ಅನಿಲ್ ಗುಮ್ಮಘಟ್ಟ
ರಾಜ್ಯ ಸರ್ಕಾರದ ಬೆಂಬಲಿತ ಸಂಸ್ಥೆಯಾದ ಕರ್ನಾಟಕ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್) ಈಗ ಕೇವಲ ಸಾಮಾನ್ಯ ಚರ್ಮದ ಉತ್ಪನ್ನಗಳನ್ನು ತಯಾರಿಸುವ ತನ್ನ ಸಾಂಪ್ರದಾಯಿಕ ನಿಲುವಿನಿಂದ ಹೊರಬಂದು, ಫ್ಯಾಷನ್ ಲೋಕದಲ್ಲಿ ಹೊಸ ಕ್ರಾಂತಿಯನ್ನೇ ಮಾಡುತ್ತಿದೆ. ಮಾಮೂಲಿ ಚರ್ಮದ ಬ್ಯಾಗು, ಪರ್ಸ್ ಸೇರಿದಂತೆ ಹಲವು ಉತ್ಪನ್ನಗಳಿಗೆ ಕಲಾತ್ಮಕ ರೂಪ ನೀಡಿ, ಕೈಯಿಂದಲೇ ಆಕರ್ಷಕ ಚಿತ್ತಾರಗಳನ್ನು ಬಿಡಿಸುವ ಮೂಲಕ ಲಿಡ್ಕರ್ ಉತ್ಪನ್ನಗಳು ಜನಮೆಚ್ಚುವ ಕಲಾಕೃತಿಗಳಾಗಿ ಮಾರ್ಪಟ್ಟಿವೆ.
ಲಿಡ್ಕರ್ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿದ ವಿಶೇಷ ಕೈಚೀಲಗಳು ಮತ್ತು ಪರ್ಸ್‌ಗಳ ಸಂಗ್ರಹವು ಯುವ ಪೀಳಿಗೆಯಿಂದ ಹಿಡಿದು ಎಲ್ಲಾ ವರ್ಗದ ಗ್ರಾಹಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಉತ್ಪನ್ನಗಳು ಸ್ಥಳೀಯ ಕುಶಲಕರ್ಮಿಗಳ ಅದ್ಭುತ ಪ್ರತಿಭೆಯನ್ನು ಬಿಂಬಿಸುತ್ತವೆ. ನವಿಲು, ಚಿಟ್ಟೆ, ಮೊಲ, ನೀರಿನಲ್ಲಿ ಈಜುತ್ತಿರುವ ಮೀನುಗಳು, ಆನೆ, ಹೂವುಗಳು, ಕುದುರೆ, ಸಿಂಹ, ಮೈಸೂರು ಅರಮನೆ ಮತ್ತು ಜಂಬೂ ಸವಾರಿಯಂತಹ ಸಾಂಪ್ರದಾಯಿಕ ಮತ್ತು ಆಕರ್ಷಕ ವಿನ್ಯಾಸಗಳ ಕೈಚಿತ್ರಣಗಳನ್ನು ಈ ಬ್ಯಾಗು ಮತ್ತು ಪರ್ಸ್‌ಗಳಲ್ಲಿ ಕಾಣಬಹುದು.
ಪ್ರತಿಯೊಂದು ಬ್ಯಾಗ್ ಸಂಪೂರ್ಣವಾಗಿ ಕೈಯಿಂದ ತಯಾರಿಸಲಾಗಿದ್ದು, ಇದು ಯಂತ್ರಗಳಿಂದ ತಯಾರಿಸಿದ ಉತ್ಪನ್ನಗಳಲ್ಲಿ ಲಭ್ಯವಿಲ್ಲದ ವಿಶಿಷ್ಟ ಸೊಬಗು ಮತ್ತು ದೋಷರಹಿತವಾದ ಸೂಕ್ಷ್ಮಸ್ಪರ್ಶವನ್ನು ಒದಗಿಸುತ್ತದೆ. ಅತ್ಯುನ್ನತ ಗುಣಮಟ್ಟದ ಚರ್ಮ ಮತ್ತು ಭಾರತೀಯ ಕಲಾ ಸಂಸ್ಕೃತಿಯ ಕೈಚಿತ್ರಣದ ಈ ಪರಿಪೂರ್ಣ ಸಮನ್ವಯದಿಂದಾಗಿ ಲಿಡ್ಕರ್ ಉತ್ಪನ್ನಗಳು ಮಾರುಕಟ್ಟೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿವೆ. ಕಚೇರಿ, ಕಾಲೇಜು ಮತ್ತು ದೈನಂದಿನ ಪ್ರಯಾಣಕ್ಕೆ ಸೂಕ್ತವಾದ ವೈವಿಧ್ಯಮಯ ಶ್ರೇಣಿಯಲ್ಲಿ ಲಭ್ಯವಿರುವ ಈ ಸಂಗ್ರಹವು, ಸ್ಥಳೀಯ ಕರಕುಶಲತೆ ಮತ್ತು ಆಧುನಿಕ ಶೈಲಿಯ ಪರಿಪೂರ್ಣ ಸಂಗಮಕ್ಕೆ ಸಾಕ್ಷಿಯಾಗಿದೆ.
ಲಿಡ್ಕರ್‌ನ ಈ ಆವಿಷ್ಕಾರದ ಹಿಂದೆ ಕೇವಲ ವಾಣಿಜ್ಯ ಉದ್ದೇಶ ಮಾತ್ರವಲ್ಲದೆ, ಒಂದು ದೊಡ್ಡ ಸಾಮಾಜಿಕ ಗುರಿಯಿದೆ. ಕಂಪನಿಯು ರಾಜ್ಯದಾದ್ಯಂತ ನುರಿತ ಸ್ಥಳೀಯ ಕಲಾವಿದರನ್ನು ಗುರುತಿಸಿ, ಅವರಿಗೆ ತಮ್ಮ ಕೌಶಲ್ಯ ಪ್ರದರ್ಶಿಸಲು ವೇದಿಕೆಯನ್ನು ಒದಗಿಸಿದೆ. ಚರ್ಮದ ಕಲೆಗಳ ಪುನರುಜ್ಜಿವನ ಚರ್ಮದ ಕುಶಲಕರ್ಮಿಗಳ ಆರ್ಥಿಕ ಸಬಲೀಕರಣಕ್ಕಾಗಿ ಯೋಜನೆಗಳನು. ಕಂಪನಿಯು ಹಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ. ಪಾದರಕ್ಷೆ, ಶೂ, ಮತ್ತು ಚರ್ಮ ವಸ್ತುಗಳ ತಯಾರಿಕೆಯಲ್ಲಿ 60 ದಿನಗಳ ಅವಧಿಗೆ ಉನ್ನತ ಮಟ್ಟದ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಶಿಷ್ಯಾವೇತನದೊಂದಿಗೆ ನೀಡಲಾಗುತ್ತಿದೆ. ಜೊತೆಗೆ, ಉದ್ಯೋಗ ಮುಂದುವರೆಸಲು ಅಗತ್ಯವಿರುವ ಯಂತ್ರೋಪಕರಣಗಳನ್ನೂ ಲಿಡ್ಕರ್ ಒದಗಿಸುತ್ತಿದೆ.
ವಿಶೇಷವಾಗಿ ‘ಕಾಯಕಸ್ಫೂರ್ತಿ’ ಯೋಜನೆಯಡಿ ಕನಿಷ್ಠ ತರಬೇತಿ ಪಡೆದ 10 ಮಹಿಳೆಯರು ಸ್ವ-ಸಹಾಯ ಸಂಘಗಳನ್ನು ರಚಿಸಿಕೊಂಡು ಗುಂಪು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರತಿ ಸಂಘಕ್ಕೆ ಆರ್ಥಿಕ ನೆರವು ಒದಗಿಸಲಾಗುತ್ತಿದೆ. ಕಣ್ಮರೆಯಾಗುತ್ತಿದ್ದ ಚರ್ಮದ ಕರಕುಶಲ ಕಲೆಗೆ ಪುನರುಜ್ಜಿವನ ದೊರೆಯುತ್ತಿದೆ. ರಾಜ್ಯದಲ್ಲಿರುವ 15 ಲಿಡ್ಕರ್ ಮಳಿಗೆಗಳ ಪೈಕಿ ಮೈಸೂರು ಶಾಖೆಯು ಉತ್ತಮ ವಹಿವಾಟು ನಡೆಸಿ ಪ್ರಥಮ ಸ್ಥಾನ ಗಳಿಸಿದೆ.
ಕೊಲ್ಲಾಪುರಿ ಚಪ್ಪಲಿಗಳಿಗೆ ಶುಕ್ರದೆಸೆ: ಜಿಐ (ಭೌಗೋಳಿಕ ಸೂಚ್ಯಂಕ) ಟ್ಯಾಗ್‌ನ ರಕ್ಷಣೆಯನ್ನು ಹೊಂದಿರುವ ಕೊಲ್ಲಾಪುರಿ ಪಾದರಕ್ಷೆಗಳ ವಿಶಿಷ್ಟ ವಿನ್ಯಾಸವನ್ನು ನಕಲಿಸಿ, ಅದನ್ನು ತನ್ನದೇ ಬ್ಯಾಂಡ್ ಎಂದು ಜಾಗತಿಕ ಮಾರುಕಟ್ಟೆಯಲ್ಲಿ ಬಿಂಬಿಸುತ್ತಿದ್ದ ಇಟಲಿಯ ಐಷಾರಾಮಿ ಉಡುಪು ಮತ್ತು ಪಾದರಕ್ಷೆಗಳ ಸಂಸ್ಥೆ ಪ್ರಾಡಾ ಅಂತಿಮವಾಗಿ ಇತ್ತೀಚೆಗೆ ಸತ್ಯವನ್ನು ಒಪ್ಪಿಕೊಂಡಿದೆ. ಕರ್ನಾಟಕ ಸರ್ಕಾರದ ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್) ಕೈಗೊಂಡ ದಿಟ್ಟ ಕಾನೂನು ಹೋರಾಟದ ಫಲವಾಗಿ ಈ ಮಹತ್ವದ ವಿಜಯವು ಕರ್ನಾಟಕಕ್ಕೆ ಸಂದಿದೆ.
ವಾಸ್ತವವಾಗಿ ಕೊಲ್ಲಾಪುರಿ ಚಪ್ಪಲಿಗಳು ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳ ಜಂಟಿ ಜಿಐ ಟ್ಯಾಗ್ ರಕ್ಷಣೆಯಲ್ಲಿವೆ. ಪ್ರಾಡಾ ಸಂಸ್ಥೆಯು ಈ ಜಿಐ ಟ್ಯಾಗ್ ನಿಯಮಗಳನ್ನು ಉಲ್ಲಂಘಿಸಿ ನಕಲಿ ಉತ್ಪನ್ನಗಳನ್ನು ತಯಾರಿಸುತ್ತಿದ್ದ ವಿಷಯವನ್ನು ಲಿಡ್ಕರ್ ಪ್ರಶ್ನಿಸಿ, ಕಾನೂನು ಸಮರಕ್ಕೆ ಇಳಿದಿತ್ತು. ಈ ವಿವಾದದ ಅಂತ್ಯದಲ್ಲಿ, ಪ್ರಾಡಾ ಕಂಪನಿಯು ತನ್ನ ನಕಲು ಪ್ರಯತ್ನವನ್ನು ಒಪ್ಪಿಕೊಂಡಿದ್ದು ಮಾತ್ರವಲ್ಲದೆ, ಇನ್ನು ಮುಂದೆ ನಕಲಿ ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಿ, ಕರ್ನಾಟಕದ ಅಥಣಿ ತಾಲ್ಲೂಕಿನ ಚರ್ಮ ಕುಶಲಕರ್ಮಿಗಳು ತಯಾರಿಸುವ ಅಧಿಕೃತ ಕೊಲ್ಲಾಪುರಿ ಪಾದರಕ್ಷೆಗಳನ್ನು ನೇರವಾಗಿ ಖರೀದಿಸಲು ಸಿದ್ಧವಾಗಿದೆ.
ಪ್ರತಿಯೊಂದು ಉತ್ಪನ್ನವೂ ಒಂದು ಕಲಾಕೃತಿ. ನಮ್ಮ ಕುಶಲಕರ್ಮಿಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದರ ಜೊತೆಗೆ, ಕರ್ನಾಟಕದ ಕರಕುಶಲ ಪ್ರತಿಭೆಯನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಪರಿಚಯಿಸಲು ಸಿದ್ಧರಾಗಿದ್ದೇವೆ. ಈಗಾಗಲೇ ಆನ್‌ಲೈನ್‌ನಲ್ಲಿ ಲಿಡ್ಕರ್ ಉತ್ಪನ್ನಗಳು ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಆನ್‌ಲೈನ್ ಮಾರುಕಟ್ಟೆಗೆ ಹೆಚ್ಚು ಒತ್ತು ಕೊಟ್ಟು, ಲಿಡ್ಕರ್ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು. ಕೆ.ಎಂ.ವಸುಂಧರ. ವ್ಯವಸ್ಥಾಪಕ ನಿರ್ದೇಶಕಿ, ಲಿಡ್ಕರ್
