ಬೆಂಗಳೂರು; ಕರ್ನಾಟಕ ಸರ್ಕಾರ ಸುಮಾರು 3 ದಶಕಗಳ ಬೇಡಿಕೆಗೆ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿಯನ್ನು ಕಲ್ಪಿಸಲು ತಾತ್ವಿಕವಾಗಿ ಒಪ್ಪಿಗೆ ನೀಡಲಾಗಿದೆ. ಈ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಲಿದ್ದಾರೆ.
ಮಂಗಳವಾರ ರಾತ್ರಿ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಚಿವ ಸಂಪು ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ, ಒಪ್ಪಿಗೆ ನೀಡಲಾಗಿದೆ.
ಯಾವ ಸಮುದಾಯಕ್ಕೆ ಎಷ್ಟು ಮೀಸಲಾತಿ? ಎಂಬುದು ಬಹುತೇಕ ಅಂತಿಮವಾಗಿದ್ದು, ವಿಧಾನಸಭೆ ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.
ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತು ಅಧ್ಯಯನ ನಡೆಸಿ, ವರದಿ ನೀಡಲು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗ ರಚನೆ ಮಾಡಿತ್ತು. ಆಯೋಗ ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಕೆ ಮಾಡಿತ್ತು.
ಈಗ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಎಲ್ಲಾ ಪರಿಶಿಷ್ಟ ಜಾತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವೈಜ್ಞಾನಿಕವಾಗಿ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಅನುಮೋದನೆ ನೀಡಲಾಗಿದೆ. ಆದರೆ ಮಾಹಿತಿಗಳ ಪ್ರಕಾರ ನ್ಯಾ.ನಾಗಮೋಹನ್ ದಾಸ್ ವರದಿಯಲ್ಲಿ 5 ವಿಂಗಡಣೆ ಮಾಡಲಾಗಿತ್ತು. ಸರ್ಕಾರ 3 ಗುಂಪುಗಳಾಗಿ ವರ್ಗೀಕರಣ ಮಾಡಿ ಮೀಸಲಾತಿ ನೀಡಲಿದೆ.
ಯಾರಿಗೆ ಎಷ್ಟು ಮೀಸಲಾತಿ?; ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, “ಸಚಿವ ಸಂಪುಟದ ತೀರ್ಮಾನ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬುಧವಾರ ಸದನದಲ್ಲಿ ಹೇಳಿಕೆ ನೀಡಲಿದ್ದಾರೆ. ಎಲ್ಲರಿಗೂ ಸಮಾಧಾನವಾಗುವಂತಹ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ” ಎಂದು ಹೇಳಿದ್ದಾರೆ.
ಎಸ್.ಸಿ ಎಡಗೈ 18 ಜಾತಿ – ಶೇ.6, ಎಸ್.ಸಿ ಬಲಗೈ 20 ಜಾತಿ – ಶೇ.6, ಎಸ್.ಸಿ ಇತರೆ 63 ಜಾತಿ – ಶೇ.5. ಒಟ್ಟು 101 ಜಾತಿ – ಶೇ.17ರಷ್ಟು ಮೀಸಲಾತಿ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಸಚಿವ ಸಂಪುಟ ಸಭೆ ನ್ಯಾ.ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗದ ವರದಿಯನ್ನು ಅಂಗೀಕರಿಸಿದೆ.
ಸರ್ಕಾರಕ್ಕೆ ವರದಿ ಸಲ್ಲಿಕೆಯಾದ ಬಳಿಕ ಎಡಗೈ ಹಾಗೂ ಬಲಗೈ ಸಮುದಾಯಗಳು ಒಳಮೀಸಲಾತಿ ಕುರಿತು ಪರ-ವಿರೋಧ ಪ್ರತಿಭಟನೆಗಳು ನಡೆದಿದ್ದವು. ಒಳಮೀಸಲು ಜಾರಿ ಮಾಡದಿದ್ದರೆ ರೈಲಿಗೆ ಬೆಂಕಿ ಹಚ್ಚುತ್ತೇವೆ. ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಹೋರಾಟಗಾರರು ಎಚ್ಚರಿಸಿದ್ದರು.
ಸಚಿವ ಸಂಪುಟ ಸಭೆಯ ಬಳಿಕ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, “ಸಂಪುಟ ಸಭೆಯಲ್ಲಿ ಎಲ್ಲರಿಗೂ ತೃಪ್ತಿಪಡುವ ನಿರ್ಧಾರ ಆಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬಹಳ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ” ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಎಸ್‌ಸಿ ಒಳ ಮೀಸಲಾತಿ ಕುರಿತು 3 ದಶಕಗಳ ನಿರಂತರ ಬೇಡಿಕೆ ಇಡಲಾಗುತ್ತಿತ್ತು. ಈ ಒತ್ತಾಯಗಳ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಈ ಕುರಿತು ಅಧ್ಯಯನ ನಡೆಸಿ, ವರದಿ ನೀಡಲು ಆಯೋಗ ರಚನೆ ಮಾಡಿತ್ತು. ಆಯೋಗ ನೀಡಿದ್ದ ವರದಿಯನ್ನು ಸರ್ಕಾರವು ಒಪ್ಪಿಕೊಂಡಿದೆ.
ವಿಧಾನಸಭೆ ಮುಂಗಾರು ಅಧಿವೇಶನ ನಡೆಯುತ್ತಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಒಳ ಮೀಸಲಾತಿಯನ್ನು ಕಲ್ಪಿಸಲು ಒಪ್ಪಿಗೆ ನೀಡಿರುವುದು ಸೇರಿದಂತೆ ವಿವರವಾದ ಮಾಹಿತಿಯನ್ನು ನೀಡಲಿದ್ದಾರೆ.