ಪುತ್ತೂರು: “ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವರಾಜ ಅರಸು ಅವರಿಗಿಂತ ಒಂದು ದಿನ ಹೆಚ್ಚು ಆಡಳಿತ ಮಾಡುತ್ತಾರೆ. ಆ ಬಳಿಕ ನವೆಂಬರ್ ತಿಂಗಳ ಒಳಗಾಗಿ ಅವರು ರಾಜೀನಾಮೆ ನೀಡುತ್ತಾರೆ” ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಭವಿಷ್ಯ ನುಡಿದಿದ್ದಾರೆ.
ಕಡಬ ತಾಲೂಕಿನ ಸವಣೂರು ಬಳಿಯ ಆರೆಲ್ತಡಿ ಗ್ರಾಮದೈವ ಕೆಡೆಂಜೋಡಿತ್ತಾಯಿ ದೈವಸ್ಥಾನದಲ್ಲಿ ತಂಬಿಲ ಸೇವೆ ನಡೆಸಿದ ಬಳಿಕ ಕುಂಜಾಡಿಯಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ನವೆಂಬರ್ ತಿಂಗಳ ಒಳಗಾಗಿ ಸಿದ್ದರಾಮಯ್ಯ ರಾಜೀನಾಮೆ ಕೊಡದಿದ್ದರೆ ಡಿಕೆಶಿ ಬಲವಂತವಾಗಿ ಕುರ್ಚಿ ಎಳೆದುಕೊಂಡು ಕುಳಿತುಕೊಳ್ಳುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ” ಎಂದು ಹೇಳಿದರು.
“ಡಿಕೆಶಿ ಮತ್ತು ಸಿದ್ದರಾಮಯ್ಯ ಅವರು ಅಧಿಕಾರ 50-50 ಅಧಿಕಾರ ಹಂಚಿಕೆಯನ್ನು ಮಾಡಿಕೊಂಡಿದ್ದಾರೆ ಎಂದು ನಾನು ಸಂಡೂರಿನಲ್ಲಿ ನಡೆದ ಉಪಚುನಾವಣೆಯ ಸಂದರ್ಭದಲ್ಲಿಯೇ ಹೇಳಿದ್ದೆ. ಅದೀಗ ನಿಜವಾಗುತ್ತಿದೆ. ಡಿಕೆಶಿ ಈಗಾಗಲೇ ಸಿಎಂ ಕುರ್ಚಿಗೆ ಬುನಾದಿ ಹಾಕಲು ಶುರು ಮಾಡಿದ್ದಾರೆ” ಎಂದರು.
“ನನಗೆ ತಿಳಿದ ಮಾಹಿತಿ ಪ್ರಕಾರ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುತ್ತಾರೆ. ಅಧಿಕಾರ ಪಡೆಯಲೇಬೇಕು ಎನ್ನುವ ಆತುರದಲ್ಲಿ ಡಿಕೆಶಿ ಇದ್ದಾರೆ. ರಾಜ್ಯದಲ್ಲಿ ಅತೀ ಹೆಚ್ಚು ದಿನಗಳ ಕಾಲ ಆಡಳಿತ ಮಾಡಿದವರು ದೇವರಾಜ ಅರಸು. ಅವರಿಗಿಂತ ಒಂದು ದಿನ ಹೆಚ್ಚು ಆಡಳಿತ ಮಾಡಿದ ಮೇಲೆ ನಾನು ಸೀಟು ಬಿಟ್ಟುಕೊಡುತ್ತೇನೆ ಎಂದು ಹೈಕಮಾಂಡ್ ಮುಂದೆ ಅವರು ಒಪ್ಪಂದ ಮಾಡಿಕೊಂಡಿದ್ದರು.” ಎಂದು ತಿಳಿಸಿದರು.
“ರಾಜ್ಯದ ಮುಖ್ಯಮಂತ್ರಿ ಬಗ್ಗೆ ಆರೋಪ ಮಾಡಬೇಕು ಎನ್ನುವ ವ್ಯಕ್ತಿತ್ವ ನನ್ನದಲ್ಲ. ಆದರೆ, ಇಡೀ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣ ಕುಂಠಿತಗೊಂಡಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಅನುದಾನದ ಹಿನ್ನಲೆಯಲ್ಲಿ ನಮಗೆ ಸಿಗುತ್ತಿದೆ. ರಾಜ್ಯದ ಉಳಿದ ಭಾಗಗಳ ಶಾಸಕರಿಗೆ ಯಾವುದೇ ಅನುದಾನ ಇಲ್ಲ. ಗ್ಯಾರಂಟಿಯೂ ಇಲ್ಲ. ಅನುದಾನವೂ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ.” ಎಂದರು.
“ಬಿಜೆಪಿ ಪರವಾಗಿ ಮತ ಚಲಾಯಿಸುವುದಕ್ಕೆ ಜನತೆ ತುದಿಕಾಲಲ್ಲಿ ನಿಂತಿದ್ದಾರೆ. ಆದ್ದರಿಂದ ಒಳ್ಳೆಯ ಮೆಜಾರಿಟಿಯಲ್ಲಿ ಬಿಜೆಪಿ ಮುಂದಿನ ಬಾರಿಗೆ ರಾಜ್ಯದಲ್ಲಿ ಅಧಿಕಾರ ಪಡೆಯಲಿದೆ” ಎಂದು ಹೇಳಿದರು.
“ಮುಂದಿನ ದಿನಗಳಲ್ಲಿ ಒಂದಾಗಿ ಸೇರಿಕೊಂಡು ರಾಜ್ಯದಲ್ಲಿ ಬಿಜೆಪಿಯನ್ನು ಬಲಿಷ್ಟವಾಗಿ ಕಟ್ಟುತ್ತೇವೆ. ಚುನಾವಣೆಯಲ್ಲಿ ಮೆಜಾರಿಟಿ ಪಡೆದುಕೊಂಡು ಅಧಿಕಾರ ಪಡೆಯಲಿದ್ದೇವೆ. ಬಣ ರಾಜಕೀಯ ಪ್ರತಿಯೊಂದೂ ಪಕ್ಷದಲ್ಲಿಯೂ ಇದೆ. ಇದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಬಿಜೆಪಿ ಶಿಸ್ತಿನ ಪಕ್ಷವೇ. ಶಿಸ್ತನ್ನು ಮೀರಿದವರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಅವರು ಮಾಡುತ್ತಾರೆ. ರಾಷ್ಟ್ರೀಯ ನಾಯಕರುಗಳು ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.” ಎಂದು ವಿಶ್ವಾಸ ವ್ಯಕ್ತಪಡಿಸಿದರು.