ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮಳೆ ತೀವ್ರತೆಯ ಪರಿಣಾಮವಾಗಿ ಹಲವು ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದ್ದು, ರಸ್ತೆ, ಸೇತುವೆ, ಮನೆಮಠಗಳು ಹಾನಿಗೊಳಗಾಗಿವೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿರುವ ಈ ಸಂಕಷ್ಟದ ಪರಿಸ್ಥಿತಿಯನ್ನು ನೇರವಾಗಿ ಪರಿಶೀಲಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ವೈಮಾನಿಕ ಸಮೀಕ್ಷೆ ನಡೆಸಿದರು.
ವಿಮಾನದಿಂದಲೇ ಶಿಮ್ಲಾ, ಮಣಾಲಿ, ಕಿನ್ನೌರ್ ಸೇರಿದಂತೆ ಹಲವು ಜಿಲ್ಲೆಗಳ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿದ ಪ್ರಧಾನಿ, ಅಲ್ಲಿನ ಸದ್ಯದ ಸ್ಥಿತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಂಡೆಗಳು ಉರುಳಿ ರಸ್ತೆಗಳು ಅಸ್ತವ್ಯಸ್ತವಾಗಿರುವುದರಿಂದ ರಾಷ್ಟ್ರೀಯ ಹೆದ್ದಾರಿಗಳ ಸಂಚಾರ ಸಂಪೂರ್ಣ ಅಡ್ಡಿಯಾಗಿದೆ. ಶಿಮ್ಲಾ–ಚಂಡೀಗಢ ಸಂಪರ್ಕ ರಸ್ತೆ ಸೇರಿದಂತೆ ಹಲವು ಮುಖ್ಯ ಮಾರ್ಗಗಳು ಬಂದ್ ಆಗಿರುವುದರಿಂದ ಸಾಮಾನ್ಯರಿಗೆ ತೀವ್ರ ಸಂಕಷ್ಟ ಉಂಟಾಗಿದೆ.
ರಾಜ್ಯದ ಮುಖ್ಯಮಂತ್ರಿಯವರೊಂದಿಗೆ ಮಾತುಕತೆ ನಡೆಸಿದ ಪ್ರಧಾನಿ, ರಕ್ಷಣಾ ಪಡೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಕಾರ್ಯಾಚರಣೆಗಳನ್ನು ತ್ವರಿತಗೊಳಿಸಲು ಸೂಚಿಸಿದರು. ಈಗಾಗಲೇ ಅನೇಕ ಗ್ರಾಮಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಜನರನ್ನು ರಕ್ಷಿಸಲು ಸೇನೆ ಹಾಗೂ ವಾಯುಪಡೆ ನಿಯೋಜಿಸಲಾಗಿದೆ. ಆಹಾರ, ಕುಡಿಯುವ ನೀರು ಮತ್ತು ತುರ್ತು ವೈದ್ಯಕೀಯ ನೆರವು ಒದಗಿಸಲು ಕೇಂದ್ರ ಸರ್ಕಾರದಿಂದ ವಿಶೇಷ ತಂಡಗಳನ್ನು ಕಳುಹಿಸಲಾಗುತ್ತಿದೆ.
ಪ್ರಧಾನಿ ಮೋದಿ ಅವರು ಭೂಕುಸಿತದಿಂದಾಗಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಾಂತ್ವನ ವ್ಯಕ್ತಪಡಿಸಿ, ತುರ್ತು ಪರಿಹಾರ ಹಾಗೂ ಪುನರ್ವಸತಿ ಕಾರ್ಯಗಳಿಗೆ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಭೂಕುಸಿತದಿಂದಾಗಿ ಹಿಮಾಚಲ ಪ್ರದೇಶದಲ್ಲಿ ಕಳೆದ ಕೆಲ ದಿನಗಳಲ್ಲಿ ಡಜನ್‌ಗಟ್ಟಲೆ ಮನೆಗಳು ಜಮೀನೊಡನೆ ಒಗೆದಿದ್ದು, ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ. ರಾಜ್ಯ ಸರ್ಕಾರ ಕೇಂದ್ರದೊಂದಿಗೆ ಸಮನ್ವಯ ಸಾಧಿಸಿ ಪುನರ್‌ನಿರ್ಮಾಣ ಮತ್ತು ಪುನರ್ವಸತಿ ಕಾರ್ಯವನ್ನು ಕೈಗೊಳ್ಳಲು ಯೋಜನೆ ರೂಪಿಸುತ್ತಿದೆ.
ಪ್ರಧಾನಿ ನರೆಂದ್ರ ಮೋದಿ ಪಂಜಾಬ್ ರಾಜ್ಯಕ್ಕೂ ಭೇಟಿ ನೀಡಲಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.