Home ನಮ್ಮ ಜಿಲ್ಲೆ ಉತ್ತರ ಕನ್ನಡ ಇಡಿ ದಾಳಿ : ಶಾಸಕ ಸೈಲ್ ಮನೆಯಲ್ಲಿ ಸಿಕ್ಕಿದ್ದು 1.7 ಕೋಟಿ, 6.7 ಕೆಜಿ ಚಿನ್ನ

ಇಡಿ ದಾಳಿ : ಶಾಸಕ ಸೈಲ್ ಮನೆಯಲ್ಲಿ ಸಿಕ್ಕಿದ್ದು 1.7 ಕೋಟಿ, 6.7 ಕೆಜಿ ಚಿನ್ನ

0

ಬೆಂಗಳೂರು: ಇಡಿ ದಾಳಿ ಕರ್ನಾಟಕದಲ್ಲಿ ಮತ್ತೆ ಚರ್ಚೆಯ ವಿಚಾರ. ಕರ್ನಾಟಕದ ವಿಧಾನ ಮಂಡಲದ ಮುಂಗಾರು ಅಧಿವೇಶನದ ಸಂದರ್ಭದಲ್ಲಿಯೇ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ನಿವಾಸದ ಮೇಲೆ ಬುಧವಾರ ಇಡಿ ದಾಳಿ ನಡೆಸಿತ್ತು.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಬೆಂಗಳೂರಿನ ಸದಾಶಿವ ನಗರದ ನಿವಾಸದ ಮೇಲೆ ದಾಳಿ ನಡೆಸಿ. ದಾಖಲೆಗಳ ಪರಿಶೀಲನೆ ಕೈಗೊಂಡಿತ್ತು. ಶಾಸಕರ ನಿವಾಸಕ್ಕೆ ಹೊರಗಿನಿಂದ ಎಲ್ಲರ ಪ್ರವೇಶ ನಿಷೇಧಿಸಲಾಗಿತ್ತು.

ಬೇಲೆಕೇರಿ ಬಂದರಿನಿಂದ ಕಬ್ಬಿಣದ ಅದಿರು ಕಳ್ಳ ಸಾಗಾಣಿಕೆ, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತೀಶ ಸೈಲ್ ಅವರ ನಿವಾಸ ಹಾಗೂ ಈ ಪ್ರಕರಣದಲ್ಲಿ ಭಾಗಿಯಾದ ಇತರ ಕಚೇರಿ, ನಿವಾಸಗಳಲ್ಲಿ ಇಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದರು.

ಕಾರವಾರ, ಗೋವಾ, ಮುಂಬೈ ಹಾಗೂ ನವದೆಹಲಿಯ ವಿವಿಧೆಡೆ ಇಡಿ ಅಧಿಕಾರಿಗಳ ಬೆಂಗಳೂರು ವಿಭಾಗದ ತಂಡ ಪರಿಶೀಲನೆಯನ್ನು ಕೈಗೊಂಡಿತ್ತು ಎಂದು ಜಾರಿ ನಿರ್ದೇಶನಾಲಯ ಸಾಮಾಜಿಕ ಜಾಲತಾಣವಾದ ತನ್ನ ʻಎಕ್ಸ್ʼ ಖಾತೆಯಲ್ಲಿ ಮಾಹಿತಿ ತಿಳಿಸಿದೆ.

ಇನ್ನು ಈ ದಾಳಿ ವೇಳೆ ದಾಖಲೆಗಳನ್ನು ಪರಿಶೀಲನೆ ನಡೆಸಿ 1.68 ಕೋಟಿ ರೂ. ನಗದು, 6.75 ಕೆಜಿ ತೂಕದ ಚಿನ್ನದ ಆಭರಣ ಹಾಗೂ ಚಿನ್ನದ ಬಿಸ್ಕತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಪ್ರಕರಣದಲ್ಲಿ ಭಾಗಿಯಾದ್ದವರ ಬ್ಯಾಂಕ್ ಖಾತೆಯಲ್ಲಿ ಅಂದಾಜು 14.13 ಕೋಟಿ ರೂ. ಮೊತ್ತವನ್ನು ತಡೆಹಿಡಿಯಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಕಾರವಾರ ಕ್ಷೇತ್ರದಲ್ಲಿ 77,445 ಮತಗಳನ್ನು ಪಡೆದು ಕಾಂಗ್ರೆಸ್‌ನ ಸತೀಶ್ ಸೈಲ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಎದುರಾಳಿಯಾಗಿದ್ದ ಬಿಜೆಪಿಯ ರೂಪಾಲಿ ಸಂತೋಷ್ ನಾಯಕ್ 75,307 ಮತಗಳನ್ನು ಪಡೆದಿದ್ದಾರೆ.

ಜೈಲು ಶಿಕ್ಷೆಯಾಗಿತ್ತು: 2024ರಲ್ಲಿ ವಶಪಡಿಸಿಕೊಂಡ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ 6 ಪ್ರಕರಣಗಳಲ್ಲಿ ಕಾರವಾರ ಶಾಸಕ ಸತೀಶ್ ಸೈಲ್‌ಗೆ ವಿಚಾರಣಾ ನ್ಯಾಯಾಲಯ ತಲಾ 7 ವರ್ಷದ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಈ ಆದೇಶವನ್ನು ಪ್ರಶ್ನೆ ಮಾಡಿ ಶಾಸಕರು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಆದ್ದರಿಂದ ಅವರ ದೋಷಾರೋಪಣೆಯನ್ನು ಕರ್ನಾಟಕ ಹೈಕೋರ್ಟ್ ಅಮಾನತುಗೊಳಿಸಿತ್ತು. ಅಧೀನ ನ್ಯಾಯಾಲಯದ ತೀರ್ಪಿನ ಬಳಿಕ ಕೆಲವು ದಿನಗಳ ಕಾಲ ಶಾಸಕರು ಜೈಲು ಸೇರಿದ್ದರು.

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 2010ರಲ್ಲಿ ಅಂಕೋಲಾ ಪೊಲೀಸ್ ಠಾಣೆಯ‌ಲ್ಲಿ ಮೊದಲಿಗೆ ದೂರು ದಾಖಲಿಸಲಾಗಿತ್ತು. ಈ ಪ್ರಕರಣದ ತನಿಖೆ ಬಳಿಕ ಸಿಬಿಐ ಕೈ ಸೇರಿತ್ತು.

2014ರಲ್ಲಿ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. 2024ರಲ್ಲಿ ತೀರ್ಪು ಪ್ರಕಟವಾಗಿತ್ತು. ಉದ್ಯಮಿ, ಮಲ್ಲಿಕಾರ್ಜುನ ಶಿಪ್ಪಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಸತೀಶ್‌ ಸೈಲ್‌ ಪ್ರಕರಣದಲ್ಲಿ ಆರೋಪಿಯಾಗಿದ್ದರು.

ಈ ಪ್ರಕರಣದಲ್ಲಿ ಶಾಸಕ ಸತೀಶ್‌ ಸೈಲ್‌ ಹಾಗೂ ಮೊದಲನೇ ಆರೋಪಿ ಮಹೇಶ್‌ ಜೆ. ಬಿಳಿಯೆ ಸೇರಿದಂತೆ ಎಲ್ಲಾ ಆರೋಪಿಗಳು ದೋಷಿಗಳೆಂದು ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯವು ಆದೇಶಿಸಿತ್ತು. ಬಳಿಕ ಶಾಸಕರು ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version