ಚೆನ್ನೈ: ಮೊದಲ ಹೈಡ್ರೋಜನ್ ಚಾಲಿತ ಕೋಚ್‍ಅನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭಾರತವು ಪ್ರಸ್ತುತ 1,200 ಹೆಚ್‌ಪಿ ಹೈಡ್ರೋಜನ್ ಚಾಲಿತ ರೈಲನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಭಾರತವನ್ನು ಹೈಡ್ರೋಜನ್ ಚಾಲಿತ ರೈಲು ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ಅಗ್ರ ಸ್ಥಾನ ಕೊಂಡೊಯ್ಯುವ ಮೊದಲ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.
ಹಸಿರು ರೈಲು ನಾವೀನ್ಯತೆಗೆ ಒತ್ತು ನೀಡುವ ಉದ್ದೇಶದಿಂದ ಮೊದಲ ಹೈಡ್ರೋಜನ್ ಚಾಲಿತ ಕೋಚ್ ಅನ್ನು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಇಂದು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಈ ಮೂಲಕ ಹೈಡ್ರೋಜನ್ ಬಳಕೆಯ ರೈಲು ಸಾರಿಗೆಯ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಪ್ರವೇಶ ಮಾಡಿದೆ.
“ಮೊದಲ ಹೈಡ್ರೋಜನ್ ಚಾಲಿತ ಕೋಚ್ (ಡ್ರೈವಿಂಗ್ ಪವರ್ ಕಾರ್) ಅನ್ನು ಚೆನ್ನೈನ ಐಸಿಎಫ್‌ನಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಭಾರತವು 1,200 ಎಚ್‌ಪಿ ಹೈಡ್ರೋಜನ್ ರೈಲನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಭಾರತವನ್ನು ಹೈಡ್ರೋಜನ್ ಚಾಲಿತ ರೈಲು ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರಿಸುತ್ತದೆ” ಎಂದು ಅಶ್ವಿನಿ ವೈಷ್ಣವ್ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪೋಸ್ಟ್‌ನಲ್ಲಿ ರೈಲ್ವೆ ಪ್ಯಾಸೆಂಜರ್ ಕೋಚ್‌ಗಳನ್ನು ತಯಾರಿಸುವ ಪ್ರಮುಖ ರೈಲು ಕೋಚ್ ಉತ್ಪಾದನಾ ಘಟಕವಾದ ಐಸಿಎಫ್‌ನಲ್ಲಿ ಪರೀಕ್ಷಾರ್ಥವಾಗಿ ನಡೆಸಿದ ರೈಲು ಸಂಚಾರದ ದೃಶ್ಯವನ್ನು ಹಂಚಿಕೊಂಡಿದ್ದಾರೆ.
ಹೈಡ್ರೋಜನ್ ಚಾಲಿತ ರೈಲುಗಳನ್ನು ವಿಶ್ವದ ನಾಲ್ಕು ದೇಶಗಳು ಹೊಂದಿವೆ. ಜರ್ಮನಿ, ಫ್ರಾನ್ಸ್, ಸ್ವೀಡನ್ ಮತ್ತು ಚೀನಾ ದೇಶಗಳಲ್ಲಿ ಈ ರೈಲು ಸಂಚರಿಸುತ್ತಿವೆ. ಸದ್ಯ ಭಾರತದ ಹೈಡ್ರೋಜನ್ ಚಾಲಿತ ರೈಲುಗಳನ್ನು ಸ್ಥಳೀಯ ಪ್ರತಿಭೆಗಳನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾಗಿದೆ.
ಸದ್ಯ ಭಾರತ ಉತ್ಪಾದಿಸುವ ಎಂಜಿನ್ 1,200 ಅಶ್ವಶಕ್ತಿಯನ್ನು ಹೊಂದಿವೆ ಎಂದು ಹೇಳಲಾಗಿದೆ. ಇದು ಈ ವರ್ಗದಲ್ಲಿ ಇದುವರೆಗಿನ ಅತ್ಯಧಿಕ ಶಕ್ತಿಯ ಎಂಜಿನ್ ಆಗಿದೆ. ಇತರೆ ದೇಶಗಳಲ್ಲಿ ಹೈಡ್ರೋಜನ್ ಚಾಲಿತ ರೈಲುಗಳನ್ನು 500 ರಿಂದ 600 ಅಶ್ವಶಕ್ತಿಯವರೆಗೆ ಉತ್ಪಾದಿಸುತ್ತವೆ.