಎರಡು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡರು. ನಂತರ ಸಂಪನ್ನ ಮಾಮಾ ಹೋಗಿ ಹಂಗಪ…ನಂಗೇನೂ ಗೊತ್ತಿಲ್ಲ ಅಂದುಕೊಳ್ಳುತ್ತ ಜಗಳ ಬಿಡಿಸಿದರು. ಬರೀ ನಂಗಷ್ಟೆ ಕರದ್ರೆ ಹೇಗೆ ? ಅವರಿಗೂ ಕರೆಯಿರಿ ಎಂದು ಸಾಹೇಬರು ಹೇಳಿದ್ದಕ್ಕೆ ರಾಮಣ್ಣ ಮೊಬೈಲ್ ಕಾಲ್ ಮಾಡಿ…ಸಾಹೇಬರೇ
ನೀವು ಬರಲಿಕ್ಕೇ ಬೇಕು…ಒಂದು ಸಲ ನಮ್ಮನೇಲಿ ಊಟ ಮಾಡಲೇಬೇಕು. ಎಲ್ಲೆಲ್ಲಿಂದಲೋ ಅಡುಗೆಯವರನ್ನ ಕರೆಸಿದ್ದೀನಿ…ಬಲೇ ಚೆಂದಾಗಿ ಮಾಡ್ತಾರೆ ಅಂತ ಅಂದ…ಅದಕ್ಕೆ ನೋಡನ..ನೋಡನ…ಬರೀ ಊಟ ಮಾಡಬ್ಯಾಡ್ರಿ…ಚೋರರನ್ನು ಪತ್ತೆ ಹಚ್ಚಿ ಅಂದರು…ಇಲ್ಲ ಸರ್ ಲೋಟ ಕಳುವಾಗುವ ಪ್ರಶ್ನೆನೇ ಇಲ್ಲ… ನಾ ಕಾಂಟ್ರಾಕ್ಟ್ ಕೊಟ್ಟಿದ್ದೇನೆ ಅಂದರು…
ರಾಮಣ್ಣ ಯಾಕೋ ನೆಟ್ ವರ್ಕ್ ಸಮಸ್ಯೆ ಕಾಣಸ್ತದೆ..ಆದರೆ ಬರ್ತೀನಿ… ಮತ್ತೆ ಕಾಲ್ ಮಾಡ್ತೀನಿ ಅಂತ ಕಾಲ್ ಕಟ್ ಮಾಡಿದರು…ನಂತರ ರಾಮಣ್ಣ ಅನ್ನೋರಿಗೆ ಕರೆ ಮಾಡಿ ಅನ್ನೋರೆ ಇಂಗಿಂಗೆ ಊಟಕ್ಕೆ ಬರಬೇಕು ಅಂದಾಗ… ನೋಡ್ ರಾಮಣ್ಣ…ನಿಂಗೇ ಗೊತ್ತಿದೆ…ನಾ ಹೊರಗಿಂದೇನೂ ತಿನ್ನಂಗಿಲ್ಲ…ತಿಂದರೆ ತಡೆಯಂಗಿಲ್ಲ ..ಯಾರ್ನನ ಕಳಸ್ತೀನಿ ಬಿಡು ಅಂದರು…
ಅವರಿಬ್ಬರಲ್ಲಿ ಒಬ್ಬರು ಬಂದೇ ಬರ್ತಾರೆ ಎಂದು ರಾಮಣ್ಣ ಹೇಳಿಕೊಂಡು ತಿರುಗಾಡಿದ…ಹೀಗೆ ಈ ಊಟದ ಸುದ್ದಿ ಲೇವೇಗೌಡ ಸಾಹೇಬ್ರಿಗೆ…ಸಿಟ್ಯೂರಪ್ಪ ಸಾಹೇಬ್ರಿಗೆ ಗೊತ್ತಾಯಿತು.. ಇಬ್ಬರೂ ಕಾನ್ಸರನ್ಸ್ ಕಾಲ್ ನಲ್ಲಿ ಮಾತಾಡುತ್ತ..ಏನ್ ಗೊತ್ತ ಸಿಟ್ಯೂರಪ್ಪ…ನಾನೂ ಇಂಥ ಊಟ ತುಂಬಾ ನೋಡಿದ್ದೀನಿ…… ಇದೇನಿದ್ದರೂ ಭರ್ಜರಿ ಊಟ..ಆಮೇಲೆ ಎಲ್ಲರೂ ಮಿಂಚಿನ ಓಟ ಅಷ್ಟೆ..ಅಷ್ಟೆ ಎಂದು ಜೋರಾಗಿ ನಗುತ್ತ ಮಾತು ಮುಂದುವರಿಸಿದರು ಲೇವೇಗೌಡರು.





















