Home ಸುದ್ದಿ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.‌ ರವಿಕುಮಾರ ರಾಜೀನಾಮೆ

ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.‌ ರವಿಕುಮಾರ ರಾಜೀನಾಮೆ

0

ಕರ್ನಾಟಕದ ರಾಜಕೀಯದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪ ಭಾರೀ ಚರ್ಚೆಗೆ ಕಾರಣವಾಗಿತ್ತು. ಸಚಿವ ನಾಗೇಂದ್ರ ರಾಜೀನಾಮೆಯನ್ನು ನೀಡಿದ್ದರು. ಈಗ ಭೋವಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಆರೋಪದಲ್ಲಿ ನಿಗಮದ ಅಧ್ಯಕ್ಷ ಎಸ್.‌ ರವಿಕುಮಾರ ರಾಜೀನಾಮೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಹಿನ್ನಲೆಯಲ್ಲಿ ರವಿಕುಮಾರ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಮಾಹಿತಿ ಇದೆ. ನಿಗಮದ ವತಿಯಿಂದ ನೀಡುವ ಸೌಲಭ್ಯವನ್ನು ನೀಡಲು ಕಮೀಷನ್ ಕೇಳಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆದ್ದರಿಂದ ರವಿಕುಮಾರ್ ರಾಜೀನಾಮೆಗೆ ಒತ್ತಾಯಿಸಲಾಗಿತ್ತು.

ಎಸ್.‌ ರವಿಕುಮಾರ ಯಾರು?: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್ ಶೇಕಡ  60ರಷ್ಟು ಕಮೀಷನ್ ನಿಗದಿ ಮಾಡಿರುವ ವಿಡಿಯೋ ವೈರಲ್‌ ಆಗಿತ್ತು. ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ರವಿಕುಮಾರ್‌ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದವು. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಹಿನ್ನಲೆಯಲ್ಲಿ ರವಿಕುಮಾರ್‌ ರಾಜೀನಾಮೆ ನೀಡಿದ್ದಾರೆ.

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮವು ಭೋವಿ ಸಮುದಾಯದ ಭೂ-ರಹಿತ ಕಾರ್ಮಿಕ ಮಹಿಳೆಯರಿಗೆ ಭೂ-ಒಡೆತನ ಯೋಜನೆಯಡಿ ಅನುದಾನ ನೀಡಲಿದೆ. 15 ಕೋಟಿ ರೂ. ವೆಚ್ಚದಲ್ಲಿ 60 ಎಕರೆ ಭೂಮಿಯನ್ನು ಖರೀದಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡುವ ಉದ್ದೇಶವಿತ್ತು. ಆದರೆ ಫಲಾನುಭವಿಗಳಿಂದ ಶೇಕಡಾ 40 ರಿಂದ 60 ರಷ್ಟು ಕಮೀಷನ್ ವಸೂಲಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. 

ಫಲಾನುಭವಿಗಳಿಂದ ಶೇಕಡ 60ರಷ್ಟು ಕಮೀಷನ್ ನಿಗದಿ ಮಾಡಿರುವ ವಿಡಿಯೋ ವೈರಲ್ ಆದ ಬಳಿಕ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ಮಾಡಿದ್ದ ಅವರು ಎಐ ಬಳಸಿ ನನ್ನ ಮಾತನ್ನು ತಿರುಚಿದ್ದಾರೆ, ವಿಡಿಯೋದಲ್ಲಿ ಇರುವುದು ನಾನೇ, ಆದರೆ ನನ್ನ ಮಾತು ತಿರುಚಲಾಗಿದೆ ಎಂದು ಹೇಳಿದ್ದರು.

ಸಿಎಂ ಫೋನ್‌ ಕರೆ: ವಿಡಿಯೋ ವೈರಲ್‌ ಆದ ಬಳಿಕ ಪ್ರತಿಕ್ರಿಯೆ ನೀಡಿದ್ದ ಎಸ್.ರವಿಕುಮಾರ್, “ಎಫ್‌ಎಸ್‌ಎಲ್ ಪರೀಕ್ಷೆಗೆ ವಿಡಿಯೋ ಕಳಿಸಿ ತನಿಖೆ ನಡೆಸುವಂತೆ ಮನವಿ ಮಾಡುವೆ. ಸ್ವ-ಪಕ್ಷದವರು ನನ್ನ ಕುರಿತು ಮಾತನಾಡಿದ್ದಾರೆ. ಇದರ ಕುರಿತಗಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಈಗಾಗಲೇ ನನಗೆ ಕರೆ ಮಾಡಿ ಮಾತನಾಡಿದ್ದಾರೆ. ಇದರ ಕುರಿತು ತನಿಖೆಯಾಗಬೇಕು ಎಂದು ನಾನು ಅವರಲ್ಲಿ ಮನವಿ ಮಾಡಿದ್ದೇನೆ. ಅವರು ಯಾವ ನಿರ್ಣಯ ತೆಗೆದುಕೊಂಡರು ನಾನು ಅದಕ್ಕೆ ಸಿದ್ದನಿದ್ದೇನೆ” ಎಂದು ಹೇಳಿದ್ದರು.

ಶುಕ್ರವಾರ ಬೆಳಗ್ಗೆ ಪ್ರತಿಪಕ್ಷ ಜೆಡಿಎಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ, ‘ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್‌ ಕೋಟ್ಯಂತರ ರೂ. ಕಮಿಷನ್‌ ದಂಧೆ ನಡೆಸಿರುವುದು ದಿನ ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಜಗಜ್ಜಾಹೀರಾಗಿದೆ. ತಳಮಟ್ಟದ ಸಣ್ಣ ಸಮುದಾಯಗಳ ಸಬಲೀಕರಣ ಮಾಡುವುದನ್ನು ಬಿಟ್ಟು, ಲಂಚಕ್ಕಾಗಿ ಫಲಾನುಭವಿಗಳ ರಕ್ತ ಹೀರುತ್ತಿರುವ ಧನದಾಹಿ ಅಧ್ಯಕ್ಷ ಇನ್ನೂ ಅಧಿಕಾರದಲ್ಲಿ ಮುಂದುವರಿದಿರುವುದು ದುರದೃಷ್ಟಕರ’ ಎಂದು ಹೇಳಿತ್ತು.

‘ಭ್ರಷ್ಟ ರವಿಕುಮಾರ್‌, ಭೂ ಒಡೆತನ ಯೋಜನೆಯಡಿ ಭೂಮಿ ಮಂಜೂರಾದವರಿಗೆ 25 ಲಕ್ಷ ಸಹಾಯಧನ ಬಿಡುಗಡೆ ಮಾಡಲು 5 ಲಕ್ಷದಂತೆ ಕಮಿಷನ್ ಪಡೆದಿದ್ದಾನೆ. ರಾಜೀನಾಮೆ ಪಡೆಯಲು ಕೈಲಾಗದ ಸಿಎಂ Siddaramaiah, ದುರ್ಬಲ ಡಿಸಿಎಂ DK Shivakumar ಇನ್ನೂ ಮಿನಾಮೇಷ ಎಣಿಸುತ್ತಿದ್ದಾರೆ. ವಿಧಾನಸಭೆಯಲ್ಲೇ ಮುಖ್ಯಮಂತ್ರಿಗಳು ವಾಲ್ಮೀಕಿ ನಿಗಮದ ಭ್ರಷ್ಟಾಚಾರ, SCSP/ TSP ನಿಧಿಯ ಸಾವಿರಾರು ಕೋಟಿ ರೂ. ದುರುಪಯೋಗವನ್ನು ಒಪ್ಪಿಕೊಂಡಿದ್ದಾರೆ. ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರ, ಹಗರಣಗಳಲ್ಲೇ ಮುಳುಗಿರುವ Indian National Congress – Karnataka ಸರ್ಕಾರ ಭ್ರಷ್ಟರ ರಕ್ಷಣೆಗೆ ನಿಂತಿರುವುದು ನಾಚಿಕೆಗೇಡು’ ಎಂದು ಟೀಕಿಸಿತ್ತು.

NO COMMENTS

LEAVE A REPLY

Please enter your comment!
Please enter your name here

Exit mobile version