Home ಸುದ್ದಿ ರಾಜ್ಯ ಕರ್ನಾಟಕ: 7.2 ಲಕ್ಷ ಮಕ್ಕಳಲ್ಲಿ ಅಧಿಕ ರಕ್ತದೊತ್ತಡ

ಕರ್ನಾಟಕ: 7.2 ಲಕ್ಷ ಮಕ್ಕಳಲ್ಲಿ ಅಧಿಕ ರಕ್ತದೊತ್ತಡ

0

ಕರ್ನಾಟಕ ರಾಜ್ಯದ 7.2 ಲಕ್ಷ ಮಕ್ಕಳು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಅಧಿಕ ರಕ್ತದೊತ್ತಡ ಹಿರಿಯರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ ಎಂಬ ಪೂರ್ವ ಮಾತೀಗ ಸುಳ್ಳಾಗಿದ್ದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಡೆಸಿದ ಸಮೀಕ್ಷೆಯೊಂದರಲ್ಲಿ ಮಕ್ಕಳು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವುದು ಪತ್ತೆಯಾಗಿದೆ.

ಕೇವಲ ಆರು ವಾರಗಳ ನವಜಾತ ಶಿಶು ಸಹ ಅಧಿಕ ರಕ್ತದೊತ್ತಡಕ್ಕೆ ಸಿಲುಕಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಆರೋಗ್ಯ ಇಲಾಖೆಯು ಸರ್ವೇಸಾಮಾನ್ಯವಾಗಿ ಅಂಗನವಾಡಿ ಕೇಂದ್ರಗಳು, ಸರ್ಕಾರಿ ಶಾಲೆಗಳು ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿನ ಆರು ವಾರಗಳಿಂದ ಹಿಡಿದು 18 ವರ್ಷದ ಮಕ್ಕಳ ಆರೋಗ್ಯ ತಪಾಸಣೆಯನ್ನು ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಪ್ರತಿವರ್ಷ ನಡೆಸುವುದು ವಾಡಿಕೆ.

ಅದರಂತೆಯೆ 2024-25ನೇ ಸಾಲಿನಲ್ಲಿ ರಾಜ್ಯದ 1.23 ಕೋಟಿ ಮಕ್ಕಳನ್ನು ವಿವಿಧ 40 ಆರೋಗ್ಯ ಸ್ಥಿತಿಯ ಕುರಿತು ತಪಾಸಣೆ ನಡೆಸಿತ್ತು. ಇದೇ ಮೊದಲ ಬಾರಿಗೆ ರಕ್ತದೊತ್ತಡದ ಪರೀಕ್ಷೆಯನ್ನೂ ನಡೆಸಲಾಗಿತ್ತು. ಆಗ 7.2 ಲಕ್ಷ ಮಕ್ಕಳು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವುದು ಪತ್ತೆಯಾಗಿದ್ದು, ಆ ಮಕ್ಕಳನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಇನ್ನಿತರೆ ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸಿ ಮಾತ್ರೆಗಳನ್ನು ನೀಡುವುದರ ಜತೆಗೆ ನಿರ್ದಿಷ್ಟ ಜೀವನಶೈಲಿ ರೂಢಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.

ಮಕ್ಕಳನ್ನು ಮಾತ್ರವಲ್ಲ, 18ರಿಂದ 30 ವರ್ಷದೊಳಗಿನ ಯುವ ಸಮುದಾಯವನ್ನು ಈ ಪರೀಕ್ಷೆಗಳಿಗೆ ಒಳಪಡಿಸುವ ಅಗತ್ಯವಿದೆ ಎಂಬುದು ತಜ್ಞರ ಖಚಿತ ಅಭಿಪ್ರಾಯವಾಗಿದ್ದು ಪರಿಸ್ಥಿತಿಯನ್ನು ಈಗಲೇ ನಿಭಾಯಿಸದಿದ್ದಲ್ಲಿ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟಬುತ್ತಿ ಎಂಬ ಎಚ್ಚರಿಕೆ ನೀಡುವುದನ್ನೂ ಸಹ ಮರೆಯುವುದಿಲ್ಲ.

ಬಾಲ್ಯದ ರಕ್ತದೊತ್ತಡ ಭಾರತದಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು ಇದೊಂದು ಅಪ್ರಕಟಿತ ಕಾಯಿಲೆಯಾಗಿ ಹಬ್ಬುತ್ತಲೇ ಇದೆ. ಮಕ್ಕಳಲ್ಲಿ ಅತಿಯಾದ ಸಕ್ಕರೆ, ಉಪ್ಪು ಮತ್ತು ಸಂಸ್ಕರಿಸಿದ ಆಹಾರ ಸೇವನೆ, ಶ್ರಮವಿಲ್ಲದ ಜೀವನಶೈಲಿಯಿಂದ ಬೊಜ್ಜು ಹೆಚ್ಚಾಗಿರುವುದು ಬಾಲ್ಯದ ಅಧಿಕ ರಕ್ತದೊತ್ತಡಕ್ಕೆ ಪ್ರಮುಖ ಕಾರಣವಾಗಿದೆ. ಆರಂಭಿಕ ಹಂತದಲ್ಲೇ ಇದನ್ನು ಪತ್ತೆ ಮಾಡುವುದರಿಂದ ಭವಿಷ್ಯದ ಪರಿಣಾಮಗಳನ್ನು ತಪ್ಪಿಸಲು ಸಾಧ್ಯ.

ಬೊಜ್ಜಿನ ಸಮಸ್ಯೆ ಮತ್ತು ವಂಶಪಾರಂಪರಿಕವಾಗಿದ್ದ ಪ್ರಕರಣಗಳಲ್ಲಿ ಮಾತ್ರ ಹೆಚ್ಚಿನ ಮುತುವರ್ಜಿ, ಚಿಕಿತ್ಸೆ ಅಗತ್ಯವಿದೆ ಎನ್ನುವ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಮ್)ನ ಸಂಶೋಧಕ ಪ್ರೊ. ರಿಷಿಕೇಶ್, ಮಕ್ಕಳ ಮನರಂಜನೆಗಾಗಿರುವ ಕಿಡ್ಸ್ ಟಿವಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಬಿತ್ತರಿಸಲು ಕೇಂದ್ರ ಸರ್ಕಾರ ಆಲೋಚಿಸುತ್ತಿದೆ ಎಂದಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, “ಮಕ್ಕಳಲ್ಲಿ ಜಾಗೃತಿ ಮೂಡಿಸಿ ಭವಿಷ್ಯದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಈಡಾಗದಂತೆ ತಡೆಯುವ ನಿಟ್ಟಿನಲ್ಲಿ ನಾವು ಜೀವನಶೈಲಿ ಮತ್ತು ಆಹಾರ ಪದ್ಧತಿಗಳು ಆರೋಗ್ಯದ ಮೇಲೆ ಬೀರುವ ಗಂಭೀರ ಪರಿಣಾಮಗಳ ಕುರಿತ ಪಠ್ಯವನ್ನು ಪಠ್ಯಕ್ರಮದಲ್ಲಿ ಸೇರ್ಪಡೆಗೊಳಿಸಲು ಶಿಕ್ಷಣ ಇಲಾಖೆಯೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ” ಎಂದು ಹೇಳಿದ್ದಾರೆ.

ರಕ್ತದೊತ್ತಡ ತಡೆಯುವುದು ಹೇಗೆ?

  • ಅತಿಯಾದ ಸಕ್ಕರೆ ಮತ್ತು ಉಪ್ಪು ಸೇವನೆ ತಡೆಯುವುದು ಬಹಳ ಮುಖ್ಯ
  • ಅತಿಯಾಗಿ ಸಂಸ್ಕರಿಸಿದ ಆಹಾರ ಪದಾರ್ಥ ಸೇವನೆಯನ್ನು ವರ್ಜಿಸುವುದು
  • ಪ್ರತಿನಿತ್ಯ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅವಶ್ಯ
  • ವಿದ್ಯಾರ್ಥಿಗಳಲ್ಲಿ ಅತಿಯಾದ ಶೈಕ್ಷಣಿಕ ಒತ್ತಡವನ್ನು ತಡೆಯುವುದು
  • ಸಮುದಾಯದ ಹಂತದಲ್ಲಿ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವುದು
  • ಆಗಿಂದ್ದಾಗ್ಗೆ ತಪಾಸಣೆಗೆ ಒಳಪಡಿಸುವುದು

NO COMMENTS

LEAVE A REPLY

Please enter your comment!
Please enter your name here

Exit mobile version