ಮಹದಾಯಿ ಯೋಜನೆ: ಬಿಜೆಪಿ, ಜೆಡಿಎಸ್ ಕರ್ನಾಟಕದ ಜನರ ವಿರುದ್ಧ ಸೇಡು

0
119

ಬೆಂಗಳೂರು: ಹುಬ್ಬಳ್ಳಿ-ಧಾರವಾಡ, ಸುತ್ತಮುತ್ತಲಿನ ಪಟ್ಟಣಗಳು ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಮಹದಾಯಿ ಯೋಜನೆಗೆ ಮತ್ತೆ ಅಡ್ಡಿ ಎದುರಾಗಿದೆ. ಈ ಯೋಜನೆಗೆ ಗೋವಾ ರಾಜ್ಯ ವಿರೋಧ ವ್ಯಕ್ತಪಡಿಸುತ್ತಲೇ ಇದೆ.

ಈಗ ‘ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ’ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಭೂಪೇಂದ್ರ ಯಾದವ್‍ ತಿಳಿಸಿದ್ದಾರೆ ಎಂದು ಗೋವಾದಲ್ಲಿ ಚರ್ಚೆಗಳು ನಡೆಯುತ್ತಿವೆ.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ರಾಜ್ಯದ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ವಿರುದ್ಧ ಆರೋಪವನ್ನು ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವರು ಪೋಸ್ಟ್ ಹಾಕಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು?: ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂಬ ಕೇಂದ್ರ ಸರ್ಕಾರದ ನಿರ್ಧಾರ ಕರ್ನಾಟಕದ ಜನತೆಗೆ ಬಗೆಯುವ ದ್ರೋಹವಾಗಿದ್ದು, ಇದನ್ನು ಕರ್ನಾಟಕ ಸರ್ಕಾರ ಅತ್ಯುಗ್ರವಾಗಿ ಖಂಡಿಸುವುದು ಮಾತ್ರವಲ್ಲ ಈ ಅನ್ಯಾಯದ ವಿರುದ್ಧ ಸಮಸ್ತ ಕನ್ನಡಿಗರೊಂದಿಗೆ ಹೋರಾಟ ನಡೆಸಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಭೂಪೇಂದ್ರ ಯಾದವ್‍ ಅವರೇ ನನಗೆ ತಿಳಿಸಿದ್ದಾರೆ ಎಂದು ಸಾವಂತ್ ಅವರು ಇಂದು ವಿಧಾನಸಭೆಯಲ್ಲಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಈ ನಿರ್ಧಾರ ಕರ್ನಾಟಕದ ಹಿತಾಸಕ್ತಿ ಮೇಲಿನ ಇನ್ನೊಂದು ಪ್ರಹಾರವಾಗಿದೆ. 2018ರಲ್ಲಿ ಮಹದಾಯಿ ಜಲವಿವಾದ ನ್ಯಾಯಮಂಡಳಿ 13.42 ಟಿಎಂಸಿ ನೀರನ್ನು ನಮ್ಮ ರಾಜ್ಯಕ್ಕೆ ನಿಗದಿಪಡಿಸಿ ಐತೀರ್ಪು ನೀಡಿದ್ದರೂ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯಿಂದಾಗಿ ಯೋಜನೆಯ ಅನುಷ್ಠಾನ ಸಾಧ್ಯವಾಗುತ್ತಿಲ್ಲ ಎಂದು ಸಿದ್ದರಾಮಯ್ಯ ದೂರಿದ್ದಾರೆ.

ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ, ಬಾಗಲಕೋಟೆ ಪ್ರದೇಶದ ಜನತೆಯ ಕುಡಿಯುವ ನೀರಿಗಾಗಿ 40 ಟಿಎಂಸಿ ನೀರನ್ನು ಬಳಸಿಕೊಳ್ಳುವ ಕಳಸಾ-ಬಂಡೂರಿ ಯೋಜನೆ ಈಗಾಗಲೇ ಅನುಷ್ಠಾನಕ್ಕೆ ಸಿದ್ದಗೊಂಡಿದ್ದು, ಗೋವಾದ ಬಿಜೆಪಿ ಸರ್ಕಾರದ ಜೊತೆ ಷಾಮೀಲಾಗಿ ಕೇಂದ್ರ ಸರ್ಕಾರ ನಿರಂತರವಾಗಿ ಅಡ್ಡಗಾಲು ಹಾಕುತ್ತಿದೆ ಎಂದು ಆರೋಪಿಸಿದ್ದಾರೆ.

ರಾಜ್ಯದ ಬಿಜೆಪಿ ನಾಯಕರಾಗಲಿ, ಕನ್ನಡಿಗರಿಂದಲೇ ಆರಿಸಿ ಹೋಗಿರುವ ಬಿಜೆಪಿ ಮತ್ತು ಜೆಡಿಎಸ್ ಸಂಸದರಾಗಲಿ ಈ ಅನ್ಯಾಯದ ವಿರುದ್ಧ ದನಿ ಎತ್ತಲಾಗದಷ್ಟು ನಿರ್ವಿರ್ಯರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿದ ಕರ್ನಾಟಕದ ಜನತೆಯ ವಿರುದ್ಧ ಸೇಡು ತೀರಿಸಿಕೊಳ್ಳುವ ದುರುದ್ದೇಶದಿಂದಲೇ ಮಹದಾಯಿ ಯೋಜನೆಗೆ ಪರಿಸರ ಖಾತೆಯ ಅನುಮತಿಯನ್ನು ನಿರಾಕರಿಸಿರುವುದು ಸ್ಪಷ್ಟವಾಗಿದೆ ಎಂದು ಮುಖ್ಯಮಂತ್ರಿಗಳು ಗಂಭೀರ ಆರೋಪ ಮಾಡಿದ್ದಾರೆ.

ತೆರಿಗೆ ಹಂಚಿಕೆ, ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ಅನುದಾನ ಕಡಿತವೂ ಸೇರಿದಂತೆ ನೆಲ-ಜಲ-ಭಾಷೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ವಿಚಾರದಲ್ಲಿ ನಿರಂತರವಾಗಿ ಅನ್ಯಾಯ ಎಸಗುತ್ತಿದೆ. ಕೇಂದ್ರ ಸರ್ಕಾರದ ಈ ಮಲತಾಯಿ ಧೋರಣೆ ವಿರುದ್ಧ ನಾಡಿನ ಸಮಸ್ತ ಕನ್ನಡಿಗರನ್ನು ಜೊತೆಯಲ್ಲಿ ಕಟ್ಟಿಕೊಂಡು ಹೋರಾಟ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅಧಿವೇಶನದಲ್ಲಿ ಚರ್ಚೆ: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, “ಮಹದಾಯಿ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ” ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಭೂಪೇಂದ್ರ ಯಾದವ್ ತಮಗೆ ತಿಳಿಸಿದ್ದಾರೆ ಎಂದು ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದಾರೆ ಎಂಬುದು ಈಗ ಚರ್ಚೆಯ ವಿಚಾರವಾಗಿದೆ.

ಕರ್ನಾಟಕದ ಕಾನೂನು ಸಚಿವ ಎಚ್. ಕೆ. ಪಾಟೀಲ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, “ಮಹದಾಯಿ ಯೋಜನೆ ಕುರಿತು ಗೋವಾ ಮುಖ್ಯಮಂತ್ರಿಗಳ ಹೇಳಿಕೆಯನ್ನು ಕರ್ನಾಟಕ ಖಂಡಿಸುತ್ತದೆ” ಎಂದು ಹೇಳಿದ್ದಾರೆ.

“ಆಗಸ್ಟ್ 11ರಂದು ವಿಧಾನ ಮಂಡಲದ ಮುಂಗಾರು ಅಧಿವೇಶನ ಆರಂಭವಾಗಲಿದೆ. ಆಗ ಈ ಕುರಿತು ಚರ್ಚೆ ನಡೆಸಲಾಗುತ್ತದೆ. ಕೇಂದ್ರ ಸರ್ಕಾರ ಉತ್ತರ ಕರ್ನಾಟಕದ ಜನರು ಹಾಗೂ ರೈತರ ಹಿತಾಸಕ್ತಿ ಗಮನಿಸಿ ಯೋಜನೆ ಅನುಷ್ಠಾನಕ್ಕೆ ತಕ್ಷಣ ಅನುಮತಿ ನೀಡಬೇಕು” ಎಂದು ಸಚಿವರು ಒತ್ತಾಯಿಸಿದ್ದಾರೆ.

Previous articleಅಂಕಣ ಬರಹ: ಸಮಷ್ಟಿ ಸಮಾಜಕ್ಕೆ ಪಂಚಾಚಾರ್ಯರ ಶೃಂಗ ನಾಂದಿ
Next articleಬ್ರಿಟನ್ ತಲುಪಿದ ಪ್ರಧಾನಿ ಮೋದಿ: ಮಹತ್ವದ ದ್ವಿಪಕ್ಷೀಯ ಒಪ್ಪಂದ ನಿರೀಕ್ಷೆ

LEAVE A REPLY

Please enter your comment!
Please enter your name here