Home ಕ್ರೀಡೆ ಐಸಿಸಿ ರ‍್ಯಾಂಕಿಂಗ್ : ರೋಹಿತ್ ‘ರಾಜ’ಭಾರ! ಟಾಪ್-5ರಲ್ಲಿ ಭಾರತದ ದರ್ಬಾರ್

ಐಸಿಸಿ ರ‍್ಯಾಂಕಿಂಗ್ : ರೋಹಿತ್ ‘ರಾಜ’ಭಾರ! ಟಾಪ್-5ರಲ್ಲಿ ಭಾರತದ ದರ್ಬಾರ್

0

ಐಸಿಸಿ ರ‍್ಯಾಂಕಿಂಗ್ : ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬಿಡುಗಡೆ ಮಾಡಿರುವ ನೂತನ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಆಟಗಾರರು ಸಂಪೂರ್ಣ ಪಾರುಪತ್ಯ ಮೆರೆದಿದ್ದಾರೆ. ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ ಎಂಬಂತೆ, ವಿಶ್ವದ ಅಗ್ರ ಐವರು ಬ್ಯಾಟರ್‌ಗಳ ಪಟ್ಟಿಯಲ್ಲಿ ಭಾರತದ ಮೂವರು ಆಟಗಾರರು ಸ್ಥಾನ ಪಡೆದಿರುವುದು ವಿಶೇಷವಾಗಿದೆ. ಅದರಲ್ಲೂ ‘ಹಿಟ್‌ಮ್ಯಾನ್’ ಖ್ಯಾತಿಯ ರೋಹಿತ್ ಶರ್ಮಾ ಮತ್ತೊಮ್ಮೆ ಬ್ಯಾಟಿಂಗ್ ಸಿಂಹಾಸನ ಏರಿದ್ದಾರೆ.

ಕಳೆದ ಕೆಲವು ಸಮಯದಿಂದ ಅಗ್ರಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಿತ್ತು. ನ್ಯೂಜಿಲೆಂಡ್‌ನ ಡೇರಿಲ್ ಮಿಚೆಲ್ ಮೊದಲ ಸ್ಥಾನದಲ್ಲಿದ್ದರು. ಆದರೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಎರಡು ಪಂದ್ಯಗಳಿಂದ ಅವರು ಹೊರಗುಳಿದಿದ್ದೇ ಅವರಿಗೆ ಮುಳುವಾಯಿತು.

ಇದರ ನೇರ ಲಾಭ ಪಡೆದ ಭಾರತದ ಅನುಭವಿ ಆಟಗಾರ ರೋಹಿತ್ ಶರ್ಮಾ, 781 ರೇಟಿಂಗ್ ಅಂಕಗಳನ್ನು ಪಡೆಯುವ ಮೂಲಕ ರ‍್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೆ ಜಿಗಿದಿದ್ದಾರೆ. ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ರೋಹಿತ್ ಉತ್ತಮ ಪ್ರದರ್ಶನ ನೀಡಿದ್ದೇ ಆದಲ್ಲಿ, ಈ ಅಗ್ರಸ್ಥಾನವನ್ನು ದೀರ್ಘಕಾಲದವರೆಗೆ ಕಾಯ್ದುಕೊಳ್ಳುವ ಅವಕಾಶವಿದೆ.

ಉಳಿದವರ ಸ್ಥಾನಮಾನವೇನು?: ಇದೇ ವೇಳೆ ಕಿವೀಸ್ ಆಟಗಾರ ಡೇರಿಲ್ ಮಿಚೆಲ್ 15 ಅಂಕಗಳನ್ನು ಕಳೆದುಕೊಂಡು 766 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಅಚ್ಚರಿ ಎಂಬಂತೆ ಅಫ್ಘಾನಿಸ್ತಾನದ ಯುವ ತಾರೆ ಇಬ್ರಾಹಿಂ ಝದ್ರಾನ್, ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ತೋರಿದ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ 764 ಅಂಕಗಳನ್ನು ಗಳಿಸಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

ಕೊಹ್ಲಿ ಮತ್ತು ಗಿಲ್ ಸ್ಥಾನಗಳೇನು?: ಭಾರತ ಏಕದಿನ ತಂಡದ ನಾಯಕ ಶುಭಮನ್ ಗಿಲ್, ಚಾಂಪಿಯನ್ಸ್ ಟ್ರೋಫಿ ನಂತರ ಅಗ್ರಸ್ಥಾನಕ್ಕೇರಿದ್ದರು. ಆದರೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಬ್ಯಾಟ್ ಮೌನವಾಗಿದ್ದರಿಂದ ಅಂಕಗಳಿಕೆಯಲ್ಲಿ ಹಿನ್ನಡೆಯಾಗಿದೆ.

ಸದ್ಯ ಗಿಲ್ 745 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇನ್ನು ‘ರನ್ ಮಷಿನ್’ ವಿರಾಟ್ ಕೊಹ್ಲಿ, ಆಸೀಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಸಿಡಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ 725 ಅಂಕಗಳಿಸಿ ಐದನೇ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

ಟಾಪ್-10ರಲ್ಲಿ ಅಯ್ಯರ್ ಹವಾ: ಕೇವಲ ಟಾಪ್-5 ಮಾತ್ರವಲ್ಲದೆ, ಅಗ್ರ ಹತ್ತರ ಪಟ್ಟಿಯಲ್ಲೂ ಭಾರತದ ಪ್ರಾಬಲ್ಯವಿದೆ. ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರ ಶ್ರೇಯಸ್ ಅಯ್ಯರ್ 9ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಒಟ್ಟಾರೆಯಾಗಿ ಏಕದಿನ ಕ್ರಿಕೆಟ್‌ನಲ್ಲಿ ಭಾರತೀಯ ಬ್ಯಾಟರ್‌ಗಳ ಪ್ರಾಬಲ್ಯ ಮುಂದುವರಿದಿದ್ದು, ವಿಶ್ವಕಪ್ ಅಥವಾ ಚಾಂಪಿಯನ್ಸ್ ಟ್ರೋಫಿಯಂತಹ ದೊಡ್ಡ ಟೂರ್ನಿಗಳಿಗೆ ಇದು ಉತ್ತಮ ಮುನ್ಸೂಚನೆಯಾಗಿದೆ. ಒಂದೇ ತಂಡದ ಮೂವರು ಆಟಗಾರರು ಟಾಪ್-5 ಪಟ್ಟಿಯಲ್ಲಿರುವುದು ತಂಡದ ಬ್ಯಾಟಿಂಗ್ ಬೆನ್ನೆಲುಬು ಎಷ್ಟು ಬಲಿಷ್ಠವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version