ಜೀವನದಲ್ಲಿ ಸಾಧಿಸಬೇಕು ಅನ್ನೋದಕ್ಕೆ ಶಿಕ್ಷಣ ಮುಖ್ಯವಲ್ಲ. ಹಠ, ಛಲ ಜತೆಗೆ ಒಂದಿಷ್ಟು ಶಿಸ್ತು ಇದ್ದರೆ ಏನನ್ನಾದರೂ ಸಾಧಿಸಬಹುದು ಅನ್ನೋದನ್ನು ತೋರಿಸಿಕೊಟ್ಟವರ ಕತೆಯಿದು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಅಶ್ವಥ್‌ಕುಮಾರ್ ಹುಟ್ಟಿ ಬೆಳೆದಿದ್ದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ. ಎಲ್ಲ ಮಕ್ಕಳಂತೆ ಅವರೂ ಆಟವಾಡಿಕೊಂಡು ಬೆಳೆಯಬೇಕಾದ ವಯಸ್ಸಿನಲ್ಲಿ ಕುಟುಂಬದ ಜವಾಬ್ದಾರಿ ಹೆಗಲಿಗೇರಿತು. ಅಶ್ವಥ್ ಏಳನೇ ಕ್ಲಾಸ್ ಓದುತ್ತಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಮೈಸೂರಿನಲ್ಲಿ ಪೆಟ್ಟಿ ಅಂಗಡಿಯೊಂದನ್ನು ನಡೆಸುತ್ತಿದ್ದ ಅವರ ತಂದೆ ಹೃದಯಾಘಾತಕ್ಕೆ ಒಳಗಾಗಿ ಆರು ತಿಂಗಳುಗಳ ಕಾಲ ಕೆಆರ್‌ಎಸ್ ಆಸ್ಪತ್ರೆಗೆ ದಾಖಲಾದರು. ಆಗ ಜೀವನದಲ್ಲಿ ಅಲ್ಲಿವರೆಗೂ ದುಡಿದ ದುಡ್ಡೆಲ್ಲಾ ಖಾಲಿಯಾಗಿ ಸಾಲವೆಂಬುದು ಮಿತಿಮೀರಿಹೋಗಿತ್ತು. ತಾಯಿ ಕೋಡುಬಳೆ ಮಾರುತ್ತಿದ್ದರಾದರೂ ಕುಟುಂಬದ ಪೋಷಣೆಗಾಗಿ ಅಶ್ವಥ್ ದುಡಿಮೆ ಆರಂಭಿಸುವುದು ಅನಿವಾರ್ಯವಾಯಿತು.
ಹೊಟ್ಟೆಪಾಡಿಗೆ ಹತ್ತಾರು ಕೆಲಸ: ಉದರ ನಿಮಿತ್ತಂ ಬಹುಕೃತ ವೇಶಂ ಅನ್ನುವಂತೆ ಹೊಟ್ಟೆಪಾಡಿಗಾಗಿ ಅಶ್ವಥ್ ಮಾಡಿದ ಕೆಲಸ ಒಂದೆರಡಲ್ಲ. ಮೊದಲು ಬರೀ 30 ರೂ.ಗೆ ಪ್ರತಿ ಮನೆಮನೆಗೆ ಸೈಕಲಲ್ಲಿ ಪತ್ರಿಕೆ ಹಾಕಲು ಶುರುವಿಟ್ಟುಕೊಂಡರು. ತಾಯಿಗೂ ಅನಾರೋಗ್ಯದ ಕಾರಣ ಅಶ್ವಥ್ ಪಿಯುಸಿಗೇ ತಮ್ಮ ಶಿಕ್ಷಣ ಮೊಟಕುಗೊಳಿಸಿ ಕೊರಿಯರ್ ಬಾಯ್ ಆಗಿ ಕೆಲಸಕ್ಕೆ ಸೇರಿದರು. ಆಗ ಕೈಗೆ ಬರುತ್ತಿದ್ದ ಸಂಬಳ 500 ರೂ. ಮಾತ್ರ. ಇದ್ಯಾಕೋ ಕುಟುಂಬ ನಿರ್ವಹಣೆಗೆ ಸಾಕಾಗ್ತಿಲ್ಲ ಅಂತ ಅನ್ನಿಸಿದಾಗ 700 ರೂ.ಗೆ ಇಂಜಿನಿಯರ್‌ರೊಬ್ಬರ ಬಳಿ ಆಫೀಸ್ ಬಾಯ್ ಆಗಿ ಕೆಲಸಕ್ಕೆ ಸೇರಿದರು. ಅಲ್ಲಿಯೂ ನಾಲ್ಕಾರು ತಿಂಗಳು ಕೆಲಸ ಮಾಡಿ, ನಂತರ ಡೆಂಟಿಸ್ಟ್ ಒಬ್ಬರ ಬಳಿ ಕಾಂಪೌಂಡರ್ ಆಗಿ ಒಂದು ವರ್ಷ ಕೆಲಸ ಮಾಡಿದ ಅನುಭವ ಕೂಡ ಪಡೆದುಕೊಂಡರು.
ಅದಾದ ಬಳಿಕ ಅದೇ ಮೈಸೂರಿನ ಗುಜರಿ ಅಂಗಡಿಯಲ್ಲಿ 1000 ರೂ. ಸಿಗುತ್ತೆಂದು ಅಲ್ಲಿಗೆ ಕೆಲಸಕ್ಕೆ ಹೋದರು. ಈ ನಡುವೆ ಹೊಸದಾಗಿ ಶುರುವಾರ ಫೈವ್‌ಸ್ಟಾರ್ ಹೋಟೆಲ್‌ವೊಂದಕ್ಕೆ ವೇಟರ್ ಬೇಕಾಗಿದ್ದಾರೆ ಎಂಬ ಜಾಹೀರಾತು ಪತ್ರಿಕೆಯಲ್ಲಿ ನೋಡಿ ಅಲ್ಲಿಗೂ ಹೋದರು. ಬಳಿಕ ಸೋಲಾರ್ ಕಂಪನಿಯೊಂದರಲ್ಲಿ ಮಾರ್ಕೆಟಿಂಗ್ ಕೆಲಸ. ಮಾರ್ಕೆಟಿಂಗ್ ಕಲೆ ಕರಗತವಾಗುತ್ತಿದ್ದಂತೆಯೇ, ಎಲ್‌ಐಸಿ ಏಜಂಟ್ ಕೆಲಸಕ್ಕೆ ಕೈ ಹಾಕಿದರು. ಹೀಗೆ ಸಿಕ್ಕ ಎಲ್ಲ ಕೆಲಸ ಮಾಡಿದ್ದು, ಅವರ ಅನುಭವವನ್ನು ಹೆಚ್ಚಿಸಿತು. ಆದರೆ ಅಶ್ವಥ್ ಏಳನೇ ಕ್ಲಾಸ್‌ನಲ್ಲಿ ಆರಂಭಿಸಿದ ಪೇಪರ್ ಹಾಕುವ ಕೆಲಸ ಯಾವತ್ತೂ ಬಿಡಲಿಲ್ಲ. ಬರೋಬ್ಬರಿ 25 ವರ್ಷಗಳ ಕಾಲ ಪೇಪರ್ ಹಾಕಿ ಜೀವನ ಸಾಗಿಸಿದ್ದಾರೆ.
ಪೇಪರ್ ಬಾಯ್ ಟು ಹಾಸ್ಪಿಟಲ್ ಎಂಡಿ: ಬಾಲ್ಯದಿಂದಲೇ ಬಡತನವನ್ನು ಅಪ್ಪಿಕೊಂಡು ಬಂದ ಅಶ್ವಥ್ ಅವರಿಗೆ ಯಾವ ಕೆಲಸವೂ ಕಷ್ಟ ಅನ್ನಿಸಲೇ ಇಲ್ಲ. ಒಂದೊಮ್ಮೆ ಹಾಗನ್ನಿಸಿದರೂ ಹೊಟ್ಟೆಗಾಗಿಯಾದರೂ ಕೆಲಸ ಮಾಡಲೇಬೇಕಲ್ವಾ? ಹೀಗೆ ಸಿಕ್ಕ ಕೆಲಸವನ್ನು ಮಾಡಿಕೊಂಡಿದ್ದ ಅಶ್ವಥ್ ಲಯನ್ಸ್ ಕ್ಲಬ್ ಅನ್ನೋ ಸಂಸ್ಥೆಗೆ ಸೇರುತ್ತಾರೆ. ಅಲ್ಲಿ ಹಳ್ಳಿಹಳ್ಳಿಗೆ ಜನರಿಗೆ ಉಚಿತವಾಗಿ ನೇತ್ರಚಿಕಿತ್ಸೆ ಮಾಡುವದನ್ನು ಗಮನಿಸಿ ನಾನೇಕೆ ಈ ಕೆಲಸವನ್ನು ದೊಡ್ಡ ಮಟ್ಟದಲ್ಲಿ ಮಾಡಬಾರದು ಎಂದನಿಸಿ ತಾವೇ ಸ್ವತಃ ಅನ್ನಪೂರ್ಣ ಚಾರಿಟೇಬಲ್ ಟ್ರಸ್ಟ್ ಅನ್ನೋ ಸಂಸ್ಥೆ ಹುಟ್ಟು ಹಾಕುತ್ತಾರೆ.
ಅಶ್ವಥ್ 2014ರಲ್ಲಿ ಆರಂಭಿಸಿದ ಈ ಟ್ರಸ್ಟ್‌ನ ಮೂಲಕ ಕುಗ್ರಾಮಗಳಿಗೆ ತೆರಳಿ ಸಾವಿರಾರು ಜನರಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರ, ಸರ್ಜರಿ ಮಾಡಿಸುತ್ತಾರೆ. ಸರ್ಕಾರದಿಂದ ಒಬ್ಬ ಪೇಷೆಂಟ್‌ಗೆ 900 ರೂ. ಅಂತೆ ಅನುದಾನ ಬರುತ್ತಿತ್ತಾದರೂ ಈ ವರ್ಷದ ದುಡ್ಡು ಮುಂದಿನ ವರ್ಷಕ್ಕೆ ಕೈ ಸೇರುತ್ತಿತ್ತು. ಹೀಗಾಗಿ ಸರ್ಕಾರದ ಅನುದಾನ ನೆಚ್ಚಿಕೊಳ್ಳದೇ 2 ವರ್ಷದ ಅವಧಿಯಲ್ಲಿ ಸರಿಸುಮಾರು 7 ಸಾವಿರಕ್ಕೂ ಹೆಚ್ಚು ಯಶಸ್ವಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿದ್ದೇವೆ ಎನ್ನುತ್ತಾರೆ ಅಶ್ವಥ್.
ಟ್ರಸ್ಟ್ ಕೆಲಸದಲ್ಲಿಯೆ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಅಶ್ವಥ್ 2016 ಮೈಸೂರಿನಲ್ಲಿ ಅನ್ನಪೂರ್ಣ ಐ ಹಾಸ್ಪಿಟಲ್ ಆರಂಭಿಸುತ್ತಾರೆ. ಅವರೇ ಹೇಳುವಂತೆ ನಾನು ಜೀವನಪೂರ್ತಿ ಬೇರೆ ಬೇರೆ ಕೆಲಸಗಳನ್ನು ಮಾಡಿಕೊಂಡಿದ್ದೆ. ವೈದ್ಯಕೀಯ ಕ್ಷೇತ್ರದ ಬಗ್ಗೆ ಗಂಧ ಗಾಳಿಯೂ ಗೊತ್ತಿಲ್ಲ. ಹಾಸ್ಪಿಟಲ್ ಆರಂಭಿಸಿದಾಗ ಸ್ನೇಹಿತರು, ಸಂಬಂಧಿಕರೆಲ್ಲಾ ಇನ್ಶೂರೆನ್ಸ್ ಮಾಡಿಕೊಂಡಿದ್ದವನು ಕಣ್ಣಿನ ಆಸ್ಪತ್ರೆ ಶುರು ಮಾಡ್ತಿದ್ದಾನೆ ಎಂದು ಅವಮಾನಿಸಿದರು. ಆದರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ನನ್ನ ಪಾಡಿಗೆ ಕೆಲಸ ಮಾಡಿದೆ. ವೈದ್ಯಕೀಯ ಕ್ಷೇತ್ರದ ಬಗ್ಗೆ ತಿಳಿದುಕೊಂಡೆ. ಈಗ ಮೈಸೂರಿನಲ್ಲಿಯೇ ನಂಬರ್ 1 ಐ ಹಾಸ್ಪಿಟಲ್ ಮಾಡಿದ್ದೇನೆ. ಮೈಸೂರಿನ ಹೆಸರಾಂತ ವೈದ್ಯರೀಗ ನಮ್ಮ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ. 50ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದೇನೆ ಎನ್ನುತ್ತಾರೆ ಅಶ್ವಥ್.
ಇನ್ನೂ ಸಾಧಿಸೋದು ಸಾಗರದಷ್ಟಿದೆ!: ಯಶಸ್ಸು ಅನ್ನೋದು ಅದೃಷ್ಟಶಾಲಿಗಳ ಸ್ವತ್ತಲ್ಲ. ಅದಕ್ಕೆ ಯಾವುದೇ ಶಾರ್ಟ್ಕಟ್ ಅನ್ನೋದಿಲ್ಲ. ಸಾವಿರಾರು ಪ್ರಯತ್ನಗಳ ಒಟ್ಟಾರೆ ಫಲವೇ ಯಶಸ್ಸು ಎನ್ನುವ ಅಶ್ವಥ್ ಕುಮಾರ್, ಮೈಸೂರಿನಲ್ಲಿ ತೆರೆದ ಅನ್ನಪೂರ್ಣ ಐ ಹಾಸ್ಪಿಟಲ್‌ನಿಂದ ಬಂದ ಅರ್ಧದಷ್ಟು ಹಣವನ್ನು ಅನ್ನಪೂರ್ಣ ಚಾರಿಟಬಲ್ ಟ್ರಸ್ಟ್‌ನ ಮೂಲಕ ಈಗಲೂ ಸಮಾಜ ಸೇವೆ ಮಾಡುತ್ತಿದ್ದೇನೆ. ಜೀವನದಲ್ಲಿ ಇನ್ನೂ ಸಾಧಿಸುವುದು ಸಾಗರದಷ್ಟಿದೆ. ಐ ಹಾಸ್ಪಿಟಲ್‌ನ್ನು ಕರ್ನಾಟಕದಾದ್ಯಂತ ವಿಸ್ತರಿಸಿ ಸಾಮಾನ್ಯ ಜನರಿಗೆ ಅತಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವುದೇ ಮುಂದಿನ ಗುರಿ ಎನ್ನುತ್ತಾರೆ.
ಕಡೇಗೊಂದ್ಮಾತು: ಯಾವ ಕೆಲಸವೂ ಸಣ್ಣದಲ್ಲ. ಯಾವ ಕೆಲಸ ದೊಡ್ಡದೂ ಅಲ್ಲ. ಮಾಡುವ ಎಲ್ಲ ಕೆಲಸಗಳನ್ನೂ ಶ್ರದ್ಧೆಯಿಂದ ಮಾಡಿದರೆ, ಅದರಿಂದ ಸಿಗುವ ಅನುಭವ ಮುಂದೊಂದು ದಿನ ಏನಾದರೂ ಸಾಧಿಸಲು ನೆರವಾಗುತ್ತದೆ.
