Home ಕ್ರೀಡೆ T20 ವಿಶ್ವಕಪ್ ವಿಜೇತ ಅಂಧರ ಮಹಿಳೆಯರಿಗೆ ವಿಜಯೇಂದ್ರ ಸನ್ಮಾನ

T20 ವಿಶ್ವಕಪ್ ವಿಜೇತ ಅಂಧರ ಮಹಿಳೆಯರಿಗೆ ವಿಜಯೇಂದ್ರ ಸನ್ಮಾನ

0

ಬೆಂಗಳೂರು: ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡವು ಇತಿಹಾಸ ನಿರ್ಮಿಸಿ, ಮೊದಲ ಬಾರಿಗೆ ಆಯೋಜಿಸಲಾದ ಬ್ಲೈಂಡ್ ಮಹಿಳಾ T20 ವಿಶ್ವಕಪ್ ಗೆದ್ದ ಸಾಧನೆಗೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಇಂದು ಬೆಂಗಳೂರಿನಲ್ಲಿ ತಂಡದ ಸದಸ್ಯರನ್ನು ಭೇಟಿ ಮಾಡಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ ಸನ್ಮಾನಿಸಿದರು.

ನೇಪಾಳ ತಂಡದ ವಿರುದ್ಧ ನಡೆದ ರೋಚಕ ಫೈನಲ್‌ನಲ್ಲಿ ಭಾರತವು 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ವಿಶ್ವ ಚಾಂಪಿಯನ್ ಆಗಿರುವುದು, ದೇಶದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆದಂತಾಗಿದೆ.

‘ದೃಢ ಮನೋಬಲವೇ ಜಯ’ – ತಂಡದ ಸಾಧನೆಗೆ ಪ್ರಶಂಸೆ: ತಂಡದ ಮಹಿಳೆಯರು ದೈಹಿಕ ಸವಾಲುಗಳನ್ನು ಮೀರಿಸಿ ಸಾಧಿಸಿರುವ ಈ ಗೆಲುವು ಕೇವಲ ಕ್ರೀಡಾ ಜಯವಲ್ಲ, ದೈಹಿಕ ಅಸಮರ್ಥತೆಯ ಪೈಪೋಟಿಯ ನಡುವೆ ಮಾನವೀಯ ಮನೋಬಲದ ಗೆಲುವು ಎಂದು ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ.

ವಿಜಯೇಂದ್ರ ಅವರು ಭಾರತ ತಂಡದ ಸದಸ್ಯರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿ ಸನ್ಮಾನಿಸಿ ಮಾತನಾಡಿ ಈ ಗೆಲುವು ಕೇವಲ ಕ್ರಿಕೆಟ್‌ ಮೈದಾನದಲ್ಲಿನ ಜಯವಲ್ಲ, ಇದು ಭಾರತೀಯ ಸ್ತ್ರೀಶಕ್ತಿ ಮತ್ತು ದೃಢ ಸಂಕಲ್ಪದ ಪ್ರತೀಕ. ಇವರ ಸಾಧನೆ ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿ ಎಂದರು

ಕರ್ನಾಟಕದ ಹೆಮ್ಮೆ – ತಂಡದ ನಾಯಕಿ ದೀಪಿಕಾ: ಸಾಧನೆಯಲ್ಲೇ ಮತ್ತೊಂದು ವಿಶೇಷವೆಂದರೆ — ತಂಡದ ನಾಯಕಿ ದೀಪಿಕಾ ಅವರು ಕರ್ನಾಟಕದವರೇ. ವಿಜಯೇಂದ್ರ ಅವರು ಇದನ್ನು “ಕನ್ನಡಿಗರ ಹೆಮ್ಮೆ” ಎಂದು ಕೊಂಡಾಡಿ, ದೀಪಿಕಾ ಅವರ ನಾಯಕತ್ವ, ದೃಢತೆ ಮತ್ತು ಪಂದ್ಯದಲ್ಲಿ ತೋರಿದ ಪ್ರದರ್ಶನವನ್ನು ಪ್ರಶಂಸಿಸಿದರು.

CABI ಅಧ್ಯಕ್ಷ ಮಹಾಂತೇಶ್‌ರಿಗೂ ಗೌರವ: ಬ್ಲೈಂಡ್ ಕ್ರಿಕೆಟ್ ಕ್ಷೇತ್ರದಲ್ಲಿ ದಶಕಗಳಿಂದ ದುಡಿದು ಸಾವಿರಾರು ಕ್ರೀಡಾಪಟುಗಳಿಗೆ ಅವಕಾಶ ನೀಡಿರುವ ಕ್ರಿಕೆಟ್ ಅಸೋಸಿಯೇಷನ್ ಫಾರ್ ದ ಬ್ಲೈಂಡ್ ಇನ್ ಇಂಡಿಯಾ (CABI) ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ಮಹಾಂತೇಶ್ ಜಿ. ಕಿವಡಸಣ್ಣವರ್ ಅವರಿಗೂ ಇದೇ ವೇಳೆ ವಿಶೇಷ ಗೌರವ ಸಲ್ಲಿಸಲಾಯಿತು.

ಕ್ರೀಡಾಪಟುಗಳಿಗೆ ಹೊಸ ಭರವಸೆ: ವಿಶ್ವ ಚಾಂಪಿಯನ್‌ ಪಟ್ಟ ಜಯಿಸಿರುವುದರಿಂದ ದೇಶದ ದಿವ್ಯಾಂಗ ಕ್ರೀಡಾಪಟುಗಳ ಭವಿಷ್ಯಕ್ಕೆ ಹೊಸ ದಾರಿಯಾಗಿದೆ.

ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ. ಮೋಹನ್. ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ. ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ. ಮುಖಂಡ ಹನುಮಂತೇಗೌಡ ಮತ್ತು ಹಲವು ಪಕ್ಷದ ಕಾರ್ಯಕರ್ತರು ಹಾಜರಿದ್ದರು

NO COMMENTS

LEAVE A REPLY

Please enter your comment!
Please enter your name here

Exit mobile version