ಬೆಂಗಳೂರು: ನಗರದ ಹೊರವಲಯದ ಟಾಪ್‌ಸ್ಪಿನ್ ಅಕಾಡೆಮಿಯಲ್ಲಿ ಕರ್ನಾಟಕ ರಾಜ್ಯ ಪಿಕಲ್‌ಬಾಲ್ ಅಸೋಸಿಯೇಷನ್ ಹಾಗೂ ಭಾರತೀಯ ಪಿಕಲ್‌ಬಾಲ್ ಅಸೋಸಿಯೇಷನ್ ಆಯೋಜಿಸಿದ್ದ ದೇಶದ ಚೊಚ್ಚಲ ವಿಶ್ವ ಪಿಕಲ್‌ಬಾಲ್ ಚಾಂಪಿಯನ್‌ಶಿಪ್‌ಗೆ ತೆರೆ ಬಿದ್ದಿದ್ದು, ಒಟ್ಟು 45 ವಿಭಾಗಗಳಲ್ಲಿ ಚಾಂಪಿಯನ್‌ಗಳು ಹೊರಹೊಮ್ಮಿದ್ದಾರೆ.
ಬರೋಬ್ಬರಿ 15 ಲಕ್ಷ ಮೊತ್ತದ ಬಹುಮಾನವಿದ್ದ ಈ ಚಾಂಪಿಯನ್‌ಶಿಪ್‌ನಲ್ಲಿ ಪ್ರಬಲ ಪೈಪೋಟಿಗಳು ಮೂಡಿ ಬಂದವು. ದೇಶದ 21 ರಾಜ್ಯಗಳಿಂದ ಆಗಮಿಸಿದ್ದ ಸ್ಪರ್ಧಾಳುಗಳ ಪೈಕಿ ಪುರುಷರ ಹಾಗೂ ಮಹಿಳೆಯರ ಅಂಡರ್ 14 ವಿಭಾಗದಿಂದ ಹಿಡಿದು 60ರ ವಯೋಮಾನದ ಸ್ಪರ್ಧೆಗಳಲ್ಲಿ ಸ್ಪರ್ಧಾಳುಗಳು ಪದಕ ಗೆದ್ದುಕೊಂಡರು.
ಈ ಪೈಕಿ, 45 ಮಂದಿ ಚಿನ್ನದ ಪದಕ ಗೆದ್ದು ಬೀಗಿದರು. 4 ದಿನಗಳ ಕಾಲ ನಡೆದ ಈ ಸ್ಪರ್ಧೆಯಲ್ಲಿ ಬಾಕರ ಸಿಂಗಲ್ಸ್ ವಿಭಾಗದ ಅಂಡರ್ 14ನಲ್ಲಿ ಆರೀಶ್ ಅಗಾ ಚೋಬೆ, ಅಂಡರ್ 18ನಲ್ಲಿ ರಾಜೀವ್ ಕುಮಾರ್, ಬಾಲಕಿಯರ ಅಂಡರ್ 14ನಲ್ಲಿ ಆರ್ಶಿತಾ ಹಾಗೂ ಅಂಡರ್ 18 ವಿಭಾಗದಲ್ಲಿ ಅಂಜಲಿ ರಾವ್ ಚಿನ್ನದ ಪದಕ ಗೆದ್ದುಕೊಂಡರು.
ಇದೇ ರೀತಿ ಬಾಯ್ಸ್ ಡಬಲ್ಸ್, ಮಿಶ್ರ ಡಬಲ್ಸ್ ಸೇರಿದಂತೆ 10ಕ್ಕೂ ವಿಭಾಗಗಳಲ್ಲಿ ಚಾಂಪಿಯನ್‌ಗಳು ಹೊರಹೊಮ್ಮಿದ್ದಾರೆ. ಮೊದಲ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದ ಮಂದಿ ಅಂತಾರಾಷ್ಟ್ರೀಯ ಮಟ್ಟದ ಫೈನಲ್‌ನಲ್ಲಿ ಕಾದಾಡಲಿದ್ದಾರೆ.
