Home ಸಂಪಾದಕೀಯ ಭೂಸ್ವಾಧೀನಕ್ಕೆ ರೈತರ ಸ್ವಇಚ್ಛೆ ಕಡ್ಡಾಯವಾಗಲಿ

ಭೂಸ್ವಾಧೀನಕ್ಕೆ ರೈತರ ಸ್ವಇಚ್ಛೆ ಕಡ್ಡಾಯವಾಗಲಿ

0

ದೇವನಹಳ್ಳಿ ರೈತರ ಹೋರಾಟಕ್ಕೆ ಕೊನೆಗೂ ಜಯ ಲಭಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಹೋರಾಟಕ್ಕೆ ಮಣಿದು ಭೂಸ್ವಾಧೀನದ ಅಂತಿಮ ಪ್ರಕಟಣೆಯನ್ನು ರದ್ದುಪಡಿಸಿ ಸ್ವಇಚ್ಛೆಯಿಂದ ರೈತರು ಭೂಮಿ ಕೊಟ್ಟರೆ ಪಡೆದುಕೊಳ್ಳುವುದಾಗಿ ಹೇಳಿರುವುದು ಕ್ರಾಂತಿಕಾರಿ ನಿರ್ಣಯ. ಇದನ್ನು ಕಾನೂನು ರೀತ್ಯ ಕಡ್ಡಾಯಗೊಳಿಸಬೇಕು. ಎಲ್ಲೇ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿ, ಅಲ್ಲಿ ಮೊದಲು ರೈತರು ಸ್ವಇಚ್ಛೆಯಿಂದ ಭೂಮಿ ಕೊಡಲು ಮುಂದೆ ಬರಬೇಕು. ಬಲವಂತ ಸ್ವಾಧೀನಕ್ಕೆ ಅವಕಾಶವಿಲ್ಲ. ಇದು ಭೂಸ್ವಾಧೀನ ಕಾಯ್ದೆಯಲ್ಲಿ ಸೇರ್ಪಡೆಗೊಂಡಲ್ಲಿ ಸಾಮಾಜಿಕ ಬದ್ಧತೆಗೆ ಅರ್ಥ ಬರುತ್ತದೆ.

ದೇವನಹಳ್ಳಿ ರೈತರ ಹಾಗೆ ರಾಜ್ಯದ ಇತರ ಕಡೆಯೂ ಗ್ರಾಮೀಣ ಜನ ಭೂಸ್ವಾಧೀನ ಪ್ರಕ್ರಿಯೆಯಿಂದ ಬಳಲಿ ಬೆಂಡಾಗಿದ್ದಾರೆ. ಅವರ ಕಷ್ಟಗಳು ಕೊನೆಗೊಳ್ಳಬೇಕು ಎಂದರೆ ಕಾಯ್ದೆಗೆ ತಿದ್ದುಪಡಿ ತರಬೇಕು. ಅಲ್ಲಿಯವರೆಗೆ ಭೂಸ್ವಾಧೀನ ಪ್ರಕ್ರಿಯೆಗೆ ತಡೆ ನೀಡಬೇಕು. ಇದಕ್ಕೆ ಅಗತ್ಯಬಿದ್ದಲ್ಲಿ ಸುಗ್ರೀವಾಜ್ಞೆ ತಂದು ನಂತರದ ದಿನಗಳಲ್ಲಿ ವಿಧಾನಮಂಡಲದ ಒಪ್ಪಿಗೆ ಪಡೆಯಬಹುದು. ರೈತರ ಹಿತದ ಪ್ರಶ್ನೆ ಬಂದಾಗ ಯಾವ ಜನಪ್ರತಿನಿಧಿಯೂ ವಿರೋಧಿಸುವುದಿಲ್ಲ. ದೇವರಾಜ ಅರಸು ಉಳುವವನಿಗೇ ಭೂಮಿ ಎಂದು ಘೋಷಿಸಿದರು. ಈಗ ಒಂದು ಹೆಜ್ಜೆ ಮುಂದೆ ಹೋಗಿ ರೈತ ಸ್ವಇಚ್ಛೆಯಿಂದ ಭೂಮಿ ಕೊಡುವುದು ಕಡ್ಡಾಯ ಮಾಡಿದರೆ ಅದರಿಂದ ಲಕ್ಷಾಂತರ ಬಡ ರೈತ ಕುಟುಂಬಗಳು ಬೆಳಕು ಕಾಣುತ್ತವೆ.

ಇದಕ್ಕೆ ಈಗ ಹೋರಾಟದ ಮುಂಚೂಣಿಯಲ್ಲಿದ್ದ ಎಲ್ಲ ನಾಯಕರು ಕಾಯ್ದೆ ತಿದ್ದುಪಡಿಗೆ ಪಟ್ಟು ಹಿಡಿಯಬೇಕು. ಎಲ್ಲ ಶಾಸಕರ ಮನವೊಲಿಸಬೇಕು. ರೈತರು ಮನಃಪೂರ್ವಕವಾಗಿ ಒಪ್ಪಿದ ಮೇಲೆ ಸಾರ್ವಜನಿಕ ಪ್ರಕಟಣೆ ನೀಡಬೇಕು ಎಂದು ನಿಯಮ ಬದಲಿಸಬೇಕು. ಮೊದಲು ಶೇ. 50ರಷ್ಟು ಮುಂಗಡ ನೀಡಬೇಕು. ಉಳಿದ ಹಣಕ್ಕೆ ಆ ಭೂಮಿಯ ಮೇಲೆ ಬರುವ ಕೈಗಾರಿಕೆಯ ಪಾಲುಗಾರಿಕೆ ಬಂಡವಾಳವಾಗಿ ಹಿಡಿದು ಪ್ರತಿವರ್ಷ ನಿಗದಿತ ಆದಾಯ ರೈತನ ಕುಟುಂಬಕ್ಕೆ ಬರುವಂತೆ ಮಾಡಬೇಕು. ಯಾವುದೇ ಕಂಪನಿ ಬರಲಿ ಅದರ ಲಾಭ ಮತ್ತು ನಷ್ಟದಲ್ಲಿ ರೈತ ಪಾಲುಗಾರನಾಗಬೇಕು. ಆಗ ಸಾಮಾಜಿಕ ನ್ಯಾಯಕ್ಕೆ ಅರ್ಥ ಬರುತ್ತದೆ. ಅಪಘಾತ, ನೈಸರ್ಗಿಕ ವಿಕೋಪಗಳಲ್ಲಿ ಮಾತ್ರ ಪರಿಹಾರ ನೀಡುವುದು. ಭೂಮಿ ಆಸ್ತಿ ಎಂದು ಪರಿಗಣಿತವಾದಾಗ ಅದಕ್ಕೆ ಪರಿಹಾರ ಕೊಡಲು ಬರುವುದಿಲ್ಲ. ಭೂಮಿಯನ್ನು ಕೃಷಿಗೆ ಬದಲು ಬೇರೆ ಉದ್ದೇಶಕ್ಕೆ ಬಳಸಿಕೊಂಡಾಗ ಅದರ ಲಾಭ ಭೂಮಾಲೀಕ ರೈತನಿಗೂ ಸಲ್ಲಬೇಕು. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ತಿದ್ದುಪಡಿ ತರುವುದು ಅಗತ್ಯ. ಈ ತಿದ್ದುಪಡಿಗಾಗಿ ದೇವನಹಳ್ಳಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಸಿನಿಮಾ ನಟರು, ಸಾಹಿತಿಗಳು, ದಲಿತ ಮತ್ತು ಹಿಂದುಳಿದ ವರ್ಗಗಳ ಸಂಘಟನೆಗಳು, ರೈತ ಸಂಘಗಳು ಒಗ್ಗಟ್ಟಿನ ಹೋರಾಟವನ್ನು ಮುಂದುವರಿಸಿ ಹೋರಾಟಕ್ಕೆ ತಾರ್ಕಿಕ ಸ್ವರೂಪ ನೀಡಬೇಕು.

ಕಾಂಗ್ರೆಸ್ ಈ ವಿಷಯದಲ್ಲಿ ಒಂದು ಕ್ರಾಂತಿಕಾರಿ ನಿರ್ಣಯ ಕೈಗೊಳ್ಳುವ ಸುವರ್ಣ ಅವಕಾಶ ಈಗ ಲಭಿಸಿದೆ. ಇದಕ್ಕೆ ರಾಷ್ಟ್ರಮಟ್ಟದಲ್ಲೂ ಕಾಂಗ್ರೆಸ್ ಪಕ್ಷ ಇದನ್ನು ಆಂದೋಲನವಾಗಿ ಕೈಗೊಳ್ಳಬಹುದು. ಸಾಮಾಜಿಕ ನ್ಯಾಯದಲ್ಲಿ ಪ್ರಮುಖ ಆರ್ಥಿಕ ಸಮಪಾಲು. ರೈತ-ಉದ್ಯಮಿ ಸಮಪಾಲು ಹೊಂದಿದಾಗಲೇ ಸಮಸಮಾಜ ತಲೆಎತ್ತಲು ಸಾಧ್ಯ. ಅದಕ್ಕೆ ಕಾಂಗ್ರೆಸ್ ಸರ್ಕಾರ ಕಾರಣವಾಗಬಹುದಾದ ಅವಕಾಶ ಈಗ ಲಭಿಸಿದೆ. ದೇವನಹಳ್ಳಿ ರೈತರ ಹೋರಾಟ ಕರ್ನಾಟಕದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯಬೇಕೆಂದರೆ ಭೂಸ್ವಾಧೀನಕ್ಕೆ ರೈತನ ಸ್ವಇಚ್ಛೆ ಕಡ್ಡಾಯ ಮಾಡಬೇಕು. ಇದಕ್ಕೆ ಪ್ರತಿಪಕ್ಷಗಳ ಬೆಂಬಲ ಸಿಗುವುದರಲ್ಲಿ ಸಂದೇಹವಿಲ್ಲ. ಕರ್ನಾಟಕ ಹಿಂದಿನಿಂದಲೂ ಭೂಸುಧಾರಣೆಯಲ್ಲಿ ಮುಂಚೂಣಿಯಲ್ಲಿದೆ. ಈಗ ರೈತನ ಕೈಗೆ ಸ್ವಇಚ್ಛೆಯ ಅಸ್ತ್ರ ನೀಡಿದರೆ ಆತನನ್ನು ಯಾರೂ ಮುಟ್ಟಲಾರರು. ಉದ್ಯಮಿಗಳು ಸರ್ಕಾರದಲ್ಲಿರುವವನ್ನು ಓಲೈಸಿಕೊಂಡು ಭೂಮಿ ಕಬಳಿಸುವುದಕ್ಕೆ ಯತ್ನಿಸುತ್ತಿದ್ದರು. ಅದಕ್ಕೆ ಈಗ ಸಂಚಕಾರ ಬರಲಿದೆ.

ಅಲ್ಲದೆ ಭೂಮಿ ಸ್ವಾಧೀನಕ್ಕೆ ಹುಟ್ಟಿಕೊಳ್ಳುವ ಮಧ್ಯವರ್ತಿಗಳ ಆಟ ನಿಲ್ಲುತ್ತದೆ. ಸಾರ್ವಜನಿಕ ಹಿತ ಎಂಬ ಹೆಸರಲ್ಲಿ ಇದುವರೆಗೆ ನಡೆಯುತ್ತಿದ್ದ ರೈತನ ಶೋಷಣೆ ನಿಲ್ಲಲಿದೆ. ಸ್ವಇಚ್ಛೆ ಇಲ್ಲದೆ ಭೂಸ್ವಾಧೀನ ಇಲ್ಲ ಎಂದಾದರಲ್ಲಿ ರೈತ ಸರ್ವತಂತ್ರ ಸ್ವತಂತ್ರ. ಯಾವ ನಾಯಕನ ಮರ್ಜಿ ಹಿಡಿಯಬೇಕಾದ ಅಗತ್ಯವಿಲ್ಲ. ಪರಿಹಾರಕ್ಕಾಗಿ ವರ್ಷಗಟ್ಟಲೆ ಕಂದಾಯ ಕಚೇರಿಗೆ ಅಲೆಯುವುದು ತಪ್ಪಲಿದೆ. ಯಾವುದೇ ಕಾರ್ಖಾನೆ ಬರಲಿ ಅದರಲ್ಲಿ ರೈತನ ಪಾಲುಗಾರಿಕೆ ಇದೆ ಎಂದ ಕೂಡಲೇ ರೈತನನ್ನು ನೋಡುವ ರೀತಿಯೇ ಬದಲಾಗುತ್ತದೆ. ಇದು ಬಹಳ ವರ್ಷಗಳ ಹಿಂದೆಯೇ ಆಗಬೇಕಿತ್ತು. ಈಗ ಕಾಲ ಕೂಡಿ ಬಂದಿದೆ. ತಮ್ಮ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಲು ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ಕೂಡಿ ಬಂದಿದೆ. ಈ ದೃಷ್ಟಿಯಿಂದ ಕರ್ನಾಟಕ ಬೇರೆ ರಾಜ್ಯಗಳಿಗೆ ಮಾದರಿಯಾಗಲಿದೆ. ಕೃಷಿ-ಕೈಗಾರಿಕೆ ಅಕ್ಷರಶಃ ಕೂಡಿ ಸಾಗಲು ಈ ಕಾಯ್ದೆ ಸಹಕಾರಿಯಾಗಲಿದೆ. ಎಲ್ಲಿ ಕೈಗಾರಿಕೆ ಬರಬೇಕು, ಎಲ್ಲಿ ಕೃಷಿ ಇರಬೇಕು ಎಂಬುದನ್ನು ಉದ್ಯಮಿಗಳು, ರೈತರು ಕೂಡಿ ತೀರ್ಮಾನಿಸಲಿ. ಸರ್ಕಾರ ಅವರ ಆಶಯದಂತೆ ನಡೆದುಕೊಂಡರೆ ಸಾಕು.

NO COMMENTS

LEAVE A REPLY

Please enter your comment!
Please enter your name here

Exit mobile version