ಜಯನಗರ, ಬೆಂ.ಗ್ರಾಮಾಂತರದಲ್ಲೂ ರಾಹುಲ್ ಗಾಂಧಿ ಮತಗಳವು ತನಿಖೆ!

0
93

ಶಿವಕುಮಾರ್ ಮೆಣಸಿನಕಾಯಿ

ಈಗಾಗಲೇ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಮಹದೇವಪುರ ವಿಧಾನಸಭೆ ಮತ್ತು ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ಕುರಿತಂತೆ ಗಂಭೀರ ಆರೋಪ ಮಾಡಿ ದೇಶಾದ್ಯಂತ ಸುದ್ದಿಯಾಗಿದ್ದ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಇದೀಗ ಬೆಂಗಳೂರಿನ ಇನ್ನೆರಡು ಕ್ಷೇತ್ರಗಳಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದರ ಬೆನ್ನಲ್ಲೇ ಕೇಂದ್ರ ಸರಕಾರದ ಗುಪ್ತಚರ ವಿಭಾಗ (ಇಂಟೆಲಿಜೆನ್ಸ್ ಬ್ಯೂರೋ) ರಾಹುಲ್‌ ಗಾಂಧಿ ಕಾರ್ಯಾಚರಣೆ ಮೇಲೆ ಭಾರಿ ನಿಗಾ ಇರಿಸಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಜಯನಗರ ವಿಧಾನಸಭೆ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಲೋಪಗಳಿವೆ ಹಾಗೂ ಈ ಎರಡೂ ಕ್ಷೇತ್ರಗಳಲ್ಲಿ ಮತಗಳ್ಳತನ ನಡೆದಿದೆ ಎಂಬುದರ ಬಗೆಗೆ ರಾಹುಲ್ ಗಾಂಧಿ ನಿಯೋಜಿಸಿರುವ ತಂಡವು ಮಾಹಿತಿ ಕಲೆ ಹಾಕುತ್ತಿದೆ.

ಕೇವಲ 16 ಮತಗಳ ಅಂತರ: ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯ ರೆಡ್ಡಿ 57,781 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಬಿಜೆಪಿಯ ಸಿ.ಕೆ.ರಾಮಮೂರ್ತಿ 57,797 ಮತಗಳನ್ನು
ಪಡೆದು ಕೇವಲ 16 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಈ ಚುನಾವಣೆಯಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಇನ್ನೇನು ಗೆದ್ದೇ ಬಿಟ್ಟರು ಎನ್ನುವ ಹಂತದಲ್ಲಿ ಮರು ಮತ ಎಣಿಕೆಗೆ ಕೋರಿದ್ದೇ ಬಹುದೊಡ್ಡ ಆಘಾತ ತಂದೊಡ್ಡಿತ್ತು, ಆದಾದ ನಂತರ ಫಲಿತಾಂಶದ ಬಗೆಗೆ ಅನೇಕ ಆರೋಪಗಳು ಕೇಳಿಬಂದಿದ್ದವು. ಹೀಗಾಗಿ ಈ ಕ್ಷೇತ್ರದಲ್ಲಿನ ಚುನಾವಣಾ ಪ್ರಕ್ರಿಯೆ ಬಗೆಗೆ ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಅನುಮಾನ ವ್ಯಕ್ತಪಡಿಸುತ್ತಲೇ ಬಂದಿತ್ತು.

ಇದೀಗ ರಾಹುಲ್‌ಗಾಂಧಿ ಇದರ ಆಳ ಅಧ್ಯಯನಕ್ಕೆ ಹಾಗೂ ದಾಖಲೆಗಳ ಸಂಗ್ರಹಕ್ಕೆ ತಂಡವೊಂದನ್ನು ನಿಯೋಜಿಸಿ ದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಶೀಘ್ರದಲ್ಲೇ ಈ ಕ್ಷೇತ್ರಗಳ ಬಗೆಗೆ ದೆಹಲಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಲಿದ್ದಾರೆ. ಜಯನಗರ ವಿಧಾನಸಭೆ ಕ್ಷೇತ್ರ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕುರಿತಂತೆ ಯಾವ ಆರೋಪಗಳನ್ನು ಮುಂದಿಡುತ್ತಾರೆ. ಎಂಬ ಕುತೂಹಲ ಮೂಡಿದೆ.

ರಾಹುಲ್ ಗಾಂಧಿ ಮೇಲೆ ಕೇಂದ್ರ ಗುಪ್ತಚರರ ಕಣ್ಣು: ಬೆಂಗಳೂರಿನ ಎರಡು ಕ್ಷೇತ್ರಗಳ ಬಗೆಗೆ ರಾಹುಲ್ ಗಾಂಧಿ ನಡೆಸುತ್ತಿರುವ ಪರಿಶೀಲನೆ ಮತ್ತು ದಾಖಲೆಗಳ ಸಂಗ್ರಹದ ಮೇಲೆ ಕೇಂದ್ರ ಗುಪ್ತಚರ (ಐಬಿ) ಅಧಿಕಾರಿಗಳು ನಿರಂತರ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ರಾಹುಲ್ ತಂಡದ ಸದಸ್ಯರು ಭೇಟಿ ನೀಡುತ್ತಿರುವ ಕಡೆಗಳಲ್ಲೆಲ್ಲ ಐಬಿ ಅಧಿಕಾರಿಗಳು ಭೇಟಿ ನೀಡಿ, ವಿವರ ಪಡೆಯುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಚುನಾವಣಾಧಿಕಾರಿಗಳ ಕಚೇರಿಗೆ ನಿರಂತರ ಸಂಪರ್ಕ ಮಾಡುತ್ತಿದ್ದು, ಯಾವ ಯಾವ ಮಾಹಿತಿ ಪಡೆದಿದ್ದಾರೆ? ಎಂಬುದನ್ನು ತಿಳಿದುಕೊಳ್ಳುತ್ತಿದ್ದಾರೆ. ಗುಪ್ತಚರ ಇಲಾಖೆಯ ಮಾಹಿತಿಗಳ ಪ್ರಕಾರ, ಪ್ರತಿ ವಾರ ಬೆಂಗಳೂರು ವಲಯದ ಐಬಿ ಕಚೇರಿಯಿಂದ ಕೇಂದ್ರ ಗೃಹ ಇಲಾಖೆಗೆ ನಿರಂತರ ಮಾಹಿತಿ ರವಾನೆ ಆಗುತ್ತಿದೆ.

ಶಂಕೆಗೆ ಕಾರಣವಾಗಿರುವ 2.69 ಲಕ್ಷ ಅಂತರದ ಜಯ. ಇನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್ 8,09,355 ಮತಗಳನ್ನು ಪಡೆದರೆ ಪ್ರತಿಸ್ಪರ್ಧಿ ಬಿಜೆಪಿಯ ಡಾ.ಸಿ.ಎನ್.ಮಂಜುನಾಥ್ 10,79,002 ಮತಗಳನ್ನು ಪಡೆದು 2,69,647 ಮತಗಳ ಅಂತರದ ಗೆಲುವು ಸಾಧಿಸಿದ್ದರು. ಈ ಫಲಿತಾಂಶದ ಬಗೆಗೂ ಕಾಂಗ್ರೆಸ್ ಹಲವು ರೀತಿಯ ಸಂಶಯಗಳನ್ನು ಹೊರಹಾಕಿದೆ. ಹೀಗಾಗಿ ಈ ಕ್ಷೇತ್ರದ ದಾಖಲೆಗಳನ್ನು ಸಂಗ್ರಹ ಮಾಡುತ್ತಿದೆ.

Previous articleರಾಮನಗರ: 7 ದಿನದಲ್ಲಿಯೇ ಸಮೀಕ್ಷೆ ಪೂರ್ಣಗೊಳಿಸಿದ ಶಿಕ್ಷಕಿ, ಡಿಸಿ ಶ್ಲಾಘನೆ
Next articleಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಮನೆ ಮೇಲೆ ಲೋಕಾಯುಕ್ತ ದಾಳಿ

LEAVE A REPLY

Please enter your comment!
Please enter your name here