ಮ್ಯಾಂಚೆಸ್ಟರ್: ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡಿನ ಜೋ ರೂಟ್ ಐತಿಹಾಸಿಕ ದಾಖಲೆ ಮಾಡಿದ್ದಾರೆ. ಭಾರತ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೂರನೇ ಶತಕ ಗಳಿಸಿದ್ದಲ್ಲದೇ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಟೆಸ್ಟ್ ರನ್ ಗಳಿಕೆಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ ರಾಹುಲ್ ದ್ರಾವಿಡ್, ರಿಕಿ ಪಾಂಟಿಂಗ್ ಅವರನ್ನೇ ಹಿಂದಿಕ್ಕಿದ್ದು, ಈಗ ಸಚಿನ್ ತೆಂಡೂಲ್ಕರ್ ನಂತರದ ಸ್ಥಾನ ಪಡೆದಿದ್ದಾರೆ. ಅಷ್ಟೇ ಅಲ್ಲದೇ, 3ನೇ ಟೆಸ್ಟ್ ಪಂದ್ಯದಲ್ಲಿ ಅತ್ಯಧಿಕ ರನ್‌ಗಳಿಸಿದವರ ಪೈಕಿ ಟಾಪ್ 5ರಲ್ಲಿ ಕಾಣಿಸಿಕೊಂಡ ಜೋ ರೂಟ್, ಈಗ ಒಂದೇ ಪಂದ್ಯದಲ್ಲಿ 4 ಸ್ಥಾನಗಳನ್ನು ದಾಟಿ 2ನೇ ಸ್ಥಾನಕ್ಕೇರಿದ್ದು ನಿಜಕ್ಕೂ ಶ್ಲಾಘನೀಯ.
2ನೇ ದಿನದಾಟದಲ್ಲೇ ಕಣಕ್ಕಿಳಿದಿದ್ದ ಜೋ ರೂಟ್ ಗುರುವಾರದ ದಿನದಂತ್ಯಕ್ಕೆ ಕೇವಲ 11 ರನ್‌ಗಳಿಸಿ ವಿಕೆಟ್ ಉಳಿಸಿಕೊಂಡಿದ್ದರು. ಅದೇ ರೀತಿ ಶುಕ್ರವಾರ ದಿನದಾರಂಭಿಸಿದ ಜೋ ರೂಟ್ ಭಾರತೀಯ ಬೌಲರ್‌ಗಳ ಮೇಲೆ ಸವಾರಿ ನಡೆಸಿದರು. ಆರಂಭದಿಂದಲೇ ವಿಕೆಟ್ ನೀಡದೇ ಸತಾಯಿಸಿದ ರೂಟ್, 99 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ದಿನದಾಟದ 2ನೇ ಸೆಷನ್‌ನಲ್ಲೂ ತನ್ನ ತಾಳ್ಮೆಯ ಬ್ಯಾಟಿಂಗ್ ಮುಂದುವರೆಸಿದ ರೂಟ್ ಚಹಾ ವಿರಾಮಕ್ಕೂ ಮುನ್ನ ತನ್ನ ಟೆಸ್ಟ್ ಕ್ರಿಕೆಟ್‌ನ 38ನೇ ಶತಕವನ್ನೂ ಕೂಡ ಪೂರೈಸಿ ಸಂಭ್ರಮಿಸಿದರು.
3ನೇ ವಿಕೆಟ್‌ಗೆ 144 ರನ್‌ಗಳ ಜೊತೆಯಾಟ ಕಟ್ಟಿದ ಜೋ ರೂಟ್ ನಂತರ ನಾಯಕ ಬೆನ್ ಸ್ಟೋಕ್ಸ್ ಜೊತೆಗೂಡಿ 141 ರನ್‌ಗಳ ಜೊತೆಯಾಟ ಕಟ್ಟುವ ಮೂಲಕ ಇಂಗ್ಲೆಂಡ್ ತಂಡವನ್ನು ಭಾರಿ ಮುನ್ನಡೆಯತ್ತ ಕರೆದೊಯ್ಯುವ ಕೆಲಸ ಮಾಡಿದರು. ಅಂತಿಮವಾಗಿ 248 ಎಸೆತಗಳಲ್ಲಿ 150 ರನ್ ಗಳಿಸಿದ ರೂಟ್, ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು.
ಇಂಗ್ಲೆಂಡ್‌ಗೆ ಮುನ್ನಡೆ: ಒಂದು ಕಡೆ ಜೋ ರೂಟ್ ಶತಕ ಹಾಗೂ ಇಂಗ್ಲೆಂಡ್ ಬ್ಯಾಟರ್‌ಗಳ ಪರಾಕ್ರಮಕ್ಕೆ 3ನೇ ದಿನದಾಟದಲ್ಲೇ ಇಂಗ್ಲೆಂಡ್ 300ಕ್ಕೂ ಹೆಚ್ಚು ರನ್ ಕಲೆ ಹಾಕಿ, 500ರ ಗಡಿಯನ್ನೂ ದಾಟಿದರು. ಇದರಿಂದ ಭಾರತದ ವಿರುದ್ಧ ಭಾರಿ ಮುನ್ನಡೆಯನ್ನೂ ಸಾಧಿಸಿದ್ದು, ಇಂಗ್ಲೆಂಡ್ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿತು.
ಪರದಾಡಿದ ಬೌಲರ್‌ಗಳು: ಓಲ್ಡ್ ಟ್ರಫರ್ಡ್‌ನಲ್ಲಿ ಭಾರತ ಉತ್ತಮ ಮೊತ್ತ ಕಲೆ ಹಾಕಿದರೂ, ಭಾರತೀಯ ಬೌಲರ್‌ಗಳು ಅದನ್ನು ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಅದರಲ್ಲೂ ವೇಗಿಗಳಾದ ಜಸ್‌ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ವಿಕೆಟ್ ಪಡೆಯಲು ಪರದಾಡಿದ್ದಲ್ಲದೇ, ಅಧಿಕ ರನ್‌ಗಳನ್ನು ಹರಿಯಲು ಬಿಟ್ಟರು. ವಾಷಿಂಗ್ಟನ್ ಸುಂದರ್ ಹಾಗೂ ರವೀಂದ್ರ ಜಡೇಜಾಗೆ ತಲಾ 2 ವಿಕೆಟ್ ಸಿಕ್ಕವು.
ಐವರು ಅರ್ಧಶತಕ: ಇಂಗ್ಲೆಂಡ್‌ನ ಮೇಲ್ಪಂಕ್ತಿಯ ಆಟಗಾರರ ಪೈಕಿ ಐವರು 50+ ರನ್ ಗಳಿಸಿದರು. ಈ ಪೈಕಿ ರೂಟ್ 150 ರನ್‌ಗಳಿಸಿದರೆ, ಉಳಿದಂತೆ ಕ್ರಾವ್ಲೆ 84, ಡಿಕೆಟ್ 94, ಓಲ್ಲಿ ಪೋಪ್ 71 ರನ್‌ಗಳಿಸಿದರು. ಬೆನ್ ಸ್ಟೋಕ್ಸ್ 66 ರನ್‌ಗಳಿಸಿ ರಿಟೈರ್ಡ್ ಹರ್ಟ್ ಆದರು.