Home ವಿಶೇಷ ಸುದ್ದಿ ಚೀನಾಗೆ ಟಕ್ಕರ್ ಕೊಡುವಂತೆ ಕಂಪನಿ ಕಟ್ಟಿದ ಸಾಹಸಿ ಕನ್ನಡಿಗ

ಚೀನಾಗೆ ಟಕ್ಕರ್ ಕೊಡುವಂತೆ ಕಂಪನಿ ಕಟ್ಟಿದ ಸಾಹಸಿ ಕನ್ನಡಿಗ

0
ನವೆಂಬರ್ 5ರಂದು ಸಂಯಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಕನ್ನಡ ನಾಡಿನ ಚಿನ್ನದ ಸಾಧಕರು ಅಡಿ ಪ್ರಕಟವಾದ ಲೇಖನ

ಮೂರು ಜನರಿಂದ ಶುರುವಾದ ಕಂಪನಿಯಲ್ಲೀಗ 80 ಜನರಿಗೆ ಉದ್ಯೋಗ | ಉತ್ತರ ಕರ್ನಾಟಕ ಹುಡುಗನ ಯಶೋಗಾಥೆ

ಸ್ಟಾರ್ಟ್ಅಪ್ ಕಂಪನಿಗಳನ್ನು ಕಟ್ಟೋರೆಲ್ಲಾ ಬೆಂಗಳೂರಿನ ಇಂಗ್ಲೀಷ್ ಮೀಡಿಯಮ್‌ನಲ್ಲಿ ಓದಿ ಬೆಳೆದ ಹುಡುಗರು ಅನ್ನೋ ಮಾತಿದೆ. ಅದಕ್ಕೆ ವ್ಯತಿರಿಕ್ತ ಎನ್ನುವಂತೆ ಕನ್ನಡ ಮಾಧ್ಯಮದಲ್ಲೇ ಓದಿ ಚೀನಾದ ಬ್ರ‍್ಯಾಂಡ್‌ಗಳಿಗೆ ಸಡ್ಡು ಹೊಡೆಯುವಂತೆ ಕಂಪನಿ ಕಟ್ಟಿದ ಅಪ್ಪಟ ಕನ್ನಡಿಗನ ಕತೆಯಿದು. ಹೆಸರು ಸಚಿನ್ ನಾಯ್ಕ್. ಹುಟ್ಟಿ ಬೆಳೆದಿದ್ದು ಉತ್ತರ ಕರ್ನಾಟಕದ ಗದಗ ಜಿಲ್ಲೆಯ ಪುಟ್ಟ ಹಳ್ಳಿಯಲ್ಲಿ.

ತಮ್ಮದೇ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ ಮೇಲೆ, ರಾಶಿ ರಾಶಿ ಕನಸುಗಳನ್ನು ಹೊತ್ತು ಉದ್ಯೋಗವನ್ನರಸಿ ಬೆಂಗಳೂರಿಗೆ ಅವರು, ಪ್ರತಿಷ್ಠಿತ ಕಂಪನಿಗಳಲ್ಲಿ ಬರೋಬ್ಬರಿ 20 ವರ್ಷ ಕೆಲಸವನ್ನೂ ಮಾಡಿದ್ರು. ಆದರೆ ಏನನ್ನೋ ಮಾಡಬೇಕು ಅಂತ ಒಳಗೊಂದು ಛಲ ಇತ್ತಲ್ಲ, ಅದು ಕಂಪನಿಯೊಂದನ್ನು ಕಟ್ಟಲು ಪ್ರೆರೇಪಿಸುತ್ತದೆ. ಅವರೇ ಹೇಳುವಂತೆ ಸಾಫ್ಟವೇರ್ ಕ್ಷೇತ್ರದಲ್ಲಿ ಸಾವಿರಾರು ಕಂಪನಿಗಳು ಹುಟ್ಟಿಕೊಂಡಿವೆ ಲಕ್ಷಾಂತರ ಜನಕ್ಕೆ ಕೆಲಸ ಸಿಕ್ಕಿದೆ.

ಅದೇ ರೀತಿ ಹಾರ್ಡವೇರ್ ಕ್ಷೇತ್ರದಲ್ಲಿ ಯಾಕೆ ಆಗಬಾರದು? ಹಾರ್ಡವೇರ್‌ನಲ್ಲೂ ನಾವೇಕೆ ಭಾರತದಲ್ಲಿ ತಯಾರಾಗುವ ಉತ್ಪನ್ನಗಳು ಜಗತ್ತಿಗೆ ಮಾರಾಟವಾಗುವಂತೆ ಮಾಡಬಾರದು ಎಂದೆನಿಸಿದಾಗಲೇ ಹುಟ್ಟಿದ್ದು ಫಾಸ್ಟ್ ಚಾರ್ಜರ್ ಹಾಗೂ ಮಿನಿ ಯುಪಿಎಸ್‌ಗಳನ್ನು ತಯಾರಿಸುವ ಕುಝರ್ ಲ್ಯಾಬ್ಸ್ ಸಂಸ್ಥೆ.

ಉತ್ತರ ಕರ್ನಾಟಕದ ಯಾವುದೋ ಒಂದು ಮೂಲೆಯಿಂದ ಮಹಾನಗರಕ್ಕೆ ಬರುವ ಹುಡುಗರು ಕೈಗೊಂದು ಕೆಲಸ ಅಂತ ಸಿಕ್ಕು ಅಪ್ಪನ ಬಳಿ ದುಡ್ಡು ಕೆಳದೇ ಬದುಕು ಸಾಗಿಸಿದರೆ ಸಾಕು ಅದೇ ಸಾರ್ಥಕತೆ ಅನ್ನುವಂಥ ಮನಸ್ಥಿತಿ ಇರುತ್ತದೆ. ಇದಕ್ಕೆ ಸಚಿನ್ ಅವರೇನು ಹೊರತಾಗಿರಲಿಲ್ಲ. ಹೀಗಿರುವಾಗ ನೋಡಿದರೇನೆ ಗಾಬರಿ ಹುಟ್ಟಿಸುವಂತ ಬೆಂಗಳೂರಿನ ಕಂಪನಿಗಳ ಮಧ್ಯೆ ಕನ್ನಡ ಶಾಲೇಲಿ ಕಲಿತ ಹುಡುಗನೊಬ್ಬ ತಾನೂ ಒಂದು ಕಂಪನಿ ಕಟ್ಟಲು ಮುಂದಾಗೋದು ಸಾಹಸವೇ ಸರಿ.

40ನೇ ವಯಸ್ಸಲ್ಲಿ ನವೋದ್ಯಮಕ್ಕೆ: ಸಾಮಾನ್ಯವಾಗಿ ನವೋದ್ಯಮ ಕ್ಷೇತ್ರಕ್ಕೆ ಬರುವವರು 25ನೇ ವಯಸ್ಸಿಗೆ ಬಂದು. ಎಷ್ಟು ಸಾಧ್ಯವೋ ಅಷ್ಟು ಬೇಗ ಸೋತು. ಅದರಿಂದ ಕಲಿತು ಮುಂದೆ ಸಾಗಬೇಕು ಎಂಬ ಅಲಿಖಿತ ನಿಯಮವಿದೆ. ಆದರೆ 40ನೇ ವಯಸ್ಸಿಗೆ ಉದ್ಯಮ ಕ್ಷೇತ್ರಕ್ಕೆ ಧುಮುಕಿ ಅದು ಹಾಗಲ್ಲ, ಗಟ್ಟಿ ಮನಸ್ಥಿತಿ, ಸಾಧಿಸಬೇಕೆಂಬ ಛಲವಿದ್ದರೆ ಯಾವ ವಯಸ್ಸಿನಲ್ಲಾದರೂ ಉದ್ಯಮಕ್ಕೆ ಬರಬಹುದು ಎಂದು ತೋರಿಸಿಕೊಟ್ಟವರು ಸಚಿನ್. ಹೀಗಾಗಿಯೇ ಅವರ ಯಶೋಗಾಥೆ ಉಳಿದವರೆಲ್ಲರಿಗಿಂತಲೂ ವಿಭಿನ್ನ, ಸ್ಫೂರ್ತಿದಾಯಕ ಆಗಿದೆ.

ಸಚಿನ್ ಹೇಳುವಂತೆ 40ನೇ ವಯಸ್ಸಿಗೆ ಉದ್ದಿಮೆ ಆರಂಭಿಸುವದರಿಂದ ಹಲವು ಲಾಭದಾಯಕ ಸಂಗತಿಗಳಿವೆ. ಮೊದಲೇ ನಿಮಗೆ ವಯಸ್ಸಾಗಿರುತ್ತೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಬಹಳಷ್ಟು ಆಲೋಚಿಸಿ ಮುಂದಿನ ಕೆಲಸಕ್ಕೆ ಅಣಿಯಾಗುತ್ತಿರಿ. ಅಲ್ಲದೇ ಟೀಂ ನಿರ್ವಹಿಸುವ ಕಲೆಯೂ ನಿಮಗೆ ಕರಗತ ಆಗಿರುತ್ತದೆ ಅಂತಾರೆ. ನವೋದ್ಯಮ ಕ್ಷೇತ್ರಕ್ಕೆ ಬರುವವರಿಗೆ ನಿರರ್ಗಳವಾಗಿ ಇಂಗ್ಲೀಷ್ ಮಾತನಾಡಲು ಬರಬೇಕು ಎಂಬ ಮಾತಿದೆ.

ಅದೆಲ್ಲಾ ಶುದ್ಧ ಸುಳ್ಳು ಎನ್ನುವ ಸಚಿನ್ ಇಂಗ್ಲೀಷ್ ಹಾಗೂ ಹಿಂದಿ ಸಂವಹನ ಭಾಷೆಗಳು ಅಷ್ಟೇ. ತಾವು ಈಗಲೂ ವಿದೇಶಿ ಹೂಡಿಕೆದಾರರ ಜತೆ ಇಂಗ್ಲೀಷಿನಲ್ಲಿ ಮಾತನಾಡಿದರೂ ಕನ್ನಡದಲ್ಲೇ ಯೋಚಿಸುತ್ತೇನೆ. ಕನ್ನಡ ಮಾಧ್ಯಮದ ಕಲಿಕೆಯೇ ಉದ್ಯಮದ ಯಶಸ್ಸಿಗೆ ಕಾರಣ ಅನ್ನುತ್ತಾರೆ.

ಅಂದುಕೊಂಡಷ್ಟು ಸುಲಭವಿರಲಿಲ್ಲ ಹಾದಿ: ಸಚಿನ್ ಅವರು ಕುಝರ್ ಲ್ಯಾಬ್ ಕಂಪನಿ ಸ್ಥಾಪಿಸುದಕ್ಕಿಂತ ಮೊದಲೇ ಆಶಾಕಾರ್ಯಕರ್ತೆರಿಗೆ ಹಾಗೂ ನಾಯಿಗಳಿಗೆ ಸಂಬಂಧಿಸಿದ ಎರಡು ಸ್ಟಾರ್ಟ್ಅಪ್‌ಗಳನ್ನು ಆರಂಭಿಸಿ ವಿಫಲರಾಗಿದ್ದರು. ಹಾಗಂದ ಮಾತ್ರಕ್ಕೆ ಕುಝರ್ ಲ್ಯಾಬ್ ಸಂಸ್ಥೆಯ ಪ್ರಯಾಣ ಸುಲಭವಾಗಿರಲಿಲ್ಲ. ಆರಂಭದಲ್ಲಿ ಮಿನಿಯುಪಿಎಸ್ ತಯಾರಿಸಿ ಗ್ರಾಹಕರಿಗೆ ಉಚಿತವಾಗಿ ವಿತರಿಸಿದರು.

ಅಲ್ಲದೇ ಅಮೆಜಾನ್‌ನಲ್ಲಿ ತಮ್ಮ ಮೊದಲ ಪ್ರಾಡಕ್ಟ್ ಖರೀದಿಸಿದ ಗ್ರಾಹಕನಿಗೆ ಉಪಯೋಗಿಸುವಾಗ ಸಮಸ್ಯೆ ಕಂಡುಬಂದಿತೆಂದು ಖುದ್ದು ತಾವೇ ಗ್ರಾಹಕನ ಮನೆ ಹುಡುಕಿಕೊಂಡು ಹೋಗಿ ಸರಿಪಡಿಸಿ ಕೊಟ್ಟಿದ್ದರಂತೆ. ಅದೆಷ್ಟೇ ಶ್ರಮಪಟ್ಟರು ಉದ್ಯಮದಲ್ಲಿ ಚೇತರಿಕೆ ಕಂಡು ಬರಲಿಲ್ಲ. ಆಗ ಸಚಿನ್ ಮತ್ತು ಅವರ ಪತ್ಮಿ ಇಬ್ಬರೂ ಸೇರಿ ಪ್ರತಿದಿನ ಬೆಳಗಿನ ಜಾವ 3 ಗಂಟೆಗೆ ತಮ್ಮ ಕಂಪನಿ ಉತ್ಪನ್ನಗಳ ಕುರಿತು ಮಾಹಿತಿ ಇರುವ ಭಿತ್ತಿಪತ್ರ ಹಂಚಿದ್ದರಂತೆ.

ಹೀಗೆ ನಿರಂತರ ಪರಿಶ್ರಮದಿಂದ ಮೂರೇ ಜನರಿಂದ ಆರಂಭವಾದ ಸಚಿನ್‌ರ ಕುಝರ್ ಕಂಪನಿಯಲ್ಲಿ ಈಗ 80ಕ್ಕೂ ಹೆಚ್ಚು ಜನ ಕೆಲಸ ಮಾಡ್ತಿದ್ದಾರೆ. ಕೆಲವೇ ಲಕ್ಷ ರೂ. ಬಂಡವಾಳ ಹೂಡಿ ಆರಂಭಿಸಿದ ಕಂಪನಿಯ ವಾರ್ಷಿಕ ವಹಿವಾಟು ಈಗ ಕೋಟಿ ರೂ. ದಾಟುತ್ತದೆ.

ಚೀನಾ ಬ್ರ‍್ಯಾಂಡ್‌ಗಳಿಗೇ ಟಕ್ಕರ್: ಕೊರೋನಾ ಕಾಲಘಟ್ಟದಲ್ಲಿ ವೈಫೈ ರೂಟರ್‌ಗಳಿಗಾಗಿ ಮಿನಿ ಯುಪಿಎಸ್ ತಯಾರಿಕೆಯ ಮೂಲಕ ಆರಂಭವಾದ ಕುಝರ್ ಕಂಪನಿ ಈಗ ಯಶಸ್ಸಿನ ಉತ್ತುಂಗದಲ್ಲಿದೆ. ಅಮೆಜಾನ್‌ನಲ್ಲಿ ಅತಿ ಹೆಚ್ಚು ಜನರು ಕುಝರ್ ಕಂಪನಿಯ ಮಿನಿಯುಪಿಎಸ್‌ಗಳನ್ನು ಖರೀದಿಸಿದ್ದಾರೆ.

ಆ ಮೂಲಕ ಮಿನಿಯುಪಿಎಸ್‌ಗಳ ಪೈಕಿ ಚೈನೀಸ್ ಉತ್ಪನ್ನಗಳನ್ನೂ ಹಿಂದಿಕ್ಕಿ ಕುಝರ್ ಸಂಸ್ಥೆ ನಂಬರ್ 1 ಸ್ಥಾನದಲ್ಲಿದೆ. ಇದೀಗ ಫಾಸ್ಟ್ ಚಾರ್ಜರ್ ಮಾರುಕಟ್ಟೆಗೂ ಕಾಲಿಟ್ಟಿರುವ ಕುಝರ್ ಲ್ಯಾಬ್ ಸಂಸ್ಥೆ ಈಗಾಗಲೇ 75 ವ್ಯಾಟ್‌ನ ಗ್ಯಾನ್ ಫಾಸ್ಟ್ ಚಾರ್ಜರ್ ತಯಾರಿಕೆಯ ಹಂತದಲ್ಲಿದೆ ಎಂದು ಘೋಷಿಸಿದೆ. ವ್ಯಕ್ತಿಯೊಬ್ಬ ದಿನನಿತ್ಯ ಬಳಸುವ ಮೊಬೈಲ್, ಲ್ಯಾಪ್‌ಟಾಪ್, ಸ್ಮಾರ್ಟ್ವಾಚ್, ಟ್ಯಾಬ್ ಎಲ್ಲದ್ದಕ್ಕೂ ಒಂದೇ ಸಿ-ಟೈಪ್ ಚಾರ್ಜರ್ ರೀತಿ ವಿನ್ಯಾಸಗೊಳಿಸಲಾಗಿದೆ ಅನ್ನುತ್ತಾರೆ ಸಚೀನ್.

NO COMMENTS

LEAVE A REPLY

Please enter your comment!
Please enter your name here

Exit mobile version