Home ಸುದ್ದಿ ರಾಜ್ಯ ಗೃಹಲಕ್ಷ್ಮಿ 2 ಸಾವಿರ ಜೊತೆಗೆ ಸ್ವ ಉದ್ಯೋಗಕ್ಕೆ ದಾರಿ! ಇಲ್ಲಿದೆ ಮಾಹಿತಿ

ಗೃಹಲಕ್ಷ್ಮಿ 2 ಸಾವಿರ ಜೊತೆಗೆ ಸ್ವ ಉದ್ಯೋಗಕ್ಕೆ ದಾರಿ! ಇಲ್ಲಿದೆ ಮಾಹಿತಿ

0

ರಾಜ್ಯದ ಲಕ್ಷಾಂತರ ಗೃಹಲಕ್ಷ್ಮಿಯರಿಗೆ ದೀಪಾವಳಿ ಹಬ್ಬದ ಹೊಸ್ತಿಲಲ್ಲಿ ರಾಜ್ಯ ಸರ್ಕಾರ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಪ್ರತಿ ತಿಂಗಳು ನೀಡುವ 2 ಸಾವಿರ ಆರ್ಥಿಕ ಸಹಾಯದ ಜೊತೆಗೆ, ಮಹಿಳೆಯರನ್ನು ಆರ್ಥಿಕವಾಗಿ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ “ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ” ಸ್ಥಾಪನೆಗೆ ಅಧಿಕೃತವಾಗಿ ಅನುಮತಿ ನೀಡಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಕುರಿತು ಮಾಹಿತಿ ನೀಡಿದ್ದು, ಮಹಿಳೆಯರನ್ನು ಕೇವಲ ಫಲಾನುಭವಿಗಳಾಗಿ ಸೀಮಿತಗೊಳಿಸದೆ, ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ ಎಂದು ತಿಳಿಸಿದ್ದಾರೆ.

“ಮಹಿಳೆಯರು ದುಡಿಯುವ ಕೈಗಳಾಗಬೇಕು, ಸಮಾಜದಲ್ಲಿ ಗೌರವಯುತವಾಗಿ ಸ್ವಾವಲಂಬಿ ಜೀವನ ನಡೆಸಬೇಕು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಯ. ಈ ಸಹಕಾರ ಸಂಘವು ಆ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ,” ಎಂದು ಹೇಳಿದ್ದಾರೆ.

ಏನಿದು ಗೃಹಲಕ್ಷ್ಮಿ ಸಹಕಾರ ಸಂಘ?: ಇದು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರೇ ಸದಸ್ಯರಾಗಿರುವ ಒಂದು ಸಹಕಾರ ಸಂಘವಾಗಿರುತ್ತದೆ. ಈ ಸಂಘದ ಮೂಲಕ ಮಹಿಳೆಯರಿಗೆ ಹಲವು ರೀತಿಯ ಅನುಕೂಲಗಳನ್ನು ಕಲ್ಪಿಸುವ ಗುರಿ ಹೊಂದಲಾಗಿದೆ.

ಸಾಲ ಸೌಲಭ್ಯ: ಮಹಿಳೆಯರಿಗೆ ಸಣ್ಣ ಉದ್ಯಮಗಳನ್ನು ಆರಂಭಿಸಲು ಅಥವಾ ತಮ್ಮ ಅಗತ್ಯಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸುವುದು.

ಕೌಶಲ್ಯ ತರಬೇತಿ: ಹೊಲಿಗೆ, ಕರಕುಶಲ ವಸ್ತುಗಳ ತಯಾರಿಕೆ, ಆಹಾರ ಸಂಸ್ಕರಣೆ ಮುಂತಾದ ಕೌಶಲ್ಯಗಳಿಗೆ ತರಬೇತಿ ನೀಡಿ ಅವರನ್ನು ಉದ್ಯಮಶೀಲರನ್ನಾಗಿ ಮಾಡುವುದು.

ಮಾರುಕಟ್ಟೆ ಒದಗಿಸುವುದು: ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ, ಆದಾಯ ಹೆಚ್ಚಿಸಲು ನೆರವಾಗುವುದು.

ಸ್ಥಾಪನೆಗೆ ಹಸಿರು ನಿಶಾನೆ: ಸಹಕಾರ ಇಲಾಖೆಯು ಈ ಸಂಘದ ಸ್ಥಾಪನೆಗೆ ಹಸಿರು ನಿಶಾನೆ ತೋರಿದ್ದು, ಕರ್ನಾಟಕ ರಾಜ್ಯಾದ್ಯಂತ ಇದರ ಕಾರ್ಯವ್ಯಾಪ್ತಿ ಇರಲಿದೆ. ನೋಂದಣಿಗಾಗಿ ಮೊದಲ ಹಂತವಾಗಿ, ಮುಖ್ಯ ಪ್ರವರ್ತಕರಾದ ಬಿ.ವಿ. ನಾಗರತ್ನ ಅವರಿಗೆ 90 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಅವರು ಕನಿಷ್ಠ 1 ಸಾವಿರ ಸದಸ್ಯರಿಂದ ಒಟ್ಟು 20 ಲಕ್ಷ ರೂಪಾಯಿಗಳ ಷೇರು ಬಂಡವಾಳವನ್ನು ಸಂಗ್ರಹಿಸಬೇಕೆಂಬ ಷರತ್ತು ವಿಧಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version