ನೇಪಾಳ ದೇಶದ ರಾಜಕೀಯ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. ದೇಶಾದ್ಯಂತ ವ್ಯಾಪಿಸಿದ ಭ್ರಷ್ಟಾಚಾರದ ವಿರುದ್ಧದ ಆಕ್ರೋಶದ ಅಲೆ. ಕಳೆದ ಎರಡು ದಿನಗಳಿಂದ ಕಠ್ಮಂಡು ಸೇರಿದಂತೆ ವಿವಿಧ ಭಾಗಗಳಲ್ಲಿ ಯುವಕರು ನಡೆಸಿದ ಬೃಹತ್ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿವೆ.
ಈ ಘಟನೆಗಳಲ್ಲಿ 25 ಮಂದಿ ಮೃತಪಟ್ಟಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ. ಈ ಹಿಂಸಾತ್ಮಕ ಘಟನೆಗಳ ನಡುವೆಯೇ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಮಂಗಳವಾರ ಮಧ್ಯಾಹ್ನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಶರ್ಮಾ ರಾಜೀನಾಮೆ ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು. ‘ಜನ್ ಝಡ್’ ನೇತೃತ್ವದ ಪ್ರತಿಭಟನೆಗಳು ದೇಶಾದ್ಯಂತ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದ್ದು, ಸದ್ಯ ನೇಪಾಳದ ರಾಜಕೀಯದಲ್ಲಿ ಭಾರೀ ಅನಿಶ್ಚಿತತೆ ಮನೆ ಮಾಡಿದೆ.
ಪ್ರಧಾನಮಂತ್ರಿ ರಾಜೀನಾಮೆ ನೀಡಿದರೆ ಸರ್ಕಾರ ಬೀಳುವದಿಲ್ಲ. ನೇಪಾಳದ ರಾಜಕೀಯ ವ್ಯವಸ್ಥೆ ಆ ಮಾದರಿಯಲ್ಲಿದೆ. ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದರಿಂದ ಸಂಪೂರ್ಣ ಸರ್ಕಾರ ಪತನಗೊಳ್ಳಲಿದೆ ಎಂಬುದಲ್ಲ, ಹೊಸ ಪ್ರಧಾನಿ ಆಯ್ಕೆ ಮಾಡಬಹುದು.
ನೇಪಾಳದಲ್ಲಿ ಪ್ರಧಾನಮಂತ್ರಿಯು ಕಾರ್ಯನಿರ್ವಾಹಕ ಮುಖ್ಯಸ್ಥರಾಗಿದ್ದರೆ, ರಾಷ್ಟ್ರಪತಿಯವರು ಸರ್ಕಾರದ ಮುಖ್ಯಸ್ಥರಾಗಿರುತ್ತಾರೆ. ಹೀಗಾಗಿ, ಪ್ರಧಾನಿಯ ರಾಜೀನಾಮೆಯು ಹೊಸ ಪ್ರಧಾನಿಯ ಆಯ್ಕೆಗೆ ದಾರಿ ಮಾಡಿಕೊಡುತ್ತದೆ ಹೊರತು, ಸರ್ಕಾರವನ್ನು ಸಂಪೂರ್ಣವಾಗಿ ಅಸ್ಥಿರಗೊಳಿಸುವುದಿಲ್ಲ.
ರಾಜೀನಾಮೆಗೆ ಮುನ್ನ ಬೆಳವಣಿಗೆ: ಶರ್ಮಾ ರಾಜೀನಾಮೆಗೆ ಮುನ್ನ ನಡೆದ ಪ್ರಮುಖ ಬೆಳವಣಿಗೆ ಸೇನಾ ಮುಖ್ಯಸ್ಥ ಜನರಲ್ ಅಶೋಕ್ ರಾಜ್ ಸಿಗ್ನಲ್ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಭೇಟಿ ಮಾಡಿ ತಮ್ಮ ಸ್ಥಾನದಿಂದ ಕೆಳಗಿಳಿಯುವಂತೆ ಕೇಳಿಕೊಂಡಿದ್ದರು.
ವರದಿಗಳ ಪ್ರಕಾರ, ಓಲಿ ಸೇನಾ ಮುಖ್ಯಸ್ಥರೊಂದಿಗೆ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದು, ದೇಶದಲ್ಲಿ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಸೇನೆ ವಹಿಸಿಕೊಳ್ಳುವಂತೆ ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಜನರಲ್ ಸಿಗ್ನಲ್, ಓಲಿ ಅಧಿಕಾರವನ್ನು ತ್ಯಜಿಸಿದರೆ ಮಾತ್ರ ಸೇನೆಯು ದೇಶವನ್ನು ಸ್ಥಿರಗೊಳಿಸಲು ಸಾಧ್ಯ ಎಂದು ಸ್ಪಷ್ಟಪಡಿಸಿದ್ದರು.
ನೇಪಾಳದಲ್ಲಿ ದಿಢೀರ್ ದಂಗೆಗೆ ಕಾರಣವೇನು? ಭಾರತದ ನೆರೆಯ ರಾಷ್ಟ್ರ ನೇಪಾಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು. ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಜನರು ಬೀದಿಗಳಿದು ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ದೃಶ್ಯಗಳನ್ನು ಗಮನಿಸಿದರೆ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿ ಪೊಲೀಸರ ಗುಂಡೇಟಿಗೆ ಬಲಿಯಾಗುತ್ತಿರುವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಜೆನ್‌ಝಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪ್ರಧಾನಿ ಕೆ.ಪಿ.ಶರ್ಮಾ ಒಲಿ ನೇತೃತ್ವದ ಸರ್ಕಾರದ ನೇಪಾಳದ ಪ್ರಮುಖ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿತ್ತು. ಅಸಲಿಗೆ ಸರ್ಕಾರದ ವಿರುದ್ಧ ಜನರು ಬೀದಿಗಳಿಯಲು ಕಾರಣವೇನು? ಅವರ ಬೇಡಿಕೆಗಳೇನು? ಸರ್ಕಾರ ಹೇಳುತ್ತಿರುವುದೇನು ಎಂಬುದರ ಮಾಹಿತಿ ಇಲ್ಲಿದೆ.
ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಿದ್ದೇ ಪ್ರತಿಭಟನೆಗೆ ಕಾರಣ: ಇತ್ತಿಚೆಗೆ ನೋಂದಣಿ ಮಾಡಿಕೊಳ್ಳದ 26 ಸೋಷಿಯಲ್ ಮೀಡಿಯಾಗಳನ್ನು ನೇಪಾಳ ಸರ್ಕಾರ ಬ್ಯಾನ್ ಮಾಡಿತ್ತು. ಇದಾದ ಬಳಿಕ ಸರ್ಕಾರದ ಆದೇಶದನ್ವಯ ಸಾಮಾಜಿಕ ಜಾಲತಾಣಗಳ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಇದು ಸಹಜವಾಗಿಯೇ ಹೊಸ ಪೀಳಿಗೆಯ ಜನರಲ್ಲಿ ಸಿಟ್ಟು ತರಿಸಿದೆ. ಇದರಿಂದ ಜೆನ್‌ಝಿತಲೆಮಾರಿನ ಯುವಕರು ಬೀದಿಗಳಿದಿದ್ದಾರೆ.
ಜೆನ್‌ಝಿಗಳ ಬೇಡಿಕೆ ಏನು? ಸುದ್ದಿಸಂಸ್ಥೆಯ ವರದಿಯೊಂದರ ಪ್ರಕಾರ, ನೇಪಾಳದಲ್ಲಿ 13 ಲಕ್ಷ ಜನರು ಫೇಸ್ಟುಕ್ ಮತ್ತು 3 ಲಕ್ಷಕ್ಕೂ ಹೆಚ್ಚು ಜನರು ಇನ್ನಾ ಗ್ರಾಮ್‌ನ್ನು ಬಳಸುತ್ತಾರೆ. ಹೀಗಿದ್ದಾಗ ಸಾಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ ಹೇರುವ ಮೂಲಕ ಸರ್ಕಾರ ಜನರನ್ನು ಕೆರಳಿಸಿದೆ. ಕೂಡಲೇ ಸೋಷಿಯಲ್ ಮೀಡಿಯಾಗಳ ಬ್ಯಾನ್ ಹಿಂಪಡೆಯಬೇಕು ಎಂದು ಜೆನ್‌ಝಿ ಗುಂಪು ಬೇಡಿಕೆಯಿಟ್ಟಿದೆ. ಅಲ್ಲದೇ ಕೇವಲ ಸೋಷಿಯಲ್ ಮೀಡಿಯಾಕ್ಕಾಗಿ ಪ್ರತಿಭಟಿಸುತ್ತಿಲ್ಲ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದು ಬದಲಾಗಬೇಕು ಎಂದೂ ಆಗ್ರಹಿಸಿದೆ.
ಸರ್ಕಾರ ಹೇಳುತ್ತಿರುವುದು ಏನು? ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿರುವ ಸಾಮಾಜಿಕ ಜಾಲತಾಣಗಳು ನೇಪಾಳದಲ್ಲಿ ನೊಂದಾಯಿಸಿಕೊಳ್ಳಬೇಕು ಹಾಗೂ ಸ್ಥಳಿಯವಾಗಿ ಕುಂದುಕೊರತೆ ನೋಡಿಕಕೊಳ್ಳಲು ಅಧಿಕಾರಿಗಳನ್ನು ನೇಮಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದಾಗ್ಯೂ ಸಂಸ್ಥೆಗಳು ತಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲವಾಗಿವೆ. ಹೀಗಾಗಿ 26 ಸಾಮಾಜಿಕ ಜಾಲತಾಣಗಳನ್ನು ಬ್ಯಾನ್ ಮಾಡಲಾಗಿದೆ. ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತದೆ. ಆದರೆ ದೇಶದ ಭದ್ರತೆ ಹಾಗೂ ಸಾರ್ವಭೌಮತ್ವದ ದೃಷ್ಟಿಯಿಂದ ಬ್ಯಾನ್ ಮಾಡಲಾಗಿದೆ ಎಂದು ಸರ್ಕಾರ ಅಧಿಕೃತವಾಗಿ ತಿಳಿಸಿದೆ.