Home ವಿಶೇಷ ಸುದ್ದಿ ಹಬ್ಬಗಳು ಸಂಪ್ರದಾಯಗಳ ದಿಬ್ಬಣ ಹೊತ್ತೊಯ್ಯಲಿ

ಹಬ್ಬಗಳು ಸಂಪ್ರದಾಯಗಳ ದಿಬ್ಬಣ ಹೊತ್ತೊಯ್ಯಲಿ

0
ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಜಾಣರ ಗುರು ವಿದ್ಯಾರ್ಥಿ ಸಂಚಿಕೆಗೆ ಹನುಮಾಪುರ ರಾಣೇಬೆನ್ನೂರ ಶಿಕ್ಷಕರಾದ ಮಲ್ಲಪ್ಪ ಫ ಕರೇಣ್ಣನವರ ಬರೆದ ಲೇಖನ ಹಬ್ಬಗಳು ಸಂಪ್ರದಾಯಗಳ ದಿಬ್ಬಣ ಹೊತ್ತೊಯ್ಯಲಿ

ಮಲ್ಲಪ್ಪ ಫ ಕರೇಣ್ಣನವರ: ಶಿಕ್ಷಕರು, ಹನುಮಾಪುರ ರಾಣೇಬೆನ್ನೂರ

ಹಬ್ಬಗಳು ಜನರನ್ನು ಒಂದುಗೂಡಿಸುವ ಸೇತುವೆಗಳಾಗಿವೆ. ಒಡೆದ ಮನಸ್ಸುಗಳನ್ನು ಬೆಸೆಯುವ ಭಾವಸೇತುವೆಗಳಾಗಿವೆ. ಜಿಡ್ಡುಗಟ್ಟಿದ ಮನಸ್ಸುಗಳು ಲವಲವಿಕೆ ಕಡೆ ಹೊರಳಲು ಹಬ್ಬಗಳು ಪಥ ದರ್ಶಕಗಳಾಗಿವೆ. ಮೈ ಮುರಿದು ದುಡಿದು ದೇಹವನ್ನು ದಂಡಿಸಿಕೊಂಡವರಿಗೆ ಸಾಂತ್ವನ ನೀಡಬಲ್ಲವು. ಹೀಗಾಗಿಯೇ ನಮ್ಮ ಹಿರಿಯರು ಹಬ್ಬಗಳನ್ನು ಕಾಲಕಾಲಕ್ಕೆ ಮಾಡಿಕೊಂಡು ಬಂದು ಸಮುದಾಯದ ನಡುವೆ ಬಿಟ್ಟಿದ್ದಾರೆ.

ಭಾರತೀಯ ಪರಂಪರೆಯಲ್ಲಿ ಪ್ರತಿಯೊಂದು ಹಬ್ಬಗಳು ಒಂದೊಂದು ನೀತಿಯನ್ನು ನಮಗರಿವಿಲ್ಲದೇ ಕಲಿಸುತ್ತವೆ. ಬಹುತೇಕ ಹಬ್ಬಗಳು ವೈಜ್ಞಾನಿಕ ತಳಹದಿಯ ಮೇಲೆಯೇ ನಿಂತಿವೆ. ಕೆಲ ದಶಕಗಳ ಹಿಂದೆ ಹಬ್ಬಗಳನ್ನು ಜನರು ಸಂತೋಷದಿಂದ ಇದಿರು ನೋಡುತ್ತಿದ್ದರು. ಖುಷಿಯಿಂದ ಆಚರಿಸುತ್ತಿದ್ದರು. ತಮ್ಮ ಹಿರಿಯರ ಆಚರಣೆಗಳನ್ನು ಜತನದಿಂದ ಮುಂದುವರೆಸಿ ಕೊಂಡು ಬರುತ್ತಿದ್ದರು. ಮಕ್ಕಳಂತೂ ಹೊಸ ಬಟ್ಟೆ ಉಟ್ಕೊಂಡು ಊರತುಂಬಾ ಗೆಳೆಯರೊಂದಿಗೆ ಓಡಾಡುತ್ತಿದ್ದರು.

ಹಿರಿಯರು ಹೊನ್ನರಿಕಿ ಹೂವು, ಜೋಳದ ದಂಟು, ಗುರೆಳ್ಳು ಕಡ್ಡಿ, ಉತ್ರಾಣಿ ಕಡ್ಡಿ, ಎಕ್ಕಿ ಹೂವು ಇವುಗಳನ್ನು ಹುಡುಕಿಕೊಂಡು ಸೂರ್ಯ ಕಣ್ಣು ಬಿಡುವ ಮೊದಲೇ ಹೊಲಗಳಲ್ಲಿ ಇರುತ್ತಿದ್ದರು. ಎಲ್ಲಾ ಬಗೆಯ ಹೂವುಗಳನ್ನು ತೆಗೆದುಕೊಂಡು ಬಂದು ಸೂರ್ಯ ಉದಯಿಸುವ ಮುನ್ನ ಹಲ್ಲುಜ್ಜಿ ಮುಖ ತೊಳೆಯುವ ಮೊದಲೇ ಗೋವಿನ ಸೆಗಣಿ ಯಿಂದ ಮಾಡಿದ ಗುರ್ಜವ್ವ (ಲಕ್ಷ್ಮೀ) ರಂಟೆ, ಕುಂಟೆ, ಗಳೇವು ಸಾಮಾನು, ತಿಪ್ಪೆಗುಂಡಿ, ಕುಲುಮಿ, ಎತ್ತು ಕಟ್ಟವ ಹಖ್ಖಿ, ಕುರಿ ದಡ್ಡಿ, ಭರಮಪ್ಪನ ಗೂಡುಗಳಲ್ಲಿ ಇಡುತ್ತಿದ್ದರು ಬಗೆಬಗೆಯ ಹೂವುಗಳಿಂದ ಶೃಂಗಾರಗೊಂಡು ಹಟ್ಟಿಲಕ್ಕವ್ವ ವಿರಾಜಮಾನವಾಗಿರುತ್ತಿದ್ದಳು.

ಆಗ ಗುರ್ಜವ್ವ (ಹಟ್ಟಿ ಲಕ್ಕವ್ವ) ನನ್ನು ತಯಾರಿಸಲು ಆಕಳ ಸಗಣಿಗೆ ಕೊರತೆಯೇನು ಇರಲಿಲ್ಲ. ಊರ ತುಂಬಾ ಈಗ ಬೈಕ್ ಇರುವಂತೆ, ಆಗ ದನಕರುಗಳು ಇರುತ್ತಿದ್ದವು. ಬುಟ್ಟಿಗಟ್ಟಲೇ ಸಗಣಿ ತಗೊಂಡ್ ಬಂದು ದೊಡ್ಡ ದೊಡ್ದ ಗುರ್ಜವನನ್ನು ಮಾಡುತ್ತಿದ್ದರು. ಈಗ ಸೆಗಣಿ ಮುಟ್ಟಿ ಗುರ್ಜವನನ್ನು ಮಾಡಲು ಜನರಿಗೆ ಮುಜುಗರ. “ಸೆಗಣಿಯನ್ನು ಹಣ ಕೊಟ್ಟು ತಗೊಂಡ್ ಬಂದು ಅವನ್ಯಾಕೆ ಮಾಡಬೇಕು” ಎಂದು ಆಲೋಚಿಸಿ, ಕಂಪ್ಯೂಟರ್ ಮೌಸ್ ಹಿಡಿದು ರೆಡಿಮೇಡ್ ಗುರ್ಜವನನ್ನು ತರಿಸಲು ಅಮೇಜಾನ್, ಮೆಸ್ಸೊ, ಪ್ಲಿಪ್‌ಕಾರ್ಟನಲ್ಲಿ ತಡಕಾಡುತ್ತಿದ್ದಾರೆ.

ದೀಪಾವಳಿ ಅಮಾವಾಸ್ಯೆಯಂದು ದನಗಳಿಗೆ ಕಂದು ಹರಿಯಲೆಂದು (ರೋಗರುಜಿನಗಳು ದೂರವಾಗಲೆಂದು) ದನಗಳಿಗೆ ಗುಲ್ಲು ಕೊಡುವುದು ಮಾಡುತ್ತಿದ್ದರು. ಎತ್ತುಗಳಿಗೆ ಗುಲ್ಲು ಕೊಡಲು ಖೂರಿಗೆ ತಾಳು ಬಳಸುತ್ತಿದ್ದರು. ಬೆಳಬೆಳಗ್ಗೆಯೆ ಮನೆಯ ಮುಂದೆ ತೊಗರಿಪಿಳ್ಳೆ ರವದಿ ಮತ್ತಿತರ ವಸ್ತುಗಳಿಂದ ಬೆಂಕಿಯನ್ನು ಹೊತ್ತಿಸಿ ಖೂರಿಗೆ ತಾಳನ್ನು ಕಾಯಿಸುತ್ತಿದ್ದರು. ಹಾಗೆ ಕಾಯಿಸಿದ ಖೂರಿಗೆ ತಾಳನ್ನು ದನಕರುಗಳಿಗೆ ಗೊತ್ತಾಗದ ಹಾಗೆ ಹೋಗಿ ಅವುಗಳ ಪಕ್ಕೆಯ ಭಾಗದಲ್ಲಿ ಗುಲ್ಲು ಕೊಡುತ್ತಿದ್ದರು.

ಹೀಗೆ ಹಖ್ಖೆಯಲ್ಲಿರುವ ಎಲ್ಲಾ ದನಕರುಗಳಿಗೆ ಗುಲ್ಲು ಕೊಡುವಾಗ ದನಕರುಗಳು ಚಡಪಡಿಸುತ್ತಿದ್ದವು. ಕೆಲವೊಂದು ಬಿಂಗಿ ನಮೂನಿ ದನಕರುಗಳಿಗೆ ಗುಲ್ಲು ಕೊಡುವಾಗ ಅವುಗಳು ಅನಾಹುತವನ್ನೆ ಸೃಷ್ಟಿಸುತ್ತಿದ್ದವು. ಚಿಕ್ಕ ಮಕ್ಕಳಿಗೆ ಈ ಸನ್ನಿವೇಶ ನೋಡುವದಂತೂ ಒಂದು ದೊಡ್ಡ ಕೌತುಕವನ್ನೆ ಸೃಷ್ಟಿಸಿಬಿಡುತಿತ್ತು. ಹೀಗೆ ಗುಲ್ಲು ಕೊಡುವುದು ಮುಗಿದ ನಂತರ ದನಕರುಗಳನ್ನು ಊರ ಮುಂದಿನ ಕೆರೆಯಲ್ಲಿಯೋ, ಹೊಂಡದಲ್ಲಿಯೋ ಮೈ ತೊಳೆಯುತ್ತಿದ್ದರು. ಮೈ ತೊಳೆದುಕೊಂಡು ಬರುವಾಗಿನ ಎತ್ತುಗಳ ಲವಲವಿಕೆ ಎತ್ತುಗಳ ಮಾಲಿಕನ ಉಲ್ಲಾಸ ಗರಿಗೆದರಿತಿತ್ತು. ಇದರ ಜೊತೆಯಲ್ಲಿ ಅತ್ತೆ, ಮಾವಂದಿರಿಗೆ, ಅಳಿಯರಿಗೆ ಬನ್ನಿ ಮರದ ಕಟ್ಟಿಗೆಯಿಂದ ಗುಲ್ಲು ಕೊಡುವುದು ನಡೆಯುತಿತ್ತು.

ಊರಾಚೆಯ ತಪ್ಸಿ ಮರಕ್ಕೆ ಹೋಗಿ ಅದರ ನಾರನ್ನು ತೆಗೆದುಕೊಂಡು ಬಂದು ರಟ್ಟೆಗೆ ಬಿಗಿಯಾಗಿ ಕಟ್ಟುತ್ತಿದ್ದರು. ರಟ್ಟೆಯಲ್ಲಿ ನಾರಿನ ಗುರುತು ಮೂಡಿದರೆ ಕಂದು ಹರಿತು ಅನ್ನುತ್ತಿದ್ದರು. ಅಂದ್ರೆ ಯಾವುದೇ ಬಗೆಯ ರೋಗರುಜಿನಗಳು ಇದ್ರೆ ಅವುಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಜನರಲ್ಲಿತ್ತು. ಅಂದಿನ ಬೆಳಗಿನ ಸಮಯದಲ್ಲಿ ಓಣಿಯಲ್ಲಿ ಸಂತಸ, ಕುತೂಹಲ ಕಳೆಗಟ್ಟಿರುತಿತ್ತು.

ಮೂರ್ನಾಲ್ಕು ದಶಕಗಳ ಹಿಂದೆ ಗೋಡೆಯ ಮೇಲೆ ಪಾಂಡವರ ಚಿತ್ರ ಬಿಡಿಸುತ್ತಿದ್ದರು. ಕುಡುಗೋಲು, ಹಟ್ಟಿಲಕ್ಕವ್ವರನ್ನು ಗೋಡೆಯ ಮೇಲೆ ಬಣ್ಣದಿಂದ ಬಿಡಿಸುವುದಲ್ಲದೇ, ಸುಣ್ಣದ ಜೋರು ಮತ್ತು ಉರಮುಂಜದಿಂದ ಸೆಗಣಿಯಿಂದ ಸಾರಿಸಿದ ನೆಲದಲ್ಲಿ ಎತ್ತಿನ ಹೆಜ್ಜೆಗಳನ್ನು ಮೂಡಿಸುತಿದ್ದರು. ಇವೆಲ್ಲ ಆಚರಣೆಗಳು ಈ ನೆಲದ ಮಣ್ಣಿನಲ್ಲಿ ಬೆಳೆದುಬಂದAತವು.ಇತ್ತೀಚಿನ ದಿನಗಳಲ್ಲಿ ಸೆಗಣಿಯಿಂದ ಸಾರಿಸಿದ ಮನೆಗಳ ಬದಲು ಟೈಲ್ಸ್, ಮಾರ್ಬಲ್ಸ್ ಗಳ ಮಹಿಮೆ ಹೆಚ್ಚಾಗಿ ಸಂಪ್ರದಾಯಗಳು ಮೂಲೆ ಸೇರಿವೆ.

ಪ್ರಕೃತಿ ಮಧ್ಯೆ ತಮ್ಮ ಬದುಕನ್ನು ದೂಡುವ ಕುರಿಗಾರರು ತಮ್ಮ ಜೀವನದ ಭಾಗವಾದ ಕುರಿಗಳ ದೊಡ್ಡಿಯಲ್ಲಿ ಹಟ್ಟಿ ಪೂಜೆಯನ್ನು ದೀಪಾವಳಿ ಪಾಡ್ಯದಂದು ತುಂಬಾ ವಿಶೇಷತೆಯಿಂದ ಮಾಡುತ್ತಾರೆ. ಕುರಿ ದೊಡ್ಡಿಯಲ್ಲಿ ಕುರಿ ಹಿಕ್ಕೆಗಳನ್ನು ದುಂಡ್ಗ ಮಾಡಿ ಅದರ ಮಧ್ಯೆ ಕೊಡವನ್ನು ಇಟ್ಟು ಸೀರೆ ಕುಬಸದಿಂದ ಲಕ್ಷ್ಮೀಯ ಅವತಾರ ಮಾಡಿ ಪೂಜೆ ಮಾಡುತ್ತಾರೆ. ಕುರಿಯ ಹಿಕ್ಕೆಗಳನ್ನೆ ಒಟ್ಟು ದುಂಡ್ಗ ಮಾಡಿ ಪೂಜಿಸುತ್ತಾರೆ. ಈ ಕುರಿಯ ಹಿಕ್ಕೆಗಳು ಲಿಂಗದ ಆಕಾರದಲ್ಲಿರುತ್ತವೆ. ಶಿವನು ಧರಿಸುವ ಲಿಂಗವನ್ನು ಈ ಸಮಾಜದವರು ಕುರಿ ಹಿಕ್ಕೆಯಲ್ಲಿ ಕಾಣುತ್ತಾರೆ. ಹಾಗಾಗಿ ಕುರುಬರು ಹುಟ್ಟಾ ಲಿಂಗಧಾರಿಗಳೆಂದು ಸಮಾಜದಲ್ಲಿ ಸಹ ಕರೆಯುವುದು ಸಂಪ್ರದಾಯವಿದೆ. ಕುರಿಗಾರರು ಹಾಲನ್ನು ಉಕ್ಕಿಸಿ ಹಾಲು ಯಾವ ದಿಕ್ಕಿನ ಕಡೆ ಹರಿಯುತ್ತಿದೆ ಆ ದಿಕ್ಕಿನ ಕಡೆ ಅವರು ಕುರಿ ಹಿಂಡಿನೊAದಿಗೆ ಸಾಗುತ್ತಾರೆ. ಹೀಗೆ ಕುರಿ ಮೇಸುತ್ತಾ ಸಾಗುವ ಇವರು ಮುಂಗಾರು ಮಳೆ ಪ್ರಾರಂಭವಾಗುವ ಹೊತ್ತಿಗೆ ಊರನ್ನು ಸೇರುತ್ತಾರೆ.

ಲಂಬಾಣಿ ಸಮುದಾಯದಲ್ಲಿ ದೀಪಾವಳಿ ಹಬ್ಬವನ್ನು ತುಂಬಾ ವಿಶೇಷತೆಯಿಂದ ಆಚರಿಸುತ್ತಾರೆ. ಗ್ರಾಮೀಣ ಪ್ರದೇಶದ ಜನರು ಆಧುನಿಕತೆಗೆ ಮೈಯೊಡ್ಡಿದಂತೆ ಊರಿನ ಕಿರಾಣಿ ಅಂಗಡಿಗಳು, ಹಿಟ್ಟಿನ ಗಿರಣಿ, ಟ್ರ್ಯಾಕ್ಟರ್ ಪೂಜೆ, ವಾಹನಗಳ ಪೂಜೆಗಳು ಸಹ ಸಂಭ್ರಮದಿಂದ ಮಾಡಲು ಶುರು ಮಾಡಿದ್ದಾರೆ. ಪ್ರತಿ ಕಿರಾಣಿ ಅಂಗಡಿಗಳಲ್ಲಿ ಭಜನಾ ಗೀತೆಗಳನ್ನು ಭಜನಾ ತಂಡದಿಂದ ಹಾಡಿಸಿ ಪೂಜೆಯನ್ನು ಮಾಡಿಸುತ್ತಿದ್ದರು.

ಪ್ರತಿ ಅಂಗಡಿಯ ಮುಂದೆ ಒಂದೆರಡು ಭಜನಾ ಗೀತೆಗಳನ್ನು ಹೇಳುತ್ತಾ ಭಕ್ತಿಯ ಭಾವಪರವಶತೆಯಲ್ಲಿ ಮೈ ಮರೆಯುತ್ತಿದ್ದರು. ಹೀಗೆ ಊರಿನಲ್ಲಿರುವ ಎಲ್ಲಾ ಅಂಗಡಿಗಳಲ್ಲಿ ಇವರ ಸೇವೆ ಮುಂದುವರೆದಿರುತಿತ್ತು. ಕಾಲ ಉರುಳಿದಂತೆ ಹಬ್ಬಗಳ ಆಚರಣೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಜನರು ಒಟ್ಟಾಗಿ ಸಡಗರ ಸಂಭ್ರಮದಿಂದ ಆಚರಿಸುವುದು ತುಂಬಾ ಕಡಿಮೆಯಾಗಿದೆ. ಜನರು ನಮ್ಮ ನಂಬಿಕೆ ಸಂಪ್ರದಾಯಗಳಿಗಿಂತ ಹಣದ ಮೇಲಿನ ವ್ಯಾಮೋಹಕ್ಕೊಳಗಾಗಿದ್ದಾರೆ. ನಗರ ಪ್ರದೇಶಗಳಲ್ಲಿಂತೂ ಹಬ್ಬಗಳು ತೀರ ನಿರಶವಾಗುತ್ತಿವೆ. ದನಕರುಗಳ ಜಾಗದಲ್ಲಿ ವಾಹನಗಳು ಬಂದು ನಿಂತಿರುವುದರಿಂದ ಪ್ರಾಣಿಗಳೊಂದಿಗಿನ ಒಡನಾಟವೂ ಕಡಿಮೆಯಾಗಿದೆ. ಮನಸ್ಸುಗಳು ಸಣ್ಣದಾಗಿವೆ.

NO COMMENTS

LEAVE A REPLY

Please enter your comment!
Please enter your name here

Exit mobile version