ಮೈಸೂರು ದಸರಾ 2025ರ ಉದ್ಘಾಟನೆಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತರಾಗಿರುವ ಲೇಖಕಿ ಬಾನು ಮುಷ್ಕಾಕ್ ಆಹ್ವಾನಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತುರ್ತು ವಿಚಾರಣೆಗೆ ನಡೆಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಅರ್ಜಿದಾರರ ಪರ ವಕೀಲರು, ಗುರುವಾರ ಬೆಳಗ್ಗೆ ನ್ಯಾಯಾಲಯದ ಕಲಾಪ ಪ್ರಾರಂಭವಾಗುತ್ತಿದ್ದಂತೆ, ಮುಖ್ಯ ನ್ಯಾಯಮೂರ್ತಿ ವಿಭು ಖಬ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಷಿ ಅವರಿದ್ದ ನ್ಯಾಯಪೀಠಕ್ಕೆ ಮೆಮೋ ಸಲ್ಲಿಸಿ, ತುರ್ತು ವಿಚಾರಣೆಗೆ ನಿಗದಿಪಡಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪೀಠ, ಅರ್ಜಿಯನ್ನು ಯಾವಾಗ ಸಲ್ಲಿಸಲಾಗಿದೆ? ಎಂದು ಪ್ರಶ್ನಿಸಿತು. ಇದಕ್ಕೆ ವಕೀಲರು ನಿನ್ನೆಯಷ್ಟೇ ಸಲ್ಲಿಸಿದ್ದೇವೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ಇದೇ 22ರಂದು ದಸರಾ ಮಹೋತ್ಸವ ನಡೆಯಲಿದೆ. ಹೀಗಾಗಿ, ತುರ್ತು ವಿಚಾರಣೆಗೆ ನಿಗದಿ ಮಾಡಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ತುರ್ತು ವಿಚಾರಣೆಗೆ ನಿಗದಿಪಡಿಸಬೇಕಾದ ಅಗತ್ಯವಿಲ್ಲ, ಸಾಮಾನ್ಯದಂತೆ ಅರ್ಜಿ ಸಲ್ಲಿಕೆಯಾದ ನಾಲ್ಕು ದಿನಗಳಲ್ಲಿ ವಿಚಾರಣೆಗೆ, ನಿಗದಿಯಾಗಲಿದೆ ಎಂದು ತಿಳಿಸಿ, ಅರ್ಜಿದಾರರ ಮನವಿಯನ್ನು ತಿರಸ್ಕರಿಸಿತು.
ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ: ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ಕಾಕ್ ಆಹ್ವಾನಿಸಿರುವ ರಾಜ್ಯ ಸರ್ಕಾರದ ಕ್ರಮ ಆಕ್ಷೇಪಿಸಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ಸಲ್ಲಿಕೆಯಾದ ಎರಡು ದಿನಗಳ ಬಳಿಕ ಬೆಂಗಳೂರಿನ ಹೆಚ್.ಎಸ್. ಗೌರವ್, ಉದ್ಯಮಿ ಟಿ.ಗಿರೀಶ್ ಕುಮಾರ್ ಹಾಗೂ ಅಭಿನವ ಭಾರತ್ ಪಾರ್ಟಿಯ ರಾಷ್ಟ್ರೀಯ ಉಪಾಧ್ಯಕ್ಷೆ ಆರ್.ಸೌಮ್ಯ ಪ್ರತ್ಯೇಕವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಹಿಂದೂ ಧರ್ಮಕ್ಕೆ ಸೇರದ ಬಾನು ಮುಷ್ಕಾಕ್‌ರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ನಿರ್ಧಾರ ಹಿಂಪಡೆಯಬೇಕು. ಹಿಂದೂ ಗಣ್ಯರಿಂದಲೇ ದಸರಾ ಉದ್ಘಾಟನೆ ಮಾಡಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಮಿಶ್ರ ಪ್ರತಿಕ್ರಿಯೆ: ಬಾನು ಮುಷ್ತಾಕ್ ಆಯ್ಕೆಗೆ ಸಾಂಸ್ಕೃತಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು, ಸಾಹಿತ್ಯ ಕ್ಷೇತ್ರದ ಸಾಧನೆಗಳನ್ನು ಧರ್ಮದ ಆಧಾರದ ಮೇಲೆ ಅಳೆಯಬಾರದು ಮತ್ತು ಬಾನು ಮುಷ್ತಾಕ್ ಅವರಂತಹ ಅಂತರರಾಷ್ಟ್ರೀಯ ಮಟ್ಟದ ವ್ಯಕ್ತಿತ್ವದಿಂದ ದಸರಾಗೆ ಮತ್ತಷ್ಟು ಮೆರಗು ಬರುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಈ ಬಾರಿಯ ಮೈಸೂರು ದಸರಾವನ್ನು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರ ತನಕ 11 ದಿನಗಳ ಕಾಲ ಆಚರಿಸಲಾಗುತ್ತದೆ. ಆದರೆ ದಸರಾ ಉದ್ಘಾಟನೆ ಈಗ ಭಾರೀ ಸುದ್ದಿಯಾಗಿದೆ.