ಸಿದ್ದರಾಮಯ್ಯ ವಿರುದ್ಧ ವಿರೋಧ ಪಕ್ಷಗಳ ನಾಯಕರು ಆಕ್ರೋಶಗೊಂಡಿದ್ದಾರೆ. ‘ಇವಿಎಂ ಬಳಸುವ ಮೂಲಕ ನಡೆದ ಚುನಾವಣೆಯಲ್ಲಿ ಗೆದ್ದಿರುವ ಸಿದ್ದರಾಮಯ್ಯ ಅವರು ಮತ್ತೆ ಬ್ಯಾಲೆಟ್ ಪೇಪರ್ ಬೇಕು ಎಂದು ಸಂಪುಟದಲ್ಲಿ ನಿರ್ಧಾರ ಮಾಡಿರುವುದು ಅತ್ಯಂತ ವಿಪರ್ಯಾಸ’ ಎಂದು ಮಾಜಿ ಸಿಎಂ, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶುಕ್ರವಾರ ಈ ಕುರಿತು ಸಾಮಾಜಿಕ ಜಾಲತಾಣದ ಪೋಸ್ಟ್ ಹಾಕಿರುವ ಅವರು, ‘ಇವಿಎಂ ಮೂಲಕ ಸಿಎಂ ಆಗಿರುವ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಬ್ಯಾಲೆಟ್ ಮೂಲಕ ಚುನಾವಣೆ ಎದುರಿಸಿ ಆರಿಸಿ ಬಂದು ಬ್ಯಾಲೆಟ್ ಪೇಪರ್ ಬಳಕೆಗೆ ಮುಂದಾಗಲಿ ಎಂದು ಆಗ್ರಹಿಸುತ್ತೇನೆ’ ಎಂದು ಸವಾಲು ಹಾಕಿದ್ದಾರೆ.
‘ಇವಿಎಂ ಮುಖಾಂತರವೇ ಎರಡು ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯ ಅವರು ಯಾವ ಆಧಾರದ ಮೇಲೆ ಸಿಎಂ ಆಗಿದ್ದಾರೆ, ಅದನ್ನೇ ಪ್ರಶ್ನಿಸುವ ರಾಜಕಿಯ ಅಧೋಪತನಕ್ಕೆ ಹೋಗಿದ್ದಾರೆ. ಅವರಿಗೆ ನೆನಪಿಸುತ್ತೇನೆ, ಕೊಪ್ಪಳದಲ್ಲಿ ಬ್ಯಾಲೆಟ್ ಪೇಪರ್ ಮೇಲೆ ನಡೆದ ಚುನಾವಣೆಯಲ್ಲಿಯೇ ಅವರು ಸೋತಿದ್ದಾರೆ’ ಎಂದು ತಿಳಿಸಿದ್ದಾರೆ.
‘ಇವಿಎಂ ಬಳಸುವ ಮೂಲಕ ನಡೆದ ಚುನಾವಣೆಯಲ್ಲಿ ಗೆದ್ದಿರುವ ಸಿದ್ದರಾಮಯ್ಯ ಮತ್ತೆ ಬ್ಯಾಲೆಟ್ ಪೇಪರ್ ಬೇಕು ಎಂದು ಸಂಪುಟದಲ್ಲಿ ನಿರ್ಧಾರ ಮಾಡಿರುವುದು ಅತ್ಯಂತ ವಿಪರ್ಯಾಸ. ಯಾವ ಇವಿಎಂ ನಿಂದ ಗೆದ್ದಿದ್ದಾರೆ. ಈಗ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಬ್ಯಾಲೆಟ್ ಮುಖಾಂತರ ಚುನಾವಣೆ ಎದುರಿಸಿ ಸಿಎಂ ಆಗಿ ಸ್ಥಳೀಯ ಸಂಸ್ಥೆಗಳಿಗೆ ಬ್ಯಾಲೆಟೆ ಮೂಲಕ ಚುನಾವಣೆ ನಡೆಸಿದರೆ ಅದಕ್ಕೊಂದು ಆಧಾರ ಇದೆ’ ಎಂದು ಹೇಳಿದ್ದಾರೆ.
‘ಅದ್ಯಾವುದನ್ನೂ ಮಾಡದೇ ಕೇವಲ ರಾಹುಲ್ ಗಾಂಧಿ ಮೆಚ್ಚಿಸಲು ಮತ್ತು ಇಡೀ ದೇಶದಲ್ಲಿ ರಾಹುಲ್ ಗಾಂಧಿ ಅವರ ಸೋಲನ್ನು ಮುಚ್ಚಿ ಹಾಕಲು ಈ ಪ್ರಯತ್ಮ ಮಾಡಿದ್ದಾರೆ ಮತ್ತು ರಾಜ್ಯ ಚುನಾವಣಾ ಆಯೋಗ ಇದಕ್ಕೆ ಸ್ಪಂದನೆ ಮಾಡಿರುವುದು ಕಾನೂನು ಬಾಹಿರ ಕೇಂದ್ರ ಚುನಾವಣಾ ಆಯೋಗ ರಾಜ್ಯ ಚುನಾವಣಾ ಆಯೋಗಕ್ಕೆ ಸ್ಪಷ್ಟವಾದ ನಿರ್ದೇಶನ ಕೊಡಬೇಕೆಂದು ಆಗ್ರಹಿಸುತ್ತೇನೆ’ ಎಂದು ಬಸವರಾಜ ಬೊಮ್ಮಾಯಿ ಪೋಸ್ಟ್ ಹಾಕಿದ್ದಾರೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಬ್ಯಾಲೆಟ್ ಪೇಪರ್ ಮೂಲಕ ನಡೆಸುವ ತೀರ್ಮಾನವನ್ನು ಕೈಗೊಳ್ಳಲಾಗಿತ್ತು.
ಈ ಕುರಿತು ಸಿದ್ದರಾಮಯ್ಯ ಪೋಸ್ಟ್ ಹಾಕಿದ್ದು, ‘ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಮಾಡಬೇಕೆನ್ನುವುದು ನಮ್ಮ ಉದ್ದೇಶವಾಗಿದ್ದು, ನಮ್ಮ ಅನುಭವದ ಮೇಲೆ ನಾವು ಈ ತೀರ್ಮಾನ ಮಾಡಿದ್ದೇವೆ’ ಎಂದು ಹೇಳಿದ್ದಾರೆ.
‘ಅನೇಕ ದೇಶಗಳು ಇವಿಎಂ ಬಳಸಿ ಪುನಃ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಮಾಡುತ್ತಿವೆ. ಪಾರದರ್ಶಕ ಮತ್ತು ನಿಷ್ಪಕ್ಷಪಾತ ಚುನಾವಣೆಗಾಗಿ ಬ್ಯಾಲೆಟ್ ಪೇಪರ್ ಬಳಕೆಗೆ ನಾವು ನಿರ್ಧರಿಸಿದ್ದೇವೆ’ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ.