ಶಾಲೆಗಳಿಗೆ ಸ್ಥಳೀಯ ರಜೆ: ಶಿಕ್ಷಣ ಇಲಾಖೆ ಸ್ಪಷ್ಟೀಕರಣಗಳು

0
60

ಬೆಂಗಳೂರು: ಶಾಲೆಗಳಿಗೆ ಸ್ಥಳೀಯ ರಜೆ ಘೋಷಣೆ ಮಾಡುವ ಕುರಿತು ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ನೃಪತುಂಗ ರಸ್ತೆ, ಬೆಂಗಳೂರು ಸ್ಪಷ್ಟೀಕರಣ ನೀಡಿದೆ. ಒಂದೇ ತಿಂಗಳು ಹಲವು ಹಬ್ಬ ಬರುತ್ತಿರುವ ಹಿನ್ನಲೆಯಲ್ಲಿ ಗೊಂದಲ ಉಂಟಾಗಿತ್ತು.

ಈ ಕುರಿತು ನಿರ್ದೇಶಕರು (ಫ್ರೌಢ ಶಿಕ್ಷಣ) ಜ್ಞಾಪನಾ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ. ರಾಜ್ಯದ ಎಲ್ಲಾ ಶೈಕ್ಷಣಿಕ ಜಿಲ್ಲೆಗಳ ಉಪನಿರ್ದೇಶಕರು (ಆಡಳಿತ), ಶಾಲಾ ಶಿಕ್ಷಣ ಇಲಾಖೆ, ರಾಜ್ಯದ ಎಲ್ಲಾ ಶೈಕ್ಷಣಿಕ ಬ್ಲಾಕ್‌ಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಇವರಿಗೆ ಮಾಹಿತಿಗಾಗಿ ಇದನ್ನು ಕಳಿಸಲಾಗಿದೆ.

ಈ ಜ್ಞಾಪನ ಪತ್ರವು 2025 26ನೇ ಸಾಲಿನಲ್ಲಿ ಶಾಲೆಗಳಿಗೆ ನೀಡುವ ಸ್ಥಳೀಯ ರಜೆಯ ಬಗ್ಗೆ ಸೃಷ್ಟೀಕರಣ ಕುರಿತು ಎಂಬ ವಿಷಯ ಒಳಗೊಂಡಿದೆ. ಮಾನ್ಯ ವಿಧಾನ ಪರಿಷತ್ ಸದಸ್ಯರು, ದಕ್ಷಿಣ ಶಿಕ್ಷಕರ ಕ್ಷೇತ್ರ ಪತ್ರವನ್ನು ಉಲ್ಲೇಖಿಸಲಾಗಿದೆ.

ಸ್ಪಷ್ಟನೆಗಳೇನು?: ಈ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಮಾನ್ಯ ಶಾಸಕರ ಪತ್ರದಲ್ಲಿ ಶಾಲಾ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಶಾಲೆಗೆ ನೀಡುವ ಸ್ಥಳೀಯ ರಜೆಯು ಶೈಕ್ಷಣಿಕ ವರ್ಷಕ್ಕೆ 4 ನೀಡಬಹುದಾಗಿದೆ ಎಂದು ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ತಿಳಿಸಲಾಗಿದೆ.

ಆದರೆ ಸ್ಥಳೀಯ ರಜೆಯ ವರ್ಗೀಕರಣ ಹೇಗೆ ಮಾಡಬೇಕೆಂದು ಸ್ಪಷ್ಟವಾಗಿ ತಿಳಿಸಿರುವುದಿಲ್ಲ, ಇದರರ್ಥವೇನೆಂದರೆ ಸ್ಥಳೀಯ ರಜೆಯನ್ನು ಶೈಕ್ಷಣಿಕ ವರ್ಷದಲ್ಲಿ ತಿಂಗಳಿಗೆ ಎಷ್ಟು ನೀಡಬಹುದು, ಕೆಲವೊಮ್ಮೆ ಧಾರ್ಮಿಕ ಹಬ್ಬಗಳು ಒಂದೇ ತಿಂಗಳಲ್ಲಿ 2 ಹಬ್ಬಗಳು ಬಂದಲ್ಲಿ ಉದಾಹರಣೆಗೆ ಹೇಳುವುದಾದರೆ ಈ ತಿಂಗಳಲ್ಲಿ (ಜುಲೈ-25) 08/08/2025 ರಂದು ವರಮಹಾಲಕ್ಷ್ಮಿ & 26/08/2025ರಂದು ಸ್ವರ್ಣಗೌರಿ ವ್ರತ ಹಬ್ಬಗಳಿದ್ದು ಈ ಸಂದರ್ಭದಲ್ಲಿ ತಿಂಗಳಿಗೆ 2 ಸ್ಥಳೀಯ ರಜೆಯನ್ನು ನೀಡಬಹುದೇ ಎಂದು ಸ್ಥಳೀಯ ವರ್ಗೀಕರಣದ ಬಗ್ಗೆ ಸ್ಪಷ್ಟಿಕರಣ ನೀಡುವಂತೆ ಕೋರಿರುತ್ತಾರೆ.

ಈ ಬಗ್ಗೆ ಕಛೇರಿ ಜ್ಞಾಪನದಲ್ಲಿ 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶೈಕ್ಷಣಿಕ ಅವಧಿಗಳು ಮತ್ತು ರಜಾ ಅವಧಿಗಳನ್ನು ನಿಗದಿಪಡಿಸುವ ಬಗ್ಗೆ ಜ್ಞಾಪನವನ್ನು ಹೊರಡಿಸಲಾಗಿದೆ. ಹಾಗೂ ಸದರಿ ಜ್ಞಾಪನದಲ್ಲಿ ಶಾಲಾ ಸ್ಥಳೀಯ ರಜೆಗಳು (4) ಎಂದು ನಿಗದಿಪಡಿಸಿದ್ದು, ವಿಶೇಷ ಸೂಚನೆಗಳಲ್ಲಿ ಶಾಲಾ ಸ್ಥಳೀಯ ರಜೆಗಳಿಗೆ ಸಂಬಂಧಿಸಿದಂತೆ ಶಾಲಾವಾರು ನಿರ್ದಿಷ್ಟಪಡಿಸಿದ ದಿನಾಂಕಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪೂರ್ವಭಾವಿಯಾಗಿ ಜೂನ್-2025ರ ಮೊದಲನೇ ವಾರದಲ್ಲಿ ಅನುಮೋದನೆ ನೀಡುವುದು. ಅನುಮೋದಿಸಿದ ದಿನಾಂಕಗಳಿಗೆ ಮಾತ್ರ ಸ್ಥಳೀಯ ರಜೆ ಹೊಂದುವುದು ಎಂದು
ತಿಳಿಸಲಾಗಿದೆ.

ಆದ್ದರಿಂದ ಸದರಿ ಅಂಶದಂತೆ ಶಾಲಾ ವಿದ್ಯಾರ್ಥಿಗಳ ಅವಶ್ಯಕತೆಗನುಸಾರವಾಗಿ ವರ್ಷಕ್ಕೆ 4 ದಿನಗಳು ಮೀರದಂತೆ ಶಾಲೆಗಳಿಗೆ ಸ್ಥಳೀಯ ರಜೆಯನ್ನು ಅನುಮೋದಿಸಲು ತಿಳಿಸಿದೆ. ಮಾನ್ಯ ಆಯುಕ್ತರ ಆದೇಶದ ಮೇರೆಗೆ ಎಂದು ಜ್ಞಾಪನಾ ಪತ್ರದಲ್ಲಿ ತಿಳಿಸಲಾಗಿದೆ.

Previous articleಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್: ಪ್ರತಾಪ್ ಸಿಂಹ ಅಪಸ್ವರ
Next articleಧರ್ಮಸ್ಥಳ ಕೇಸ್; ಎಸ್‌ಐಟಿ ಹೀಗೆ ತನಿಖೆ ಮಾಡಲಿ ಎಂದು ಹೇಳಲಾಗದು

LEAVE A REPLY

Please enter your comment!
Please enter your name here