ಕೆ.ವಿ.ಪರಮೇಶ್
ಜಾತಿಗಣತಿ ಸದ್ಯ ಕರ್ನಾಟಕದಲ್ಲಿ ಭಾರೀ ಚರ್ಚೆಯಲ್ಲಿರು ವಿಚಾರ. ಇತ್ತೀಚೆಗೆ ಸಭೆ ಸೇರಿದ್ದ ಹಿಂದುಳಿದ ವರ್ಗಗಳ ಸಚಿವರು ಹಾಗೂ ಮುಖಂಡರ ಸಭೆಯಲ್ಲಿ ಕೈ ಗೊಂಡಿದ್ದ ನಿರ್ಣಯದಂತೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಯಶಸ್ವಿಗೊಳಿಸಲು ರಾಜ್ಯವ್ಯಾಪಿ ಜನ ಜಾಗೃತಿಗೆ ವಿಭಾಗವಾರು ನಾಲ್ವರು ಸಚಿವರ ನೇತೃತ್ವದಲ್ಲಿ ಶಾಸಕರು ಮತ್ತು ಮುಖಂಡರನ್ನೊಳಗೊಂಡ ಸಮಿತಿ ರಚಿಸಲಾ ಗಿದೆ.
ಈ ಸಮೀಕ್ಷೆ ಮುಖೇನವೇ ಸಿಎಂ ಸಿದ್ದರಾಮಯ್ಯ ಅವರ ವರ್ಚಸ್ಸು ಹೆಚ್ಚಿಸಲು ಹಿಂದುಳಿದ ವರ್ಗ ಸಂಕಲ್ಪ ತೊಟ್ಟಿದೆ. ಬೆಂಗಳೂರು ವಿಭಾಗಕ್ಕೆ ಬೈರತಿ ಸುರೇಶ್, ಕಲಬುರಗಿ ವಿಭಾಗಕ್ಕೆ ಬೋಸರಾಜ್, ಮೈಸೂರು ವಿಭಾಗಕ್ಕೆ ಮಧು ಬಂಗಾರಪ್ಪ ಹಾಗೂ ಬೆಳಗಾವಿ ವಿಭಾಗಕ್ಕೆ ಸಂತೋಷ್ ಲಾಡ್ ಅವರನ್ನು ನೇಮಿಸಲಾಗಿದೆ. ಸಮಿತಿ ಸದಸ್ಯರು ಕೂಡಲೇ ವಿಭಾಗವಾರು ಸಭೆ ಮತ್ತು ಸುದ್ದಿಗೋಷ್ಠಿಗಳನ್ನು ನಡೆಸಿ ಹಿಂದುಳಿದ ವರ್ಗಗಳಲ್ಲಿ ಜಾಗೃತಿ ಮೂಡಿಸಿ ಮತ್ತು ಹಿಂದುಳಿದ ವರ್ಗಗಳ ಸಮೀಕ್ಷೆಯನ್ನು ಸ್ವಾಗತಿಸಿ ಬೆಂಬಲಿಸಲು ನಿರ್ಧರಿಸಲಾಗಿದೆ.
ಜೊತೆಗೆ ಸರ್ಕಾರ ಕೈಗೊಂಡಿರುವ ತೀರ್ಮಾನ ಸಕಾಲಿಕ ಮತ್ತು ಸಮಂಜಸ ಎಂಬುದನ್ನು ಮನವರಿಕೆ ಮಾಡಿಕೊಡುವುದು ಹಾಗೂ ಕಾಂಗ್ರೆಸ್ ಪಕ್ಷದ ನಿಲುವಿಗೆ ಅನುಗುಣವಾಗಿ, ಸಾಮಾಜಿಕ ನ್ಯಾಯದ ಪರಿಪಾಲನೆ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಲು ತೀರ್ಮಾನಿಸಲಾಗಿದೆ.
ಸಮೀಕ್ಷೆ ಯಶಸ್ವಿಯಾಗಬೇಕಿದೆ. ಆ ಮೂಲಕ ಹಿಂದುಳಿದ ವರ್ಗಗಳ ಫಲಾನುಭವಿಗಳನ್ನು ಗುರುತಿಸಲು ಮತ್ತು ಅವರ ಅಭಿವೃದ್ಧಿಗೆ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಲು ನೆರವಾಗಬೇಕಿದೆ. ಫಲಾನುಭವಿಗಳಿಗೆ ಸರ್ಕಾರ ವತಿಯಿಂದ ನೇರವಾಗಿ ಹಣ ವರ್ಗಾವಣೆ ಅಥವಾ ಅನುದಾನ ಡಿಬಿಟಿ ಮುಖೇನ ಪಾವತಿಸಲು ಅನುಕೂಲ ಆಗಲಿದೆ.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಭರವಸೆಯಂತೆ ಈ ಸಮೀಕ್ಷೆ ನಡೆಯುತ್ತಿದೆ. ಹಿಂದುಳಿದ ವರ್ಗಗಳಿಗೆ ಸಿಗಬೇಕಾದ ಸರ್ಕಾರದ ಸವಲತ್ತುಗಳನ್ನು ಒದಗಿಸಲು ಸಮೀಕ್ಷೆ ಪ್ರಯೋಜನವಾಗಲಿದೆ. ಸಣ್ಣಸಮುದಾಯಗಳಿಗೆ ಈ ಬಗ್ಗೆ ಅರಿವು ಮೂಡಿಸುವಂತೆ ಸಮಿತಿಗಳ ಸದಸ್ಯರಿಗೆ ತಿಳಿಸಲಾಗಿದೆ. ಜಾಗೃತ ಸಮಿತಿಯ ವಿಶೇಷ ಆಹ್ವಾನಿತರಾಗಿ ಹಿಂದುಳಿದ ವರ್ಗಗಳ ಸಮುದಾಯದಗಳ ಎಲ್ಲ ಸಂಸದರು, ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರು, ವಿವಿಧ ನಿಗಮ/ ಮಂಡಳಿ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ಅಧ್ಯಕ್ಷರು, ಹಿಂದುಳಿದ ವರ್ಗಗಳ ಎಲ್ಲ ಸಮುದಾಯಗಳ ರಾಜ್ಯಘಟಕ ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ಪರಿಗಣಿಸಲಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಯಶಸ್ವಿಗೊಳಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಕೈ ಬಲಪಡಿಸುವುದು ಹಿಂದುಳಿದ ವರ್ಗಗಳ ನಾಯಕರ ಉದ್ದೇಶವಾಗಿದೆ.
ಸಮೀಕ್ಷೆ ಯಶಸ್ಸು ಸಿದ್ದುಗೆ ಸವಾಲು: ಹೈಕಮಾಂಡ್ ಸೂಚನೆಯಂತೆ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ಯಶಸ್ಸಿನ ಹಿಂದೆ ಅನೇಕ ಲೆಕ್ಕಾಚಾರಗಳಿವೆ. ಭವಿಷ್ಯದಲ್ಲಿ ಚುನಾವಣೆ ಟಿಕೆಟ್ ಕೇಳುವುದರಿಂದ ಹಿಡಿದು ಹಿಂದುಳಿದ ಸಮುದಾಯಗಳಿಗೆ ಸರ್ಕಾರದ ಸೌಲಭ್ಯಗಳನ್ನು ಅಧಿಕೃತವಾಗಿ ಸಾಮಾಜಿಕ ನ್ಯಾಯದಡಿ ಕಲ್ಪಿಸುವ ಮೂಲಕವೇ ಕಾಂಗ್ರೆಸ್ ಪಕ್ಷದ ಪರವಾಗಿ ಮತಬ್ಯಾಂಕ್ ಸಿದ್ದಪಡಿಸಿಕೊಳ್ಳುವುದು ಪ್ರಮುಖ ಉದ್ದೇಶ. ಪ್ರಬಲ ಸಮುದಾಯಗಳ ಪ್ರತಿರೋಧದ ನಡುವೆ ಗಣತಿ ನಡೆಯುತ್ತಿ ರುವುದು ಪ್ರಮುಖ ಸವಾಲು.