Karnataka Weather ಕುರಿತು ಅಪ್‌ಡೇಟ್ ಒಂದಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ 7 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಎಂಡಿಸಿ) ಹವಾಮಾನ ಇಲಾಖೆ ಮಾಹಿತಿ ಆಧರಿಸಿ ರಾಜ್ಯದ ಹವಾಮಾನ ಮುನ್ಸೂಚನೆ ಕೊಟ್ಟಿದೆ. ಬೆಂಗಳೂರು ನಗರದಲ್ಲಿ ಬುಧವಾರ ರಾತ್ರಿ ಭಾರೀ ಮಳೆಯಾಗಿದ್ದು, ಗುರುವಾರ ಮೋಡ ಕವಿದ ವಾತಾವರಣವಿದೆ.
ಕೆಎಸ್‌ಎನ್‌ಎಂಡಿಸಿ ಮುಂದಿನ 7 ದಿನಗಳ ಮಳೆ ಮುನ್ಸೂಚನೆ ಮತ್ತು ಎಚ್ಚರಿಕೆಗಳನ್ನು ನೀಡಿದೆ. ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಇಂದಿನಿಂದ ಸೆಪ್ಟೆಂಬರ್ 14ರ ತನಕ ಗುಡುಗು ಸಹಿತ ಜೋರಾದ ಗಾಳಿಯೊಂದಿಗೆ ಚದುರಿದಂತೆ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರೀ ಮಳೆಯಾಗಲಿದೆ ಎಂದು ಹೇಳಿದೆ.
ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಗುರುವಾರ ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಚದುರಿದಂತೆ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರೀ ಮಳೆಯಾಗಲಿದೆ.
ಕರಾವಳಿ & ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಿಗೆ & ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಕಳೆದ ಎರಡು ದಿನಗಳಿಂದ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಕೊಂಚ ಕಡಿಮೆಯಾಗಿತ್ತು.
ಕೊಡಗು ಜಿಲ್ಲೆಯಲ್ಲಿ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24ಗಂಟೆ ಅವಧಿಯಲ್ಲಿ ಸರಾಸರಿ 0.04 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 10.67 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 2688.72 ಮಿ.ಮೀ. ಮಳೆಯಾಗಿದೆ.
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು. ಇಂದಿನ ನೀರಿನ ಮಟ್ಟ 2858.48 ಅಡಿಗಳು. ಒಳಹರಿವು 3,121 ಕ್ಯುಸೆಕ್, ಹೊರ ಹರಿವು ನದಿಗೆ 2,166 ಕ್ಯುಸೆಕ್. ನಾಲೆಗೆ 500 ಕ್ಯುಸೆಕ್.
ಬೆಂಗಳೂರು ನಗರದಲ್ಲಿ ಮಳೆ: ಬೆಂಗಳೂರು ನಗರದಲ್ಲಿ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಆರಂಭವಾದ ಮಳೆ ಬಿರುಸಾಗಿ ಸುರಿದಿದೆ. ಹಲವು ಕಡೆ ಮರಗಳು ಧರೆಗುರುಳಿವೆ. ರಸ್ತೆಗಳಲ್ಲಿ ನಿಂತಿರುವ ನೀರು ಗುರುವಾರ ಬೆಳಗ್ಗೆಯೂ ಹರಿದು ಹೋಗಿಲ್ಲ.
ಸಂಚಾರಿ ಪೊಲೀಸರ ಮಾಹಿತಿ ಪ್ರಕಾರ ಟ್ರಿಲೈಟ್ ಜಂಕ್ಷನ್ ಬಳಿ ನೀರು ನಿಂತಿರುವುದರಿಂದ ಚಾಲುಕ್ಯ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿದೆ. ಹೊರಮಾವು ಬಳಿ ನೀರು ನಿಂತಿರುವುದರಿಂದ ಕಸ್ತೂರಿ ನಗರದ ಕಡೆಗೆ ನಿಧಾನಗತಿಯ ಸಂಚಾರವಿದೆ.
5ನೇ ಮುಖ್ಯ ರಸ್ತೆ ಚಾಮರಾಜಪೇಟೆಯಿಂದ 4ನೇ ಮುಖ್ಯ ರಸ್ತೆಯ ಕಡೆಗೆ ಹೋಗುವ ರಸ್ತೆಯಲ್ಲಿ ಮರ ಬಿದ್ದಿದ್ದು, ರಸ್ತೆ ಮುಚ್ಚಲಾಗಿದೆ. ಪ್ರಯಾಣಿಕರು ಪರ್ಯಾಯ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ.
ಸಿಬಿ ರಸ್ತೆ ಬಳಿ ನೀರು ನಿಂತಿರುವುದರಿಂದ ಎಎಸ್‌ಸಿ ಸೆಂಟರ್ ಕಡೆಗೆ ನಿಧಾನಗತಿಯ ಸಂಚಾರವಿದೆ. ಚಂದ್ರಿಕಾ ಹೋಟೆಲ್‌ನಿಂದ ಎಲ್‌ಆರ್‌ಡಿಇ ಜಂಕ್ಷನ್ ಕಡೆಗೆ ಹೋಗುವ ರಸ್ತೆಯಲ್ಲಿ ಮರ ಬಿದ್ದ ಕಾರಣ ನಿಧಾನಗತಿಯ ವಾಹನ ಸಂಚಾರವಿದೆ.
ಹೊರಮಾವು ಬಳಿ ನೀರು ನಿಂತಿರುವುದರಿಂದ ರಾಮಮೂರ್ತಿನಗರದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. ಗುರುವಾರ ಸಹ ನಗರದಲ್ಲಿ ಮೋಡ ಕವಿದ ವಾತಾವರಣ ಇದ್ದು, ಸಂಜೆ ಮಳೆಯಾಗುವ ನಿರೀಕ್ಷೆ ಇದೆ.