ರಾಜು ಮಳವಳ್ಳಿ
ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 32 ವಿಶ್ವವಿದ್ಯಾಲಯಗಳ ಪೈಕಿ 6 ವಿಶ್ವವಿದ್ಯಾಲಯಗಳಲ್ಲಿ ಕಾಯಂ ಕುಲಪತಿಗಳೇ ಇಲ್ಲ. ಈ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಈಗ ಹಂಗಾಮಿ ಕುಲಪತಿಗಳಿದ್ದು ಶೈಕ್ಷಣಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳಿಗೆ ಅಕ್ಷರಶಃ ಹೊಡೆತ ಬಿದ್ದಿದೆ.
ಕಲಬುರಗಿ ವಿಶ್ವವಿದ್ಯಾಲಯ, ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ, ನೃಪತುಂಗ ವಿಶ್ವವಿದ್ಯಾಲಯ, ಬೆಂಗಳೂರು ನಗರ ವಿಶ್ವವಿದ್ಯಾಲಯ ಹಾಗೂ ಮಂಡ್ಯ ವಿಶ್ವವಿದ್ಯಾಲಯಗಳಲ್ಲಿ ಪೂರ್ಣಾವಧಿ ಕುಲಪತಿಗಳಿಲ್ಲದೇ ಹಂಗಾಮಿ ವ್ಯವಸ್ಥೆಯೇ ಮುಂದುವರಿದಿದೆ.
ಹಂಗಾಮಿ ವ್ಯವಸ್ಥೆಯಿಂದ ತೊಡಕೇನು?
- ದೀರ್ಘಾವಧಿ ಶೈಕ್ಷಣಿಕ ಯೋಜನೆಗಳನ್ನು ರೂಪಿಸಲಾಗದು.
- ಸಿಬ್ಬಂದಿಗಳ ನೇಮಕಾತಿ ಮಾಡಲಾಗದು.
- ಹೊಸ ಕೋರ್ಸ್ಗಳ ಆರಂಭಕ್ಕೆ ಅನುಮತಿ ಕಷ್ಟ.
- ಪ್ರಮುಖ ಆರ್ಥಿಕ ನಿರ್ಧಾರಗಳನ್ನು ಕೈಗೊಳ್ಳಲಾಗದು.
- ಸಿಂಡಿಕೇಟ್ ಸದಸ್ಯರ ಅಸಹಕಾರ
- ವಿವಿ ಅಧಿಕಾರಿ-ಸಿಬ್ಬಂದಿಗಳಿಂದ ಕೆಲಸಕಾರ್ಯಗಳಿಗೆ ಅಡೆತಡೆ
ಮಂಡ್ಯ ವಿವಿ, ನೃಪತುಂಗ ವಿವಿ ಹಾಗೂ ಮಹಾರಾಣಿ ಕ್ಲಸ್ಟರ್ ವಿವಿಗಳಿಗೆ 2024ರಿಂದಲೂ ಕಾಯಂ ಕುಲಪತಿಗಳಿಲ್ಲದ ಸ್ಥಿತಿಯಾದರೆ, ಗುಲ್ಬರ್ಗಾ ವಿವಿ, ಬೆಂಗಳೂರು ನಗರ ವಿವಿ ಹಾಗೂ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಗಳಿಗೆ ಹಲವು ತಿಂಗಳಿನಿಂದಲೂ ಕಾಯಂ ಕುಲಪತಿಗಳೇ ಇಲ್ಲ.
ಬೆಂಗಳೂರು ನಗರ ವಿವಿ ಹಾಗೂ ಗುಲ್ಬರ್ಗಾ ವಿವಿಗಳ ಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಶೋಧನಾ ಸಮಿತಿ ಈಗಾಗಲೇ ಮೂವರ ಹೆಸರನ್ನು ಶಿಫಾರಸ್ಸು ಮಾಡಿದೆಯಾದರೂ ಆ ʼಕಡತ’ ಮುಖ್ಯಮಂತ್ರಿಗಳ ಪರಿಶೀಲನೆಯಲ್ಲಿದ್ದು ಇನ್ನೂ ರಾಜಭವನದ ಅಂಗಳ ತಲುಪಿಲ್ಲ.
ಇನ್ನುಳಿದಂತೆ ನೃಪತುಂಗ ವಿವಿ, ಮಂಡ್ಯ ವಿವಿ ಹಾಗೂ ಮಹಾರಾಣಿ ಕ್ಲಸ್ಟರ್ ವಿವಿಗಳನ್ನು ಇತರೆ ವಿವಿಯೊಂದಿಗೆ ವಿಲೀನಗೊಳಿಸಬೇಕೆ? ಅಥವಾ ಆರ್ಥಿಕ ಬಲವರ್ಧನೆಗೆ ಕ್ರಮ ಕೈಗೊಳ್ಳಬೇಕೆ? ಎಂಬ ಜಿಜ್ಞಾಸೆ ಏರ್ಪಟ್ಟಿದ್ದು ಈ ವಿಷಯ ಸಂಪುಟ ಉಪಸಮಿತಿಯ ಪರಿಶೀಲನೆಯ ‘ಆಡಕತ್ತರಿ’ಯಲ್ಲಿ ಸಿಲುಕಿರುವುದರಿಂದ ಕುಲಪತಿಗಳ ನೇಮಕಾತಿ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ.
ಹಲವು ಬಗೆಯ ಕಗ್ಗಂಟಿನಲ್ಲಿ ಸಿಲುಕಿರುವ ಈ 6 ವಿಶ್ವವಿದ್ಯಾಲಯಗಳ ಕುಲಪತಿ ನೇಮಕಕ್ಕೆ ಹಾಲಿ ಹಿಡಿದಿರುವ ಗ್ರಹಣ ಸದ್ಯಕ್ಕೆ ಮೋಕ್ಷ ಸಿಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಹಾಗಾಗಿ ಈ ಹಂಗಾಮಿ ವ್ಯವಸ್ಥೆಯೇ ಇನ್ನಷ್ಟು, ಮಗದಷ್ಟು ಕಾಲ ಮುಂದುವರೆಯಿವುದು ಬಹುತೇಕ ನಿಶ್ಚಿತವಾಗಿದೆ.
ಈ ಕುರಿತು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, “ಖಾಲಿಯಿರುವ ವಿಶ್ವವಿದ್ಯಾಲಯಗಳ ಕುಲಪತಿ ನೇಮಕ ಪ್ರಕ್ರಿಯೆ ವಿವಿಧ ಹಂತಗಳಲ್ಲಿವೆ. ಬಿಸಿಯು ಮತ್ತು ಗುಲ್ಬರ್ಗ ವಿವಿಗಳ ಕಡತ ಮುಖ್ಯಮಂತ್ರಿಗಳ ಬಳಿಯಿದೆ. ಸಂಗೀತ ವಿವಿಗೆ ಅರ್ಹ ಅರ್ಜಿದಾರರು ಸಿಗುತ್ತಿಲ್ಲ. ಇನ್ನುಳಿದ 3 ವಿವಿಗಳ ವಿಚಾರ ಸಂಪುಟ ಉಪಸಮಿತಿಯ ಪರಿಶೀಲನೆಯಲ್ಲಿದೆ” ಎಂದು ಹೇಳಿದ್ದಾರೆ.
“ಹಂಗಾಮಿ ಕುಲಪತಿಗಳಿಗೆ ಕಾಯಂ ಕುಲಪತಿಗಳಿರುವಷ್ಟೇ ಕಾನೂನುಬದ್ಧ ಅಧಿಕಾರವಿರುತ್ತದೆ. ಅಂತಹ ವ್ಯತ್ಯಾಸವೇನೂ ಇಲ್ಲ. ಆದರೆ ಸಿಬ್ಬಂದಿಗಳು-ಸಿಂಡಿಕೇಟ್ ಸದಸ್ಯರ ಸಹಕಾರ ಅಷ್ಟಕಷ್ಟೇ. ಯಾವುದೇ ದೀರ್ಘಾವಧಿ ಯೋಜನೆ ರೂಪಿಸಲಾಗದು” ಎಂದು ಪ್ರೊ. ನಾಗೇಶ್ ಬೆಟ್ಟಕೋಟೆ, ಹಂಗಾಮಿ ಕುಲಪತಿ, ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ತಿಳಿಸಿದ್ದಾರೆ.