Home ಕ್ರೀಡೆ ಏಷ್ಯಾಕಪ್‌ ಕ್ರಿಕೆಟ್:‌ ಯುಎಇ ಗೆಲುವಿಗೆ 147 ರನ್‌ ಗುರಿ ನೀಡಿದ ಪಾಕ್

ಏಷ್ಯಾಕಪ್‌ ಕ್ರಿಕೆಟ್:‌ ಯುಎಇ ಗೆಲುವಿಗೆ 147 ರನ್‌ ಗುರಿ ನೀಡಿದ ಪಾಕ್

0

ದುಬೈ: ಏಷ್ಯಾಕಪ್‌ನ ಮಾಡು ಇಲ್ಲವೇ ಮಡಿ ಕ್ರಿಕೆಟ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡದ ಗೆಲುವಿಗೆ 147 ರನ್‌ಗಳ ಗುರಿ ನೀಡಿದೆ.

ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್‌ನ 10ನೇ ಪಂದ್ಯದಲ್ಲಿ ಟಾಸ್‌ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡ ಆರಂಭದಲ್ಲಿಯೇ ಪಾಕಿಸ್ತಾನದ ಮೇಲೆ ಸವಾರಿ ಮಾಡಿತು.

ಮೊದಲ ಓವರ್‌ನಲ್ಲಿ ಜುನೈದ್ ಸಿದ್ದಿಕ್ ಅವರ 5ನೇ ಎಸೆತದಲ್ಲಿ ಸೈಮ್ ಅಯೂಬ್ ಖಾತೆ ತೆರೆಯದೇ ಔಟಾದರು. ಇನ್ನು ಸಿದ್ದಿಕ್ ಅವರ ಎರಡನೇ ಓವರ್‌ನಲ್ಲಿ ಮತ್ತೋರ್ವ ಆರಂಭಿಕ ಆಟಗಾರ ಸಾಹಿಬ್‌ಜಾದಾ ಫರ್ಹಾನ್ ಕೂಡ 5 ಗಳಿಸಿ ವಿಕೆಟ್‌ ಒಪ್ಪಿಸಿದರು.

ಆರಂಭದಲ್ಲಿಯೇ ಜುನೈದ್ ಸಿದ್ದಿಕ್ ಆರಂಭಿಕ ಆಟಗಾರರನ್ನು ಪೆವಿಲಿಯನ್‌ಗೆ ಕಳಿಸಿ ಪಾಕಿಸ್ತಾನವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಬಳಿಕ ಜತೆಯಾದ ಫಖರ್ ಜಮಾನ್ ಮತ್ತು ನಾಯಕ ಸಲ್ಮಾನ್ ಆಘಾ ಜೋಡಿ 61 ರನ್‌ಗಳ ಜತೆಯಾಟ ನಡೆಸಿ ತಂಡವನ್ನು ಉತ್ತಮ ಸ್ಥಿತಿಯತ್ತ ತರುತ್ತಿದ್ದಂತೆ ಧ್ರುವ ಪರಾಶರ್ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು.

ಫಖರ್ ಜಮಾನ್ ಕೂಡ ಅರ್ಧಶತಕ ಗಳಿಸಿ ಪೆವಿಲಿಯನ್‌ ಕಡೆಗೆ ಸಾಗಿದರು. ಬಳಿಕ ಬಂದ ಯಾವೊಬ್ಬ ಆಟಗಾರನು ಕೂಡ ಕ್ರಿಸ್‌ನಲ್ಲಿ ಬಹಳ ಹೊತ್ತು ನಿಲ್ಲಲಿಲ್ಲ. ಅಂತಿಮವಾಗಿ ಪಾಕಿಸ್ತಾನ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 146 ರನ್‌ಗಳಿಸಲಷ್ಟೇ ಶಕ್ತವಾಯಿತು.

ಪಾಕಿಸ್ತಾನ ಪರ ಫಖರ್ ಜಮಾನ್ 50, ಶಾಹೀನ್ ಅಫ್ರಿದಿ 29, ಸಲ್ಮಾನ್ ಆಘಾ 20 ರನ್‌ ಗಳಿಸಿದರು. ಯುಎಇ ಪರ ಜುನೈದ್ ಸಿದ್ದಿಕ್ 18ಕ್ಕೆ 4, ಸಿಮ್ರಂಜೀತ್ ಸಿಂಗ್ 26ಕ್ಕೆ 3 ವಿಕೆಟ್‌ ಪಡೆದರು.

ರೆಫ್ರಿ ಕ್ಷಮೆಯಾಚಿಸಿದ ಬಳಿಕ ಆಡಿದ ಪಾಕ್: ಬುಧವಾರ ನಡೆದ ಏಷ್ಯಾಕಪ್ ಪಂದ್ಯಕ್ಕೂ ಮುನ್ನ ಹೈಡ್ರಾಮಾ ನಡೆದಿದೆ. ಭಾರತ ವಿರುದ್ಧದ ಪಂದ್ಯದಲ್ಲಿ ಹಸ್ತಲಾಘವ ಮಾಡದೇ ಇರಲು ಮ್ಯಾಚ್ ರೆಫ್ರಿ ಪೈಕ್ರಾಫ್ಟ್ ಕ್ಷಮೆಗೆ ಪಟ್ಟು ಹಿಡಿದಿದ್ದ ಪಾಕಿಸ್ತಾನ ತಂಡ ಪಂದ್ಯದಿಂದ ದೂರ ಉಳಿದತ್ತು. ಇದರಿಂದ ಯುಎಇ ವಿರುದ್ಧದ ಪಂದ್ಯ ಒಂದು ಗಂಟೆ ಕಾಲ ತಡವಾಗಿ ಆರಂಭಗೊಂಡಿತು. ಪಾಕಿಸ್ತಾನ ತಂಡದ ಮ್ಯಾನೇಜರ್ ಹಾಗೂ ಆಟಗಾರರಿಗೆ ಆಂಡಿ ಪೈಕ್ರಾಫ್ಟ್ ಕ್ಷಮೆ ಕೋರಿದ ಬಳಿಕ, ಅಲ್ಲದೇ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಮಾತುಕತೆ ನಡೆಸಿದ ಬಳಿಕ ಪಾಕ್ ಆಟಗಾರರು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಸುಮಾರು 7 ಗಂಟೆಗೆ ಆಗಮಿಸಿದರು. ಇದರಿಂದ ಟಾಸ್ ಪ್ರಕ್ರಿಯೆ ನಡೆದು ಪಂದ್ಯ ರಾತ್ರಿ 9 ಗಂಟೆಗೆ ಆರಂಭವಾಯಿತು. ಆದರೆ, ಸ್ಟೇಡಿಯಂನಲ್ಲಿ ಬೆರಳೆಣಿಕೆಯಷ್ಟು ಪ್ರೇಕ್ಷಕರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version