ಕಾಬೂಲ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಗಡಿ ಪ್ರದೇಶದಲ್ಲಿ ಸಂಘರ್ಷ ತೀವ್ರಗೊಂಡಿದ್ದು, ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ ಅಫ್ಘಾನಿಸ್ತಾನದ ಮೂವರು ಸ್ಥಳೀಯ ಕ್ರಿಕೆಟರ್‌ಗಳು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ.
ಪಾಕಿಸ್ತಾನದ ವಿಮಾನ ದಾಳಿ ಅಫ್ಘಾನಿಸ್ತಾನದ ಪೂರ್ವ ಪಕ್ತಿಕಾ ಪ್ರಾಂತ್ಯದ ಉರ್ಗುನ್ ಸಮೀಪದ ಪ್ರದೇಶದಲ್ಲಿ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸ್ಥಳೀಯ ಮಟ್ಟದ ಕ್ರಿಕೆಟ್ ಕ್ಲಬ್‌ನ ಯುವ ಆಟಗಾರರು ಸೌಹಾರ್ದ ಪಂದ್ಯದಲ್ಲಿ ಭಾಗವಹಿಸಲು ಉರ್ಗುನ್‌ನಿಂದ ಶರಾನಾ ಕಡೆಗೆ ಪ್ರಯಾಣಿಸುತ್ತಿದ್ದಾಗ ಈ ದಾಳಿ ನಡೆದಿದ್ದು, ಆ ವೇಳೆ ಮೂವರು ಕ್ರಿಕೆಟರ್‌ಗಳು ಹಾಗೂ ಐವರು ನಾಗರಿಕರು ಮೃತಪಟ್ಟಿದ್ದಾರೆ.
ಮೃತರನ್ನು ಕಬೀರ್, ಸಿಬ್ತುಲ್ಲಾ ಮತ್ತು ಹರೂನ್ ಎಂದು ಗುರುತಿಸಲಾಗಿದೆ. ಇವರ ಜೊತೆ ಇನ್ನೂ ಕೆಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ.
ಅಫ್ಘಾನಿಸ್ತಾನದ ಕ್ರಿಕೆಟ್ ಮಂಡಳಿ (ACB) ಸಾಮಾಜಿಕ ಜಾಲತಾಣದಲ್ಲಿ ಅಧಿಕೃತ ಪ್ರಕಟಣೆ ನೀಡಿದ್ದು, “ಸ್ಥಳೀಯ ಕ್ರಿಕೆಟ್ ಸಮುದಾಯದ ಪ್ರತಿಭಾವಂತ ಯುವ ಆಟಗಾರರನ್ನು ಕಳೆದುಕೊಂಡಿದ್ದೇವೆ. ಇದು ನಮ್ಮ ಕ್ರಿಕೆಟ್ ಕುಟುಂಬಕ್ಕೆ ದೊಡ್ಡ ನಷ್ಟ” ಎಂದು ಶೋಕ ವ್ಯಕ್ತಪಡಿಸಿದೆ.
ಈ ಘಟನೆ ಅಫ್ಘಾನಿಸ್ತಾನದಲ್ಲಿ ಭಾರೀ ಆಕ್ರೋಶ ಉಂಟುಮಾಡಿದೆ. ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟಿಗರು ಸಹ ಈ ದಾಳಿಯನ್ನು ಖಂಡಿಸಿದ್ದಾರೆ. ವಿಶೇಷವಾಗಿ ಅಫ್ಘಾನ್ ಕ್ರಿಕೆಟ್ ತಾರೆ ರಶೀದ್ ಖಾನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿ,
“ಕ್ರೀಡೆ ಎಂದರೆ ಸ್ನೇಹದ ಸಂಕೇತ — ಆದರೆ ಇಲ್ಲಿ ನಿರಪರಾಧ ಆಟಗಾರರನ್ನು ಹತ್ಯೆ ಮಾಡಲಾಗಿದೆ. ಇದು ಮಾನವೀಯತೆಯ ಮೇಲಿನ ದಾಳಿ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಗಡಿ ಪ್ರದೇಶದಲ್ಲಿ ಇತ್ತೀಚೆಗೆ ತೀವ್ರ ಸಂಘರ್ಷಗಳು, ವೈಮಾನಿಕ ದಾಳಿ ಹಾಗೂ ಶಸ್ತ್ರಸಜ್ಜಿತ ಘರ್ಷಣೆಗಳು ಹೆಚ್ಚಾಗಿವೆ. ಇವು ಎರಡೂ ದೇಶಗಳ ನಡುವಿನ ರಾಜಕೀಯ ಹಾಗೂ ಭದ್ರತಾ ಬಿಕ್ಕಟ್ಟಿಗೆ ಮತ್ತಷ್ಟು ತೀವ್ರತೆಯನ್ನು ತಂದಿವೆ.
ಅಫ್ಘಾನಿಸ್ತಾನದ ಕ್ರಿಕೆಟ್ ಮಂಡಳಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಈ ಘಟನೆಯ ಬಗ್ಗೆ ಅಧಿಕೃತ ವರದಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.