RSS ಬಿಡಿ ನೆರೆ ಪರಿಹಾರಕ್ಕೆ ಆದ್ಯತೆ ನೀಡಿ: ನಾಲಾಯಕ್ ಸರ್ಕಾರ, ಅಶೋಕ್ ಆಕ್ರೋಶ

0
17

ಇತ್ತೀಚೆಗೆ ಸಚಿವ ಪ್ರಿಯಾಂಕ್ ಖರ್ಗೆ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ನಾಯಕರು ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸಚಿವರ ವಿರುದ್ಧ ಮುಗಿಬಿದ್ದಿದ್ದಾರೆ.

ಅದರಲ್ಲೂ ಆರ್.ಅಶೋಕ್ “ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೆ ಮರಿ ಖರ್ಗೆಗೆ ಆರ್‌ಎಸ್‌ಎಸ್ ನಿಷೇಧಿಸುವ ಗೀಳು ಹಿಡಿದಿದೆ” ಎಂದು ಎಕ್ಸ್ ಮೂಲಕ ಕಿಡಿಕಾರಿದ್ದಾರೆ. ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೆರೆಯಿಂದ ರೈತರು ತಮ್ಮ ಫಸಲು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಸಿರು ಬರ ಘೋಷಿಸಿ, ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು ಮತ್ತು ಸಾಲ ಮನ್ನಾ ಮಾಡಬೇಕು ಎಂದು ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಆರ್‌ಎಸ್‌ಎಸ್ ವಿಚಾರವನ್ನು ಮುಂದಿಟ್ಟುಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ಅಶೋಕ್ ಆರೋಪಿಸಿದ್ದಾರೆ.

“ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಆರ್‌ಎಸ್‌ಎಸ್ ನಿಷೇಧಿಸುವ ನಿಮ್ಮ ಗೀಳನ್ನು ಬಿಟ್ಟು, ಕೂಡಲೇ ಮುಖ್ಯಮಂತ್ರಿಗಳ ಮನವೊಲಿಸಿ ನೆರೆ ಪೀಡಿತ ಪ್ರದೇಶಗಳಲ್ಲಿ ಹಸಿರು ಬರ ಘೋಷಿಸಿ, ರೈತರ ಸಂಕಷ್ಟಕ್ಕೆ ಸ್ಪಂದಿಸಿ” ಎಂದು ಆರ್.ಅಶೋಕ್ ಸಲಹೆ ನೀಡಿದ್ದಾರೆ.

“ಜನ ನಿಮಗೆ ಅಧಿಕಾರ ಕೊಟ್ಟಿರುವುದು ಕೇವಲ ರಾಜಕಾರಣ ಮಾಡುವುದಕ್ಕಲ್ಲ. ಆರ್‌ಎಸ್‌ಎಸ್ ಬಗ್ಗೆ ನಿಮ್ಮ ಖಯಾಲಿಯನ್ನು ಬಿಟ್ಟು ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸಿ” ಎಂದು ಆಗ್ರಹಿಸಿದ್ದಾರೆ.

ಜಾತಿ ಗಣತಿ ನೆಪದಲ್ಲಿ ಮಕ್ಕಳ ಭವಿಷ್ಯ ಹಾಳು: ಮತ್ತೊಂದು ಪೋಸ್ಟ್‌ನಲ್ಲಿ, ರಾಜ್ಯ ಸರ್ಕಾರದ ಜಾತಿ ಗಣತಿ ಸಮೀಕ್ಷೆಯ ಬಗ್ಗೆಯೂ ಆರ್.ಅಶೋಕ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. “ಯಾವುದೇ ಪೂರ್ವಸಿದ್ಧತೆ ಇಲ್ಲದೆ, ‘ಕುರ್ಚಿ ಬಚಾವೋ’ ತರಾತುರಿಯ ಜಾತಿ ಗಣತಿ ಸಮೀಕ್ಷೆಗೆ ಸರ್ಕಾರಿ ಶಾಲಾ ಶಿಕ್ಷಕರನ್ನು ನಿಯೋಜಿಸಲಾಗಿದೆ.

ಇದರಿಂದ ಒಂದು ತಿಂಗಳ ಕಾಲ ಸರ್ಕಾರಿ ಶಾಲೆಗಳಿಗೆ ಬೀಗ ಜಡಿದು ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಲಾಗಿದೆ” ಎಂದು ಆಪಾದಿಸಿದ್ದಾರೆ. ಸದ್ಯ ಅಂಗನವಾಡಿ ಕಾರ್ಯಕರ್ತೆಯರನ್ನೂ ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಿರುವುದರಿಂದ ಹಳ್ಳಿಗಾಡಿನ ಬಡ ಮಕ್ಕಳ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿದಂತಾಗಿದೆ ಎಂದು ಅಶೋಕ್ ಮುಖ್ಯಮಂತ್ರಿಗಳ ವಿರುದ್ಧ ಕಿಡಿ ಕಾರಿದ್ದಾರೆ.

“ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಜಾತಿ ಗಣತಿ ನಾಟಕದಿಂದ ಸಾರ್ವಜನಿಕರಿಗೆ ಎಷ್ಟು ತೊಂದರೆಯಾಗುತ್ತಿದೆ ಎಂಬ ಅರಿವೇ ನಿಮಗಿಲ್ಲ. ನಿಮಗೆ ಕುರ್ಚಿ ಉಳಿಸಿಕೊಳ್ಳುವ ಹಠ, ಕನ್ನಡಿಗರಿಗೆ ಪರದಾಟ. ನಿಮ್ಮ ನಾಲಾಯಕ್ ಸರ್ಕಾರ ಯಾವಾಗ ತೊಲಗುತ್ತದೋ ಎಂದು ಕನ್ನಡಿಗರು ಎದುರು ನೋಡುತ್ತಿದ್ದಾರೆ” ಎಂದು ಅಶೋಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೆರೆ ಪರಿಹಾರ ಮತ್ತು ಮಕ್ಕಳ ಶಿಕ್ಷಣದಂತಹ ಪ್ರಮುಖ ವಿಷಯಗಳನ್ನು ಕಡೆಗಣಿಸಿ, ರಾಜಕೀಯ ಲಾಭಕ್ಕಾಗಿ ಬೇರೆ ವಿಷಯಗಳತ್ತ ಗಮನ ಹರಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

Previous articleಶಾವಿಗೆ ಉದ್ಯಮ ಮಹಿಳೆಯರ ಸಂಜೀವಿನಿ
Next articleಕಾಂತಾರದಲ್ಲಿ ಭಟ್ಕಳದ ಯುವತಿ ಮಿಂಚು

LEAVE A REPLY

Please enter your comment!
Please enter your name here