ಧರ್ಮಸ್ಥಳ ಕೇಸ್‌ನಲ್ಲಿ ಇಡಿ ಪ್ರವೇಶ, ತನಿಖೆ ಶುರು

0
65

ಧರ್ಮಸ್ಥಳ ವಿರುದ್ಧದ ಷಡ್ಯಂತ್ರದಲ್ಲಿ ಬಳಕೆಯಾಗಿರುವ ಹಣದ ಮೂಲ ಪತ್ತೆ ಮಾಡಲು ಜಾರಿ ನಿರ್ದೇಶನಾಲಯ ಈಗ ಅಧಿಕೃತವಾಗಿ ಮುಂದಾಗಿದೆ.

ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಗೃಹ ಇಲಾಖೆಗೆ ನೀಡಿದ್ದ ಮನವಿಯನ್ನು ಸಚಿವಾಲಯ ಇಡಿಗೆ ಕಳುಹಿಸಿತ್ತು. ಈ ದೂರಿಗೆ ಸಂಬಂಧಿಸಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದ್ದು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ) ಅಡಿಯಲ್ಲಿ ಇಡಿ ತನಿಖೆ ನಡೆಸಲಿದೆ.

ನಿಯಮ ಉಲ್ಲಂಘನೆ, ಹಣದ ಅಕ್ರಮ ಬಳಕೆಯ ಪುರಾವೆಗಳು ಕಂಡುಬಂದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಕೆಲ ಸಂಸ್ಥೆಗಳ 5 ವರ್ಷಗಳ ಹಣಕಾಸು ವ್ಯವಹಾರ ವಿವರ ನೀಡಲು ಬ್ಯಾಂಕ್‌ಗಳಿಗೆ ಇಡಿ ಪತ್ರ ಬರೆದಿದೆ. ವಹಿವಾಟು ಶಂಕಾಸ್ಪದವಾಗಿದ್ದರೆ ವಿಚಾರಣೆಗೊಳಪಡಿಸುವ ಸಾಧ್ಯತೆಗಳಿವೆ.

ಏನಿದು ಆರೋಪ?: ವಿದೇಶಿ ಸಂಸ್ಥೆಗಳಿಂದ ಷಡ್ಯಂತ್ರಕ್ಕೆ ಹಣಕಾಸು ನೆರವು ಸಿಕ್ಕಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಎನ್‌ಜಿಒಗಳು, ಪಾಲುದಾರರಿಗೆ ಸಂಬಂಧಿಸಿದ ವಿವರ ಹಾಗೂ ದಾಖಲೆಗಳ ಸಂಗ್ರಹಕ್ಕೆ ಇಡಿ ಮುಂದಾಗಿದೆ.

ಕಳೇಬರದ ಅವಶೇಷಗಳು ಸಿಗದ ಹಿನ್ನೆಲೆಯಲ್ಲಿ ಇದೊಂದು ದೊಡ್ಡ ಷಡ್ಯಂತ್ರವಾಗಿರಬಹುದು ಎಂಬ ಆರೋಪ ಕೇಳಿಬಂದಿತ್ತು. ಇದರ ಹಿಂದೆ ವಿದೇಶಿ ಹಣದ ಹರಿವಿನ ಶಂಕೆ ವ್ಯಕ್ತವಾಗಿತ್ತಲ್ಲದೇ ಈ ಕುರಿತು ಇಡಿ ತನಿಖೆ ನಡೆಯಬೇಕೆಂಬ ಒತ್ತಾಯವೂ ಕೇಳಿಬಂದಿತ್ತು.

ಸಂಸದ ಕೋಟ ಶ್ರೀನಿವಾರ ಪೂಜಾರಿ, ‘ಕೋಟ್ಯಾಂತರ ಹಿಂದೂಗಳ ಆರಾಧ್ಯ ತಾಣ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳಿಗೆ ಯೂಟ್ಯೂಬರ್ಸ್ ಸಹಿತ ಅನೇಕರಿಗೆ ವಿದೇಶಿ ಹಣ ಬಂದಿರುವ ಆರೋಪಗಳಿವೆ. ರಾಜ್ಯದ ಪ್ರತಿಷ್ಠಿತ ಮಾಧ್ಯಮಗಳೂ ಈ ಬಗ್ಗೆ ವರದಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಇದರ ಸತ್ಯಾಸತ್ಯತೆಯನ್ನು ತಿಳಿಯಲು ಕೂಡಲೇ ಇಡಿ ತನಿಖೆಗೆ ಆದೇಶಿಸುವಂತೆ ಕೇಂದ್ರದ ಗೌರವಾನ್ವಿತ ಗೃಹ ಸಚಿವರಾದ ಶ್ರೀ ಅಮಿತ್ ಶಾ ರವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ’ ಎಂದು ಹೇಳಿದ್ದರು.

‘ಶ್ರೀ ಕ್ಷೇತ್ರದ ವಿರುದ್ಧ ಷಡ್ಯಂತ್ರವಿದೆ ಎಂಬುದನ್ನು ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಇದರ ಹಿಂದೆ ಎಡಪಂಥೀಯರ ಒತ್ತಡ ಇದೆ ಎಂಬುದನ್ನು ಸಚಿವ ದಿನೇಶ್ ಗುಂಡೂರಾವ್‌ರವರೂ ಹೇಳಿರುವುದು ಗಮನಾರ್ಹ. ಹೀಗಾಗಿ ಅಸಂಖ್ಯ ಭಕ್ತರ ಆಗ್ರಹವನ್ನು ನಾನು ಮಾನ್ಯ ಗೃಹ ಸಚಿವರಿಗೆ ಮನವಿಯ ಮೂಲಕ ತಿಳಿಸಿದ್ದೇನೆ. ಇಡಿ ತನಿಖೆ ನಡೆಸಿ ಸತ್ಯ ಹೊರಗೆ ಬರಲಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು.

ಚಿನ್ನಯ್ಯ ಮತ್ತೆ ಎಸ್‌ಐಟಿ ವಶಕ್ಕೆ: ಧರ್ಮಸ್ಥಳದಲ್ಲಿ ಶವ ಹೂತಿದ್ದಾಗಿ ಹೇಳಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಿನ್ನಯ್ಯನನ್ನು ಬೆಳ್ತಂಗಡಿ ನ್ಯಾಯಾಲಯವು ಮತ್ತೆ ಮೂರು ದಿನಗಳ ಕಾಲ ಎಸ್ಐಟಿ ವಶಕ್ಕೆ ನೀಡಿದೆ.

ಚಿನ್ನಯ್ಯ ಎಸ್‌ಐಟಿ ಕಸ್ಟಡಿ ಬುಧವಾರಕ್ಕೆ ಅಂತ್ಯಗೊಂಡಿತ್ತು. ಆದ್ದರಿಂದ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಆತನನ್ನು ಎಸ್‌ಐಟಿ ಪೊಲೀಸರು ಬುಧವಾರ ಕೋರ್ಟ್‌ಗೆ ಹಾಜರುಪಡಿಸಿದ್ದರು. ಆಗ ಕೋರ್ಟ್ ಮತ್ತೆ ಆರೋಪಿಯನ್ನು ಮೂರು ದಿನ ಎಸ್‌ಐಟಿ ವಶಕ್ಕೆ ನೀಡಿ ಆದೇಶಿಸಿದೆ.

Previous articleಬಾಗಲಕೋಟೆ: ಕೋರ್ಟ್ ಆದೇಶ, ಜಿಲ್ಲಾಧಿಕಾರಿ ಕಛೇರಿ ವಸ್ತುಗಳು ಜಪ್ತಿ
Next articleಬಿಆರ್‌ಎಸ್‌ನಲ್ಲಿ ಎಲ್ಲವೂ ಸರಿ ಇಲ್ಲ: ಪಕ್ಷ ತೊರೆದ ಕೆ. ಕವಿತಾ

LEAVE A REPLY

Please enter your comment!
Please enter your name here